Advertisement
ಕುಡಿಯುವ ನೀರಿನ ಸಮಸ್ಯೆ, ಅನಾವೃಷ್ಟಿಯಿಂದಾದ ಹಿಂಗಾರು ಬೆಳೆ ವಿಫಲತೆ ಕುರಿತು ಅಧ್ಯಯನಕ್ಕಾಗಿ ಬುಧವಾರ ಜಿಲ್ಲೆಯ ಜಗಳೂರು ಹಾಗೂ ದಾವಣಗೆರೆ ತಾಲೂಕಿನ ಕೆಲವು ಜಮೀನು, ಅಡಕೆ ತೋಟ ಹಾಗೂ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಕೇಂದ್ರ ಸರ್ಕಾರದ ಡಿಎಸಿ ಆ್ಯಂಡ್ ಎಫ್‌ಡಬ್ಲ್ಯೂ ಇಲಾಖೆ ಜಂಟಿ ಕಾರ್ಯದರ್ಶಿ ಡಾ| ಅಭಿಲಾಕ್ಷ ಲಿಖೀ ನೇತೃತ್ವದ ಮೂವರನ್ನೊಳಗೊಂಡ ತಂಡಕ್ಕೆ ಜಿಲ್ಲಾಡಳಿತವಲ್ಲದೇ ರೈತರು ಸಹ ತಮ್ಮ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು.
Related Articles
Advertisement
ನಾವು ನಾಲ್ಕು ವರ್ಷದಿಂದ ಸತತವಾಗಿ ಬರಗಾಲ ಎದುರಿಸುತ್ತಿದ್ದೇವೆ. ಮೂರು ವರ್ಷದಿಂದ ಫಸಲ್ ಬಿಮಾ ಯೋಜನೆಗೆ ಹಣ ಪಾವತಿಸಿದರೂ ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ದೂರಿದಾಗ, ಡಾ| ಅಭಿಲಾಕ್ಷ ಲಿಖೀ, ನಿಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಭೇಟಿ ಮಾಡಿ, ತಿಳಿಸಿ ಎಂದರು.
ಅಲ್ಲಿಂದ ತೆರಳಲು ಅನುವಾಗುತ್ತಿದ್ದ ಅಧಿಕಾರಿಗಳ ತಂಡವನ್ನು ಭರಮಸಮುದ್ರ ಕೆರೆ ನೀರು ಹರಿಯದ ಸಮಸ್ಯೆ ತೋರಿಸಲು ಕರೆದೊಯ್ದ ಗ್ರಾಮಸ್ಥರು, ಕೆರೆಗೆ ನೀರು ಬಂದಲ್ಲಿ 30 ಹಳ್ಳಿಗಳಗೆ ಅನುಕೂಲವಾಗಲಿದೆ. ಕ್ಯಾನಲ್‌ನ ಅರ್ಧ ಕಾಮಗಾರಿಯಿಂದಾಗಿ ಕೆರೆಗೆ ನೀರೇ ಹರಿದು ಬರುತ್ತಿಲ್ಲ. ಜನ-ಜಾನುವಾರುಗಳಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಹೇಳಿದಾಗ, ಆ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವಂತೆ ತಿಳಿಸಿದರು.
ಭೋಜನದ ನಂತರ ಜಗಳೂರು ತಾಲೂಕಿನ ರಂಗಾಪುರ ಗ್ರಾಮಕ್ಕೆ ಭೇಟಿ ನೀಡಿದ ತಂಡ, ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿ, ನೀರಿನ ಲಭ್ಯತೆ, ಅದರ ಗುಣಮಟ್ಟ, ಘಟಕ ನಿರ್ವಹಣೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಟ್ಯಾಂಕರ್‌ನಲ್ಲಿ ನೀರು ತಂದು, ಅದನ್ನು ಶುದ್ಧೀಕರಿಸಿ, ಕ್ಯಾನ್ ನೀರಿಗೆ ಕನಿಷ್ಠ ರೂ. ವಿಧಿಸಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದಾಗ, ನೀರಿಗೆ ಜನರು ಹಣ ಕೊಡುತ್ತಾರಾ? ಅವರಿಗೆ ಆ ಸಾಮರ್ಥ್ಯ ಇದೆಯೇ ಎಂದು ಕೇಂದ್ರ ತಂಡದವರು ಪ್ರಶ್ನಿಸಿದಾಗ, ನಾಮಿನಲ್ ಛಾರ್ಜ್ ತೆಗೆದುಕೊಳ್ಳುವುದರಿಂದ ಜನರು ಕೊಡುತ್ತಾರೆ ಎಂದು ಅಧಿಕಾರಿ ಹೇಳಿದರು.
ಅಲ್ಲಿಂದ ತಂಡ ಬಿಳಿಚೊಡು ಗ್ರಾಮದ ಬಳಿ ಶರಣಪ್ಪ ಎಂಬುವರ 4.6 ಎಕರೆ ಅಡಕೆ ತೋಟಕ್ಕೆ ಭೇಟಿ ನೀಡಿದಾಗ ನೀರಿಲ್ಲದೆ ಅಡಕೆ ಮರಗಳು ಒಣಗಿರುವುದು ತಂಡಕ್ಕೆ ಗೋಚರಿಸಿತು. ಪಕ್ಕದಲ್ಲೇ ಇದ್ದ ಮತ್ತೂಬ್ಬರ ಅಡಕೆ ತೋಟ ಹಸಿರಾಗಿರುವುದನ್ನು ನೋಡಿದ ಅಧ್ಯಯನ ತಂಡದ ಲಿಖೀ, ನಿಮ್ಮ ತೋಟ ಒಣಗಿದ್ದರೆ, ಅವರ ತೋಟ ಚೆನ್ನಾಗಿದೆಯಲ್ಲಾ, ಅದು ಹೇಗೆ ಎಂಬುದಾಗಿ ಪ್ರಶ್ನಿಸಿದರು. ಆಗ ರೈತ ಶರಣಪ್ಪ, ತೆಂಗಿನ ಮರಕ್ಕೆ ಪ್ರತಿದಿನ 50 ಲೀಟರ್ ಹಾಗೂ ಅಡಕೆ ಮರಕ್ಕೆ 20 ಲೀಟರ್ ನೀರಿನ ಅವಶ್ಯಕತೆ ಇದೆ. ಕೊಳವೆಬಾವಿಯಲ್ಲಿ ಅಂತರ್ಜಲ ಬತ್ತಿರುವುದರಿಂದ ತೋಟ ಒಣಗಿದೆ.
ಮತ್ತೂಂದು ತೋಟದ ಮಾಲೀಕರು, ಕೃಷಿಹೊಂಡ ನಿರ್ಮಿಸಿಕೊಂಡಿದ್ದು, ಅದನ್ನು ಟ್ಯಾಂಕರ್ ನೀರಿನಿಂದ ತುಂಬಿಸುತ್ತಾರೆ. ಒಂದು ಟ್ಯಾಂಕರ್‌ಗೆ 800 ರೂ. ನಂತೆ ಪ್ರತಿದಿನ 8 ಟ್ಯಾಂಕರ್ ನೀರು ತರಿಸುತ್ತಾರೆ. ಆದ್ದರಿಂದ ಆ ತೋಟ ಉಳಿದುಕೊಂಡಿದೆ. ನನಗೆ ಟ್ಯಾಂಕರ್ ನೀರು ತರಿಸುವ ಆರ್ಥಿಕ ಶಕ್ತಿ ಇಲ್ಲ. ಮೇಲಾಗಿ 1000 ಅಡಿ ಕೊರೆದರೂ ನೀರು ಸಿಗಲ್ಲ ಎಂದು ಹೇಳಿದರು.
ನಂತರ ತಂಡ ದಾವಣಗೆರೆ ಜಿಲ್ಲೆಯ ಬೋರಗೊಂಡನಹಳ್ಳಿಗೆ ಭೇಟಿ ನೀಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿತು. ಕೇಂದ್ರ ತಂಡದ ಇನ್ನಿಬ್ಬರು ಅಧಿಕಾರಿಗಳಾದ ಬಿ.ಕೆ. ಶ್ರೀವಾತ್ಸವ ಹಾಗೂ ಬಿ.ಸಿ. ಶರ್ಮಾ ಇದ್ದರು. ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್.ಬಸವರಾಜೇಂದ್ರ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಶರಣಪ್ಪ ಮುದಗಲ್, ಜಗಳೂರು ತಹಶೀಲ್ದಾರ್ ತಿಮ್ಮಣ್ಣ ಹುಲ್ಲುಮನೆ ತಂಡಕ್ಕೆ ಬರ ಪರಿಸ್ಥಿತಿ ಬಗ್ಗೆ ಅಗತ್ಯ ಮಾಹಿತಿ ನೀಡಿದರು.