ಲಕ್ನೋ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಟ್ವೀಟ್ ಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಸೀತಾಪುರ್ ಪೊಲೀಸ್ ಠಾಣೆಯಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಐದು ದಿನಗಳ ಮಧ್ಯಂತರ ಜಾಮೀನು ನೀಡಿದ ಕೆಲವೇ ಗಂಟೆಯಲ್ಲಿ ಉತ್ತರಪ್ರದೇಶದ ಲಖಿಂಪುರ್ ಖೇರಿ ಕೋರ್ಟ್ ಜುಬೈರ್ ವಿರುದ್ಧ ವಾರಂಟ್ ಹೊರಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉಗ್ರ ಚಟುವಟಿಕೆಗಳಲ್ಲಿ ಬಿಜೆಪಿ ನಾಯಕರಿಗೆ ನಿಕಟ ಸಂಪರ್ಕ: ಉತ್ತಮ್ ಕುಮಾರ್ ರೆಡ್ಡಿ
ಕೋರ್ಟ್ ನಿರ್ದೇಶನದಂತೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮೊಹಮ್ಮದ್ ಜುಬೈರ್ ವಿರುದ್ಧ ಲಖಿಂಪುರ್ ಖೇರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ನಿಟ್ಟಿನಲ್ಲಿ ಶುಕ್ರವಾರ (ಜುಲೈ 08) ಲಖಿಂಪುರ್ ಖೇರಿ ಪೊಲೀಸರು ಸ್ಥಳೀಯ ಕೋರ್ಟ್ ಮೆಟ್ಟಿಲೇರಿದ್ದು, ಜುಬೈರ್ ವಿರುದ್ಧ ವಾರಂಟ್ ಜಾರಿಗೊಳಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಜುಲೈ 11ರೊಳಗೆ ಜುಬೈರ್ ಕೋರ್ಟ್ ಗೆ ಹಾಜರಾಗುವಂತೆ ವಾರಂಟ್ ಜಾರಿಗೊಳಿಸಿದೆ. ಜುಬೈರ್ ಸೀತಾಪುರ್ ಜೈಲಿನಲ್ಲಿದ್ದು, ಇಲ್ಲಿನ ಜೈಲು ಅಧಿಕಾರಿಗೆ ವಾರಂಟ್ ನೋಟಿಸ್ ನೀಡಲಾಗಿದೆ ಎಂದು ವರದಿ ಹೇಳಿದೆ.
ಲಖಿಂಪುರ್ ಖೇರಿ ಕೋರ್ಟ್ ಜುಬೈರ್ ವಿರುದ್ಧ ವಾರಂಟ್ ಹೊರಡಿಸಿದ್ದು, ಈತನನ್ನು ಕೋರ್ಟ್ ಗೆ ಹಾಜರುಪಡಿಸುವುದು ಜೈಲಿನ ಅಧಿಕಾರಿಗಳ ಹೊಣೆಯಾಗಿದೆ. ಟ್ವೀಟರ್ ನಲ್ಲಿ ಸುಳ್ಳು ಸುದ್ದಿಯನ್ನು ಅಪ್ ಡೇಟ್ ಮಾಡುವ ಮೂಲಕ ಜುಬೈರ್ ಕೋಮು ಸಾಮರಸ್ಯ ಕೆಡಿಸುತ್ತಿರುವುದಾಗಿ ಆರೋಪಿಸಿ ಅಶೀಶ್ ಕುಮಾರ್ ಕಟಿಯಾರ್ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಿದ್ದರು ಎಂದು ವರದಿ ತಿಳಿಸಿದೆ.