ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ 1980-90ರ ದಶಕದಲ್ಲಿ ತನ್ನ ಐಟಂ ಸಾಂಗ್ಸ್ ಗಳ ಮೂಲಕವೇ ಚಿತ್ರರಂಗವನ್ನು ಆಳಿದ ತಾರೆ ಶಾಂತ ಕುಮಾರಿ. ಒಂದು ಕಾಲದಲ್ಲಿ ಚಿತ್ರರಸಿಕರ ಮನಸೂರೆಗೊಂಡಿದ್ದ ಶಾಂತ ಈಗೆಲ್ಲಿದ್ದಾರೆ..ಆಕೆಯ ಆರೋಗ್ಯದ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡತೊಡಗಿದ್ದವು..ಅವೆಲ್ಲವೂ ನಿಜವೇ ಎಂಬುದು ಕುತೂಹಲದ ಪ್ರಶ್ನೆಯಾಗಿತ್ತು. ಹೌದು ಇದು ಡಿಸ್ಕೋ ಶಾಂತಿಯ ಕಥೆ.
1965ರಲ್ಲಿ ತಮಿಳುನಾಡಿನಲ್ಲಿ ಜನಿಸಿದ್ದ ಶಾಂತ ಕುಮಾರಿ, ಡಿಸ್ಕೋ ಡ್ಯಾನ್ಸ್ ಮೂಲಕವೇ ಹೆಸರಾಗಿದ್ದರಿಂದ ಈಕೆಯ ಹೆಸರು ಡಿಸ್ಕೋ ಶಾಂತಿ ಎಂಬುದು ಖಾಯಂ ಆಯಿತು. ಡಿಸ್ಕೋ ಶಾಂತಿ ತಮಿಳು ನಟ ಸಿಎಲ್ ಆನಂದನ್ ಅವರ ಪುತ್ರಿ. ಈಕೆ ನಟಿ ಲಲಿತ ಕುಮಾರಿಯ ಸಹೋದರಿ(ಅಕ್ಕ). ಲಲಿತ ಕುಮಾರಿ ನಟ ಪ್ರಕಾಶ್ ರಾಜ್ ಅವರನ್ನು ವಿವಾಹವಾಗಿದ್ದರು. 1996ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ತಮಿಳು, ಮಲಯಾಳಂ, ತೆಲುಗು, ಹಿಂದಿ, ಒರಿಯಾ ಸಿನಿಮಾಗಳಲ್ಲಿ ಡಿಸ್ಕೋ ನಟಿಸಿದ್ದರೂ ಕೂಡಾ ಆಕೆ ಕನ್ನಡದ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿಯೇ ಹೆಚ್ಚು ಚಿರಪರಿಚಿತರಾಗಿದ್ದರು.
1985ರಲ್ಲಿ ಡಿಸ್ಕೋ ಉದಯ್ ಗೀತಂ ಎಂಬ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು. ಹೊಟ್ಟೆಪಾಡಿಗಾಗಿ ಶಾಂತಿ ಸಿನಿಮಾಗಳಲ್ಲಿ ನಟಿಸಿದರೂ ಕೂಡಾ ಹೆಚ್ಚಿನ ಯಶಸ್ಸು ತಂದುಕೊಟ್ಟಿಲ್ಲ. ಬಳಿಕ ಆಕೆ ಆಯ್ದುಕೊಂಡದ್ದು ಐಟಂ ಡ್ಯಾನ್ಸ್…
ಬದುಕಿನ ದಿಕ್ಕೇ ಬದಲಾಯಿತು!
ಹೀಗೆ ಸಿನಿ ಬದುಕಿನಲ್ಲಿ ಕ್ಯಾಬರೆ ಮೂಲಕ ಒಂದು ದಶಕಗಳ ಕಾಲ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆದಾಡಿದ ಹೆಗ್ಗಳಿಕೆ ಡಿಸ್ಕೋ ಶಾಂತಿಯದ್ದು. 1985ರಿಂದ 1996ರವರೆಗೆ ಡಿಸ್ಕೋ ಶಾಂತಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಏತನ್ಮಧ್ಯೆ ಆಂಧ್ರದ ರಾಜಮಂಡ್ರಿಯಲ್ಲಿ ಡಿಸ್ಕೋ ಶಾಂತಿಯ ಲವ್ ಸ್ಟೋರಿ ಆರಂಭವಾಗುತ್ತದೆ…
420 ಹೆಸರಿನ ಸಿನಿಮಾದ ಶೂಟಿಂಗ್ ರಾಜಮಂಡ್ರಿಯಲ್ಲಿ ನಡೆಯುತ್ತಿದ್ದ ವೇಳೆ ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿ ಜತೆ ಈ ಸಿನಿಮಾದ ದೃಶ್ಯವೊಂದರಲ್ಲಿ ನಟಿಸಿದ್ದರು. ಬಳಿಕ ದಾದರ್ ಎಕ್ಸ್ ಪ್ರೆಸ್ ಸಿನಿಮಾದ ಶೂಟಿಂಗ್ ವೇಳೆ ಮತ್ತೆ ಇಬ್ಬರೂ ಭೇಟಿಯಾಗುತ್ತಾರೆ. ಆಗ ಹಿಂದಿಯ ಘಾಯಲ್ ಸಿನಿಮಾದಲ್ಲಿ ಡಿಸ್ಕೋ ನಟನೆ ನೋಡಿದ ಮೇಲೆ ಶ್ರೀಹರಿ ಪ್ರೇಮಪಾಶದಲ್ಲಿ ಬಿದ್ದಿದ್ದರಂತೆ.
90ರ ದಶಕದಲ್ಲಿ ಮೊಬೈಲ್ ಫೋನ್ ಗಳ ಭರಾಟೆ ಇಲ್ಲದ ಕಾಲ, ರಾತ್ರಿ ದೂರವಾಣಿ ಕರೆ ಮಾಡಿ ತಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಶ್ರೀಹರಿ ಹೇಳಿಕೊಂಡಿದ್ದರು. ತದನಂತರ ಚಿರಂಜೀವಿ ಸಹೋದರ ನಾಗಬಾಬು ಅವರನ್ನು ಶ್ರೀಹರಿ ಭೇಟಿಯಾಗಿ ಪ್ರೀತಿಸುತ್ತಿರುವ ವಿಷಯ ತಿಳಿಸಿ, ಅವರ ಮೂಲಕ ಡಿಸ್ಕೋ ಶಾಂತಿಗೆ ವಿಷಯ ಮುಟ್ಟಿಸಿದ್ದರಂತೆ! ಶ್ರೀಹರಿ ನಿಮ್ಮನ್ನು ಪ್ರೀತಿಸುತ್ತಿದ್ದಾರೆ..ಅವರು ನಿಮ್ಮನ್ನು ಮದುವೆಯಾಗಲು ತಯಾರಾಗಿದ್ದಾರೆ ಎಂದು ನಾಗಬಾಬು ಡಿಸ್ಕೋ ಶಾಂತಿ ಬಳಿ ಹೇಳಿದ್ದರಂತೆ. ಆದರೆ ಡಿಸ್ಕೋ ಇದನ್ನು ಜೋಕ್ ಎಂದು ತಿಳಿದಿದ್ದರಂತೆ!
ಆಂಧ್ರದಿಂದ ರೈಲಿನಲ್ಲಿ ಚೆನ್ನೈಗೆ ವಾಪಸ್ ಬರುತ್ತಿದ್ದ ವೇಳೆ, ಶ್ರೀಹರಿ ಅವರು ಡಿಸ್ಕೋ ಶಾಂತಿ ಇದ್ದ ಬೋಗಿಯೊಳಗೆ ಬಂದು, ತನ್ನ ಪ್ರೀತಿಯನ್ನು ನೇರವಾಗಿ ನಿವೇದಿಸಿಕೊಂಡಿದ್ದರಂತೆ. ನನ್ನ ಅದೆಷ್ಟು ಸಾವಿರ ಮಂದಿ ಪ್ರಪೋಸ್ ಮಾಡಿಲ್ಲ..ಅದೇ ಲಿಸ್ಟ್ ಗೆ ಈ ಮನುಷ್ಯನೂ ಸೇರಿದ್ದಾನೆ ಎಂದು ಡಿಸ್ಕೋ ಆಲೋಚಿಸಿದ್ದರಂತೆ. ಶ್ರೀಹರಿ ಮತ್ತೆ, ಮತ್ತೆ ಭಾವುಕರಾಗಿ ಪ್ರೀತಿಯನ್ನು ಹೇಳಿಕೊಂಡ ಮೇಲೆ ಅವರ ಮುಖದಲ್ಲಿ ಪ್ರಾಮಾಣಿಕತೆಯನ್ನು ಗಮನಿಸಿದ್ದೆ. ಆಯ್ತು ನನ್ನ ತಾಯಿ ಜತೆ ಮದುವೆ ವಿಷಯ ಮಾತನಾಡಿ ಎಂದು ಡಿಸ್ಕೋ ತಿಳಿಸಿದ್ದರಂತೆ!
ಅದರಂತೆ ನಟ ಶ್ರೀಹರಿ ಶಾಂತಿ ಅವರ ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮದುವೆ ವಿಚಾರ ಪ್ರಸ್ತಾಪಿಸಿದ್ದರಂತೆ. ಅಂತೂ ಕೊನೆಗೂ ಶಾಂತಿ ತಾಯಿ ಮತ್ತು ಸಂಬಂಧಿಕರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇಬ್ಬರ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬುದು ಶಾಂತಿಯ ತಾಯಿಯ ಆಸೆಯಾಗಿತ್ತಂತೆ, ಆದರೆ ತದ್ವಿರುದ್ಧ ಎಂಬಂತೆ ಜ್ಯೋತಿಷಿಗಳ ಸಲಹೆ ಮೇರೆಗೆ 1996ರಲ್ಲಿ ಚಿಕ್ಕ ದೇವಾಲಯವೊಂದರಲ್ಲಿ ಶ್ರೀಹರಿ ಮತ್ತು ಶಾಂತಿ ಪ್ರೇಮ ವಿವಾಹವಾಗುತ್ತಾರೆ.
ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಪುತ್ರಿ ಜನಿಸಿದ್ದರು. ವಿಧಿ ವಿಪರ್ಯಾಸ ಎಂಬಂತೆ 4 ತಿಂಗಳ ಮಗಳು ಅಕ್ಷರಾ ತೀರಿಕೊಂಡಿದ್ದಳು. ಮದುವೆ ಬಳಿಕ ಡಿಸ್ಕೋ ಶಾಂತಿ ಸಿನಿಮಾ ಬದುಕಿಗೆ ಗುಡ್ ಬೈ ಹೇಳಿದ್ದರು.
ಮಗಳ ಹೆಸರಿನಲ್ಲಿ ಫೌಂಡೇಶನ್:
ಮಗಳ ಸಾವಿನಿಂದ ದಂಪತಿಗಳು ತೀವ್ರ ಶಾಕ್ ಗೆ ಒಳಗಾಗಿದ್ದರು. ಬಳಿಕ ಮಗಳ ನೆನಪಿಗೆ ಅಕ್ಷರ ಫೌಂಡೇಶನ್ ಪ್ರಾರಂಭಿಸಿ, ಅದರ ಮೂಲಕ ಹಳ್ಳಿಗಳನ್ನು ದತ್ತು ತೆಗೆದುಕೊಂಡು ನೀರು ಮತ್ತು ಬಡಮಕ್ಕಳಿಗೆ ಶಿಕ್ಷಣ ಒದಗಿಸುವ ಕೆಲಸದಲ್ಲಿ ತೊಡಗಿದ್ದರು. ದಂಪತಿಗಳು ನಾಲ್ಕು ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದರು.
ಬರಸಿಡಿಲು!
ಡಿಸ್ಕೋ ಬಾಳಿನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂಬ ಹೊತ್ತಿನಲ್ಲೇ 2013ರ ಅಕ್ಟೋಬರ್ 9ರಂದು ಮುಂಬೈನಲ್ಲಿ ಆರ್ ರಾಜ್ ಕುಮಾರ್ ಸಿನಿಮಾ ಶೂಟಿಂಗ್ ನಲ್ಲಿ ಪತಿ ಶ್ರೀಹರಿ ತೊಡಗಿದ್ದಾಗಲೇ ತಲೆಸುತ್ತು ಮತ್ತು ಎದೆನೋವು ಬರುತ್ತಿದೆ ಎಂದು ಹೇಳಿದ್ದರು. ಕೂಡಲೇ ಡಿಸ್ಕೋ ಶಾಂತಿ ಶ್ರೀಹರಿಯನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಹರಿ(48) ವಿಧಿವಶರಾಗಿದ್ದರು. ಇದರಿಂದ ಡಿಸ್ಕೋ ಶಾಂತಿ ಆಘಾತಕ್ಕೊಳಗಾಗಿದ್ದರು.
ತನಗೆ ತನ್ನ ಗಂಡ ಎಲ್ಲವನ್ನೂ ನೀಡಿದ್ದಾರೆ. ನಾನು ಜೀವನದಲ್ಲಿ ಸೆಟಲ್ ಆಗಿದ್ದೇನೆ. ಆದರೆ ನಾನು ಮತ್ತೆ ನಟನೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ ಎಂದಿರುವ ಡಿಸ್ಕೋ ಶಾಂತಿ ಚೆನ್ನೈನಲ್ಲಿ ಇಬ್ಬರು ಪುತ್ರರ ಜತೆ ವಾಸವಾಗಿದ್ದಾರೆ. ಶ್ರೀಹರಿಗೆ ಚಿಕ್ಕ ಮಗ ಅಂದರೆ ತುಂಬಾ ಪ್ರೀತಿಯಂತೆ, ಅದಕ್ಕೆ ಕಾರಣ ಆತ ತಾಯಿ ಥರ ಹೋಲುತ್ತಿರುವುದಕ್ಕಂತೆ. ದೊಡ್ಡ ಮಗನನ್ನು ನಿರ್ದೇಶಕನನ್ನಾಗಿ ಮಾಡಬೇಕು ಹಾಗೂ ಚಿಕ್ಕ ಮಗನನ್ನು ಹೀರೋ ಮಾಡಬೇಕೆಂಬ ಆಸೆ ತೋಡಿಕೊಂಡಿದ್ದರಂತೆ. ಆದರೆ ತನ್ನ ಮಕ್ಕಳು ಸಿನಿಮಾ ರಂಗಕ್ಕೆ ಬರೋದು ಬೇಡ. ಒಬ್ಬ ವೈದ್ಯನಾಗಲಿ ಮತ್ತೊಬ್ಬ ವಕೀಲನಾಗಲಿ ಎಂಬುದು ತನ್ನ ಆಸೆ ಎಂದು ಡಿಸ್ಕೋ ಶಾಂತಿ ಮನದಾಳದ ಆಸೆಯನ್ನು ಬಿಚ್ಚಿಟ್ಟಿದ್ದರು.