Advertisement
ಸ್ಮಿತಾ ಸಂದರ್ಶನಕ್ಕೆ ಬಂದಿದ್ದಳು. ವಯಸ್ಸು ಮೂವತ್ತರ ಆಸುಪಾಸು. ಎಂಬಿಎ ಆಗಿತ್ತು. ಮಾರ್ಕೆಟಿಂಗ್ ವಿಭಾಗಕ್ಕೆ ಆಯ್ಕೆಯಾಗಿದ್ದಳು. ಚುರುಕು ಕಣಳು. ಏನಾದರೂ ಜವಾಬ್ದಾರಿ ಕೊಡಿ ಮಾಡಿ ತೋರಿಸುತ್ತೇನೆಂಬ ಆತ್ಮವಿಶ್ವಾಸದಿಂದ ಕೂಡಿದ ಮುಖ. ಸಂದರ್ಶನದ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ ಕಂಪೆನಿಯ ಎಂಡಿ ರಾಹುಲ್ ಲೋಕಾಭಿರಾಮವಾಗಿ ಮಾತನಾಡುತ್ತ , “ನಿಮ್ಮ ಫ್ಯಾಮಿಲಿಯ ಬಗ್ಗೆ ಹೇಳಿ’ ಎಂದರು. “ಐ ಆಮ್ ಸಿಂಗಲ್ ಲಿವಿಂಗ್, ಮಗ ಇದ್ದಾನೆ ಫಿಫ್ ಕ್ಲಾಸಿನಲ್ಲಿ ಓದುತ್ತಿದ್ದಾನೆ’ ಎಂದಿದ್ದಳು ನಿರ್ಲಿಪ್ತವಾಗಿ. ಅವನು ಅರೆಕ್ಷಣ ಅವಳ ಮುಖ ನೋಡಿದ್ದ. “ಸಿಂಗಲ್ ಲಿವಿಂಗ್ ಅಂದ್ರೆ ಹೇಗೆ?’ ಎಂದು ಕೇಳಬೇಕೆಂದಿದ್ದವನು ಶಿಷ್ಟಾಚಾರವಲ್ಲವೆಂದು ಸುಮ್ಮನಾದ. ಅವಳ ಬೋಲ್ಡ್‌ನೆಸ್ ಅವನಿಗೆ ಮೆಚ್ಚುಗೆಯಾಗಿತ್ತು. ಅವಳ ದನಿಯಲ್ಲಿ ಯಾವ ಅಳುಕೂ ಇರಲಿಲ್ಲ. ತನ್ನ ಸೆಕ್ರೆಟರಿಗೆ ಫೋನು ಮಾಡಿ ಆಫರ್ ಲೆಟರ್ ತರಲು ಹೇಳಿದ್ದ. ಮಿಕ್ಕ ಪ್ರಕ್ರಿಯೆಗಳೆಲ್ಲ ಮುಗಿದು ಮುಂದಿನ ವಾರ ಜಾಯ್ನ ಆಗುತ್ತೇನೆಂದು ಹೇಳಿ ಶೇಕ್ ಹ್ಯಾಂಡ್ ಕೊಟ್ಟು ಹೊರಟಿದ್ದಳು ಅವಳು.
ದಾರಿಯೇನೂ ಸುಲಭವಾಗಿರಲಿಲ್ಲ. ಎಲ್ಲಿ ಹೋದರೂ ಗಂಡ ಎಲ್ಲಿ? ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಕುಗ್ಗಿ ಹೋಗುತ್ತಿದ್ದಳು. ಎರಡು-ಮೂರು ಸ್ಕೂಲಿನಲ್ಲಿ ಅರ್ಹತೆಯಿದ್ದರೂ ಇವಳು ಗಂಡ ಬಿಟ್ಟವಳೆಂದು ಕೆಲಸ ಕೊಟ್ಟಿರಲಿಲ್ಲ. ಕೊನೆಗೆ ಒಂದು ಕಾನ್ವೆಂಟಿನಲ್ಲಿ ಇವಳ ಇಂಗ್ಲಿಷ್ ಭಾಷೆಯ ಮೇಲಿನ ಪ್ರಬುದ್ಧತೆಯನ್ನು ನೋಡಿ ಮರುಮಾತನಾಡದೆ ಕೆಲಸ ಕೊಟ್ಟಿದ್ದರು. ಅದಕ್ಕೂ ರಾಹುಲನ ಅಜ್ಜಿ ರಂಪಾಟ ಮಾಡಿದ್ದರು. ಅದು ಹೇಳಿಕೇಳಿ ಕ್ರಿಶ್ಚಿಯನ್ ಸ್ಕೂಲು ಅಲ್ಲೇ ಸೇರಬೇಕಾ? ಬೇರೆ ಯಾವುದೂ ಸಿಗಲಿಲ್ಲವಾ? ಎಂದು ಮೂತಿ ತಿವಿದಿದ್ದರು. ಅವರಿಗೆ ಸಮಾಜದಲ್ಲಿ ತುಂಬಾ ಪ್ರತಿಷ್ಠೆ ಇರುವ ಸಂಸಾರ ನಮ್ಮದು, ಮಗಳು ಹೀಗೆ ಮಾಡಿ ತಮ್ಮ ಪ್ರತಿಷ್ಠೆಗೆ ಕುಂದು ತಂದಳಲ್ಲಾ ಎಂಬ ಕೋಪ. ಸರೀಕರು ನೋಡಿದರೆ ತಮ್ಮ ಬಗ್ಗೆ ಏನೆಂದು ತಿಳಿದುಕೊಳ್ತಾರೆ ಎಂಬ ಕೀಳರಿಮೆ.
Related Articles
ಆಶಾ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಮಕ್ಕಳಿಬ್ಬರೂ ಹೈಸ್ಕೂಲಿಗೆ ಬಂದ ಕೂಡಲೇ ಮನೆಯಲ್ಲಿ ಮಕ್ಕಳಿಗೆ ಓದಿಗೆ ತೊಂದರೆಯಾಗುತ್ತದೆ ಎಂಬ ನೆಪ ಹೇಳಿ ಚಿಕ್ಕ ಮನೆಯೊಂದನ್ನು ಬಾಡಿಗೆಗೆ ಹಿಡಿದು ಬೇರೆ ಸಂಸಾರ ಪ್ರಾರಂಭಿಸಿಯೇ ಬಿಟ್ಟಿದ್ದಳು. ಅಮ್ಮ ಏನೇನು ಹಾರಾಡಿದರೂ ಜಪ್ಪೆನ್ನಲಿಲ್ಲ. ಮಕ್ಕಳಿಬ್ಬರನ್ನೂ ಚೆನ್ನಾಗಿ ಓದಿಸಿದ್ದಳು. ಅವರು ಓದಿ ತಮ್ಮ ಕಾಲಮೇಲೆ ನಿಂತ ಮೇಲೆ ಅವರೇ ಮೆಚ್ಚಿದ ಹುಡುಗರಿಗೆ ಕೊಟ್ಟು ಮದುವೆ ಮಾಡಿ ಈಗ ಮೊಮ್ಮಕ್ಕಳನ್ನಾಡಿಸುತ್ತಾ ತನ್ನದೇ ವಯಸ್ಸಿನವರೊಡನೆ ಮಹಿಳಾ ಸಮಾಜ ಅದೂ ಇದೂ ಎಂದು ಕೈಲಾದ ಸಮಾಜಸೇವೆ ಮಾಡುತ್ತ ನೆಮ್ಮದಿಯಾಗಿದ್ದಾಳೆ. ಅತ್ತೆಯ ಬದುಕು ರಾಹುಲನಿಗೆ ಯಾವತ್ತೂ ಹೆಮ್ಮೆ ಸ್ಫೂರ್ತಿ. ಯೋಚಿಸುತ್ತ ರಾಹುಲ್ ನಿಟ್ಟುಸಿರಿಟ್ಟ. ಅದು ಆಗ ಮನಸ್ಸುಗಳು ಸಂಕುಚಿತವಾಗಿದ್ದ ಕಾಲ. ಈಗ ಹಾಗಲ್ಲ, ಗ್ಲೋಬಲೈಸೇಷನ್ ಮನಸ್ಸುಗಳನ್ನು ಸಾಕಷ್ಟು ವಿಶಾಲವಾಗಿಸಿದೆ. ವಿದ್ಯಾವಂತರನ್ನಾಗಿಸಿದೆ. ಎಲ್ಲರಿಗೂ ಈಗ ಹಣ ಬೇಕೆ ದುಡಿಯುವುದು ಬೇಕು, ಬದುಕನ್ನು ತಮಗೆ ಬೇಕಾದಂತೆ ಕಟ್ಟಿಕೊಳ್ಳುವ ಧಾವಂತ. ಈ ಧಾವಂತದಲ್ಲಿ ಯೋಚಿಸಲೂ ಪುರುಸೊತ್ತು ಕಡಿಮೆ. ಯಾರ ಜೀವನದಲ್ಲಿ ಯಾರೂ ಮೂಗು ತೂರಿಸುವುದಿಲ್ಲ.
Advertisement
ಆ ಇನ್ನೊಂದು ಘಟನೆಅವನಿಗೆ ಇನ್ನೊಂದು ಘಟನೆ ನೆನಪಾಯಿತು. ಅವನ ಆಫೀಸಿನ ಕವಿತಾಳಿಗೆ ಗಂಡನಿರಲಿಲ್ಲ. ಕವಿತಾಳ ಗಂಡ ಮೋಹನ್ ಆ್ಯಕ್ಸಿಡೆಂಟಿನಲ್ಲಿ ತೀರಿಕೊಂಡಾಗ ಅವನ ಕೆಲಸವನ್ನು ಕಂಪೆನಿ ಅವಳಿಗೆ ಕೊಟ್ಟಿತ್ತು. ಕೈ ಮಗುವಿದ್ದ ಅವಳು ಮಗುವನ್ನು ಬೇಬಿ ಸಿಟ್ಟಿಂಗ್‌ನಲ್ಲಿ ಬಿಟ್ಟು ಆಫೀಸಿಗೆ ಓಡಿ ಬರುತ್ತಿದ್ದಳು. ಅನಿವಾರ್ಯತೆ ಎಂಬುದು ಕಲಿಕೆಯ ತಾಯಿ ಎನ್ನುತ್ತಾರಲ್ಲ , ಹಾಗೆಯೇ ಅವಳೂ ಆಸಕ್ತಿಯಿಂದ ಕೆಲಸ ಕಲಿತು ಪರಿಣಿತಳಾಗಿದ್ದಳು. ಮಗುವಿಗೆ ಮೂರು ವರ್ಷವಾಗುವ ಹೊತ್ತಿಗೆ ಅದೇ ಕಂಪೆನಿಯ ಇನ್ನೊಂದು ಬ್ರಾಂಚಿನ ಮೆನೇಜರ್ ಇವಳನ್ನು ನೋಡಿ ಮೆಚ್ಚಿ ಮದುವೆಯಾಗಿದ್ದರು. ಇದಕ್ಕೆ ಎರಡೂ ಮನೆಯವರೂ ವಿರೋಧ ವ್ಯಕ್ತ ಪಡಿಸಿರಲಿಲ್ಲ. ರಾಹುಲನಿಗೆ ಇದನ್ನು ನೋಡಿ ಖುಷಿಯಾಗಿತ್ತು. ಅವನಿಗೆ ತನ್ನ ಅಮ್ಮನ ಕೊನೆಯ ತಂಗಿ ಚಿಕ್ಕ ವಯಸ್ಸಿಗೆ ವಿಧವೆಯಾದಾಗ ಅವಳಿಗೆ ವಿಧಿಸಿದ್ದ ಕಟ್ಟುಪಾಡುಗಳನ್ನು ನೆನೆದು ನಿಟ್ಟುಸಿರಿಟ್ಟಿದ್ದ. ಬಂಧುಗಳಲ್ಲೇ ಕೆಲವರು ಆಕೆಗೆ ಎರಡನೇ ಮದುವೆ ಮಾಡೆಂದು ಹೇಳಿದರೂ ಮನೆಯವರ್ಯಾರೂ ಕಿವಿಮೇಲೆ ಹಾಕಿಕೊಂಡಿರಲಿಲ್ಲ. ಅವರಿಗೆ ಬಿಟ್ಟಿ ದುಡಿಯುವ ಆಳೊಂದು ಬೇಕಾಗಿತ್ತು. ಚಿಕ್ಕಿಯನ್ನು ಮನಸೋ ಇಚ್ಛೆ ದುಡಿಸಿಕೊಂಡರು. ಇವರ ಸ್ವಾರ್ಥವನ್ನು ಕಂಡು ರೋಸಿದ್ದ ಚಿಕ್ಕಿ ಒಮ್ಮೆ ರಾತ್ರೋರಾತ್ರಿ ಮನೆಯಿಂದ ಮಾಯವಾಗಿದ್ದಳು. ಮನೆಯವರು ಕಂದಾಚಾರಕ್ಕೆ ಕಟ್ಟು ಬಿದ್ದು ಚಿಕ್ಕಿಯ ಬಾಳನ್ನು ನರಕ ಮಾಡಿದ್ದರು. ಆದರೆ, ಚಿಕ್ಕಿ ತನ್ನ ಬಾಳನ್ನು ತಾನೇ ಹಸನು ಮಾಡಿಕೊಂಡಿದ್ದಳು. ಮುಂಚೆಯಾದರೆ ಯಾರಾದರೂ ಪರಿಚಯವಾದ ತಕ್ಷಣ ಅವರ ಊರು-ಕೇರಿ-ಕೆಲಸ-ಸಂಬಳ-ಸಂಸಾರ ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ಕೇಳಿ ತಿಳಿದುಕೊಳ್ಳುವ ಕಾತುರದ ಕಾಲವೊಂದಿತ್ತು. ಈಗ ಯಾರೂ ಹಾಗಿಲ್ಲ. ಆ ಅಭ್ಯಾಸ ಕ್ರಮೇಣ ಕಡಿಮೆಯಾಗುತ್ತಿದೆ. ಅವರು ಸಿಂಗಲ್ ಲಿವಿಂಗ್ ಅಂತೆ, ಅವರು ವಿಧವೆ ಅಂತೆ ಎಂದೆಲ್ಲ ಈಗ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅವಳು ವಿಧವೆ ಎಂದು ಗೊತ್ತಾದ ಕೂಡಲೇ ಅವಳ ಉಡುಗೆ-ತೊಡುಗೆ-ಅಲಂಕಾರದ ಬಗ್ಗೆ ಕುತೂಹಲದಿಂದ ನೋಡುವುದಿಲ್ಲ. ಈಗ ಎಲ್ಲರೂ ಕೆಲಸಕ್ಕೆ ಹೋಗುವುದು ಅನಿವಾರ್ಯ. ಕೆಲಸಕ್ಕೆ ಹೋಗುವವರು ಅವರ ಅಭಿರುಚಿಗೆ ತಕ್ಕಂತೆ ಅಲಂಕರಿಸಿಕೊಳ್ಳುತ್ತಾರೆ. ಅದು, ಅವರವರ ಇಷ್ಟ. ಮುಂಚೆಯಾದರೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಕಂಡರೆ ಮದುವೆಯಾಗಿದೆಯಾ ಇಲ್ಲವಾ ಎಂದು ನೋಡಲು ಥಟ್ಟನೆ ಕಾಲೆರಳನ್ನು ಗಮನಿಸುತ್ತಿದ್ದರು. ಈಗ ಅದೂ ಇಲ್ಲ. ಏಕೆಂದರೆ ಕಾಲುಂಗುರ ಹಾಕುವುದು ಈಗೇನೂ ಅನಿವಾರ್ಯವಲ್ಲ. ಇಷ್ಟವಿದ್ದರೆ ಹಾಕಬಹುದು ಇಲ್ಲದಿದ್ದರೆ ಇಲ್ಲ. ಮೊದಲೆಲ್ಲ ಮಣಭಾರದ ಮಾಂಗಲ್ಯದ ಸರಗಳನ್ನು ಹಾಕಲೇಬೇಕಿತ್ತು. ಈಗ ಹಾಗಿಲ್ಲ. ಫ್ಯಾಷನ್ನಾಗಿ ಚಿಕ್ಕದೊಂದು ಸರವನ್ನು ಹಾಕುತ್ತಾರೆ. ಮೊದಲೆಲ್ಲ ಮಹಿಳೆಯರು ಬ್ಯಾಂಕ್ ಕೆಲಸ ಅಥವಾ ಸ್ಕೂಲಿನಲ್ಲಿ ಶಿಕ್ಷಕಿಯ ಕೆಲಸ ಅಷ್ಟೇ ಆಯ್ಕೆ ಮಾಡಿಕೊಳ್ಳಬೇಕಿತ್ತು. ಇದಾದರೆ ಸಂಜೆ ಬೇಗ ಮನೆ ಸೇರಬಹುದೆಂದು. ಬೇರೆ ಕೆಲಸಕ್ಕೆ ಯಾರೂ ಪ್ರೋತ್ಸಾಹಿಸುತ್ತಲೇ ಇರಲಿಲ್ಲ. ಹೆಣ್ಣುಮಕ್ಕಳನ್ನು ಹೆಚ್ಚಿನ ಓದಿಗೆ ಹಾಸ್ಟೆಲಿನಲ್ಲಿ ಬಿಡಲೂ ಹಿಂದೆ ಮುಂದೆ ನೋಡುತ್ತಿದ್ದರು. ಈಗ ಹಾಗಿಲ್ಲ ವೇಗವಾಗಿ ಸಾಗುವ ಕಾಲದ ಜೊತೆ ನಾವೂ ವೇಗದಿಂದಲೇ ಸಾಗಬೇಕಾಗಿದೆ. ಓಟದಲ್ಲಿ ಹಿಂದೆ ಬೀಳಲು ಯಾರಿಗೂ ಇಷ್ಟವಿಲ್ಲ. ಆದ್ದರಿಂದಲೇ ಮಹಿಳೆಯರು ಎಲ್ಲಾ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಇದನ್ನು ಹೇಳುವಾಗ ನನಗೊಂದು ಘಟನೆ ನೆನಪಾಗುತ್ತದೆ. ಇನ್ಫೋಸಿಸ್‌ನ ಸುಧಾಮೂರ್ತಿಯವರು ಇಂಜಿನಿಯರಿಂಗ್ ಓದುವಾಗ ಅವರ ತರಗತಿಯಲ್ಲಿ ಅವರೊಬ್ಬರೇ ಮಹಿಳೆಯಂತೆ. ಆ ಕಾಲದಲ್ಲಿ ಮಹಿಳೆಯರು ಇಂಜಿನಿಯರಿಂಗ್ ಓದುತ್ತಿರಲಿಲ್ಲ. ಬುದ್ಧಿವಂತರಾಗಿದ್ದರೂ ಡಿಗ್ರಿಗೇ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಅಂಥ ಪರಿಸ್ಥಿತಿಯಲ್ಲಿ ಸುಧಾಮೂರ್ತಿಯವರು ಇಡೀ ಇಂಜಿನಿಯರಿಂಗ್ ತರಗತಿಗೇ ಒಬ್ಬರೇ ವಿದ್ಯಾರ್ಥಿನಿಯಾಗಿ ಸೇರಿ ಹೊಸ ಭಾಷ್ಯವನ್ನೇ ಬರೆದರು. ಅದು ನಂತರ ಎಷ್ಟೋ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾದದ್ದು ಸುಳ್ಳಲ್ಲ. – ವೀಣಾ ರಾವ್