Advertisement

ಇನ್ನು ಆಯಾ ಜಿಲ್ಲೆಗಳಲ್ಲೇ KFD ಪರೀಕ್ಷೆ

01:27 AM Feb 01, 2024 | Team Udayavani |

ಶಿವಮೊಗ್ಗ: ಮಂಗನಕಾಯಿಲೆ (ಕೆಎಫ್‌ಡಿ) ವಿಚಾರದಲ್ಲಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ಮುಂದೆ ರೋಗಿಗಳ ಮಾದರಿ ಪರೀಕ್ಷೆಗೆ ಶಿವಮೊಗ್ಗ ವಿಡಿಎಲ್‌ ಲ್ಯಾಬ್‌ ಅವಲಂಬಿಸಬೇಕಾಗಿಲ್ಲ.

Advertisement

ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌(ಕೆಎಫ್‌ಡಿ)ಮನುಷ್ಯರ ಪಾಲಿಗೆ ನರಕವಾಗಿದೆ. ಈವರೆಗೆ ಗಂಭೀರವಾದ ಪ್ರಯತ್ನಗಳು ನಡೆಯದ ಪರಿಣಾಮ ಆರು ದಶಕಗಳಾದರೂ ಈ ಕಾಯಿಲೆ ಜನರ ಜೀವ ಹಿಂಡುತ್ತಿದೆ. ಆರೋಗ್ಯ ಇಲಾಖೆ ದಶಕಗಳ ಹಿಂದೆ ಶಿವಮೊಗ್ಗದಲ್ಲಿ ವಿಡಿಎಲ್‌ ಲ್ಯಾಬ್‌ ಸ್ಥಾಪಿಸುವ ಮೂಲಕ ಕೆಎಫ್‌ಡಿ ಪೀಡಿತ ಪ್ರದೇಶದ ಜನರ ರಕ್ತ ಮಾದರಿ ಪರೀಕ್ಷೆಯನ್ನು ಆರಂಭಿಸಿತು.

ಈವರೆಗೂ ಕೆಎಫ್‌ಡಿ ಪೀಡಿತ ಪ್ರದೇಶಗಳಲ್ಲಿ ಯಾರಿಗೆ ಜ್ವರ ಬಂದರೂ ಇಲ್ಲಿಗೆ ಸ್ಯಾಂಪಲ್‌ ಕಳುಹಿಸಲಾಗುತ್ತಿದೆ. ಮಾದರಿ ಸಂಗ್ರಹಿಸಿ ಕಳುಹಿಸಿದ ಒಂದೆರಡು ದಿನದಲ್ಲಿ ಫಲಿತಾಂಶ ಸಿಗುತ್ತಿದೆ. ಈ ಆಧಾರದಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತಿದೆ. ಶಿವಮೊಗ್ಗಕ್ಕೆ ಮಾದರಿ ಕಳುಹಿಸುವುದರಿಂದ ಆರ್ಥಿಕವಾಗಿ ಹೊರೆ-ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ ಎಂದು ಭಾವನೆ ಇದೆ. ಇದನ್ನು ತಪ್ಪಿಸುವ ಸಲುವಾಗಿ ಆರೋಗ್ಯ ಇಲಾಖೆ ಆಯಾ ಜಿಲ್ಲೆಗಳಲ್ಲೇ ಪರೀಕ್ಷೆ ನಡೆಸಲು ಬೇಕಾದ ಲ್ಯಾಬ್‌ ಲಭ್ಯತೆ, ಇತರ ವಿಷಯಗಳ ಕುರಿತು ಡಿಎಚ್‌ಒಗಳಿಗೆ ಸಂದೇಶ ಕಳುಹಿಸಿದೆ.

ಕೋವಿಡ್‌ ಸಂದರ್ಭ ಎಲ್ಲ ಜಿಲ್ಲೆಗಳಲ್ಲಿ ಆರ್‌ಟಿಸಿಪಿಆರ್‌ ಲ್ಯಾಬ್‌ಗಳನ್ನು ಮಂಜೂರು ಮಾಡಲಾಗಿದ್ದು, ಅವುಗಳು ಕಾರ್ಯಾಚರಿಸುತ್ತಿವೆ. ಈ ಲ್ಯಾಬ್‌ಗಳಲ್ಲೇ ಕೆಎಫ್‌ಡಿ ಟೆಸ್ಟ್‌ ನಡೆಸಬಹುದು. ಟೆಸ್ಟ್‌ ನಡೆಸುವ ಸಿಬಂದಿಗೆ ಬೇಕಾದ ತರಬೇತಿ, ಸಹಕಾರವನ್ನು ಎನ್‌ಐವಿ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ) ಪುಣೆಯಿಂದ ಪಡೆಯಲು ಕೂಡ ಸೂಚಿಸಲಾಗಿದೆ. ಕೆಎಫ್‌ಡಿ ಅವಧಿ ಜೂನ್‌ವರೆಗೂ ಇರಲಿದ್ದು, ಅಷ್ಟರೊಳಗೆ ಸ್ಥಳೀಯವಾಗಿ ಪರೀಕ್ಷೆ ಆರಂಭವಾಗುವ ಸಾಧ್ಯತೆ ಇದೆ.

ಕೆಎಫ್‌ಡಿ ಹೆಚ್ಚಳ
ಜ.30ರ ವರೆಗೆ ಉತ್ತರಕನ್ನಡ 19, ಶಿವಮೊಗ್ಗ 12, ಚಿಕ್ಕಮಗಳೂರು ಇಬ್ಬರಿಗೆ ಕೆಎಫ್ಡಿ ತಗಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಡಿಸೆಂಬರ್‌ನಲ್ಲಿ ಎರಡು ಪ್ರಕರಣ ಬಿಟ್ಟರೆ ಯಾವುದೂ ವರದಿಯಾಗಿರಲಿಲ್ಲ. ಜನವರಿಯಲ್ಲೇ ಅಬ್ಬರಿಸುತ್ತಿರುವ ಕೆಎಫ್‌ಡಿ ಮಾರ್ಚ್‌-ಎಪ್ರಿಲ್‌ನಲ್ಲಿ ರುದ್ರನರ್ತನ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟರೊಳಗೆ ಲ್ಯಾಬ್‌ ಆರಂಭವಾದರೆ ಜನರಿಗೆ ವೇಗವಾಗಿ ಫಲಿತಾಂಶ ಕೊಡುವ ಜತೆಗೆ ಸೂಕ್ತ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next