Advertisement

ಮಾಜಿ ಶಾಸಕರ ಮೇಲೆ ಎಫ್‌ಐಆರ್ ಹಾಕಲು ಈಗ ಅಡೆತಡೆ ಇಲ್ಲ; ಬೇಳೂರು ವ್ಯಂಗ್ಯ

04:24 PM Jul 01, 2023 | Shreeram Nayak |

ಸಾಗರ: ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ಮಾಡಿಸಿದ ಹಲ್ಲೆ ಪ್ರಕರಣದ ಸಂಬಂಧ ಹಿಂದೆ ಹಾಲಪ್ಪ ಶಾಸಕರಾಗಿದ್ದರಿಂದ ಪ್ರಕರಣ ದಾಖಲು ಮಾಡಲು ಆಗಿರಲಿಲ್ಲ. ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಂದು ಸ್ಪೀಕರ್ ಅನುಮತಿ ಸಹ ಬೇಕು ಎಂದು ಹೇಳಲಾಗುತಿತ್ತು. ಈಗ ಮಾಜಿ ಶಾಸಕರ ಮೇಲೆ ಎಫ್‌ಐಆರ್ ಹಾಕಲು ಯಾವುದೇ ಅಡೆತಡೆ ಇಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ನೇರ ದಾಳಿ ನಡೆಸಿದರು.

Advertisement

ತಾಲೂಕಿನ ವರದಾಮೂಲದಲ್ಲಿ ಶನಿವಾರ ಪ್ರಾಂತೀಯ ಬ್ರಾಹ್ಮಣ ವೀರಶೈವ ಒಕ್ಕೂಟ ಹಾಗೂ ವರದಾಂಬಾ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅವತ್ತು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದ ಶ್ರೀಪಾದ ಹೆಗಡೆ ನಿಸ್ರಾಣಿ, ಜಗದೀಶ್ ಗೌಡ ಅವರ ಮೇಲೆ ೩೦ಕ್ಕೂ ಹೆಚ್ಚು ರೌಡಿಗಳ ಮೂಲಕ ಹಲ್ಲೆ ಮಾಡಿಸಿರುವ ಹಾಲಪ್ಪ ಅವರಿಗೆ ಜನರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಹಲ್ಲೆ ನಡೆಸಿದವರ ಮೇಲೆ ಪ್ರಕರಣ ದಾಖಲು ಮಾಡದೆ ಹಲ್ಲೆ ಮಾಡಿಸಿಕೊಂಡವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಾನು ಶಾಸಕನಾಗಿ ಬಂದ ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದೇನೆ. ಸಾಗರ ಕ್ಷೇತ್ರದಲ್ಲಿ ನನಗೆ ಹಾಲಪ್ಪ ಮಾತ್ರ ವಿರೋಧಿ, ಇನ್ಯಾರೂ ವಿರೋಧಿಗಳಲ್ಲ ಎಂದು ಪ್ರತಿಪಾದಿಸಿದರು.

ಎಂಡಿಎಫ್‌ನಲ್ಲಿ ಗಲಾಟೆ ಮಾಡಿಸಿ ಅಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಹುನ್ನಾರ ಹರತಾಳು ಹಾಲಪ್ಪ ಮಾಡಿದ್ದರು. ಎಲ್ಲ ಜಾತಿಜನಾಂಗಗಳ ಸಹಕಾರದಿಂದ ನಾನು ಗೆದ್ದಿದ್ದೇನೆ. ಶಾಂತಿ ಸೌಹಾರ್ದತೆ ಕಾಪಾಡುವ ಜೊತೆಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಬೇಳೂರು ಭರವಸೆ ನೀಡಿದರು.

ಶಿಮುಲ್ ಅಧ್ಯಕ್ಷ, ಬಿಜೆಪಿ ಪ್ರಮುಖ ಶ್ರೀಪಾದ ಹೆಗಡೆ ನಿಸ್ರಾಣಿ ಮಾತನಾಡಿ, ತಮಗೆ ಸಂಬಂಧವೇ ಇಲ್ಲದ ಎಂಡಿಎಫ್ ಸರ್ವಸದಸ್ಯರ ಸಭೆಗೆ ಬಂದು ನನ್ನ ಮತ್ತು ನನ್ನ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಜಗದೀಶ್ ಗೌಡ ಇವತ್ತೂ ಸರಿಯಾಗಿ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ತಮ್ಮ ದುರಹಂಕಾರದ ವರ್ತನೆಯಿಂದ ಎಲ್ಲರನ್ನೂ ಹೆದರಿಸುವ ಕೆಲಸ ಹಿಂದಿನ ಶಾಸಕರು ಮಾಡಿದ್ದಾರೆ. ನಾನು ಸಾಗರಕ್ಕೆ ಬಂದರೆ ಶಾಂತಿ ಕದಡುತ್ತೇನೆ ಎಂದು ಪೊಲೀಸರ ಮೂಲಕ 107 ಕೇಸ್ ಸಹ ಹಾಕಿಸಿದ್ದರು. ಜನರು ದುರಹಂಕಾರ ಸಹಿಸದೆ ತಕ್ಕಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕ ಬೇಳೂರು ಎಲ್ಲ ಜಾತಿಜನಾಂಗವನ್ನು ಒಟ್ಟಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ನಡೆಸುವ ಎಲ್ಲ ಕೆಲಸಕ್ಕೆ ಒಕ್ಕೂಟ ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರಾಟೆ ತರಬೇತುದಾರ ಸನ್‌ಸೈ ಪಂಚಪ್ಪ, ಗೋರಕ್ಷಕ ಪುರುಷೋತ್ತಮ್, ಶಿಕ್ಷಕ ಗುರುರಾಜ ಎಂ.ಬಿ. ಅವರನ್ನು ಅಭಿನಂದಿಸಲಾಯಿತು. ಒಕ್ಕೂಟದ ಅಧ್ಯಕ್ಷ ಕೆ.ಎನ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ಪ್ರಮುಖರಾದ ಶೇಷಗಿರಿಭಟ್ ಸಿಗಂದೂರು, ಯು.ಎಚ್.ರಾಮಪ್ಪ, ಬಿ.ಎ.ಇಂದೂಧರ ಗೌಡ, ಜಗದೀಶ್ ಗೌಡ, ರವೀಶ್ ಕುಮಾರ್, ಶೇಖರಪ್ಪ ಗೌಡ ಬೇಸೂರು, ಶ್ರೀಧರ ಭಟ್ ಕಲಸೆ, ಈಳಿ ಶ್ರೀಧರ್, ರಜನೀಶ್ ಹಕ್ರೆ, ಮಧುಮಾಲತಿ, ಅನಿಲ್ ಗೌಡ, ಮಂಜುನಾಥ ಶೆಟ್ಟಿ, ಕೆ.ಜಿ.ಜಗದೀಶ್ ಗೌಡ, ರಮೇಶ್ ಎಂ.ಬಿ. ಉಪಸ್ಥಿತರಿದ್ದರು. ಭಾರತಿ ರಾಮಚಂದ್ರಭಟ್ ಪ್ರಾರ್ಥಿಸಿದರು. ಗಣಪತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಕ್ರೆ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ್ ಎನ್.ಎಚ್. ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next