Advertisement

BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗ ಪಿತೃಪಕ್ಷದ ನೆವ

08:28 PM Oct 02, 2023 | Team Udayavani |

ಬೆಂಗಳೂರು: ಕೆಲ ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ನೇಮಕ ಪ್ರಕ್ರಿಯೆಗೆ ಈಗ ಪಿತೃಪಕ್ಷದ ನೆವ ದೊರೆತಿದ್ದು, ನವರಾತ್ರಿ ಪ್ರಾರಂಭದವರೆಗೂ ಹೊಸ ಚರ್ಚೆಗಳು ನಡೆಯುವ ಸಾಧ್ಯತೆ ಕ್ಷೀಣಿಸಿದೆ.

Advertisement

ಚುನಾವಣಾ ಸಮಿತಿ ಸಭೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಜತೆಗೆ ಭಾನುವಾರ ದಿಲ್ಲಿಗೆ ತೆರಳಿದ್ದಾರೆ. ರಾಜಸ್ಥಾನ, ಮಧ್ಯ ಪ್ರದೇಶ ಸೇರಿ ಅನ್ಯರಾಜ್ಯಗಳ ಚುನಾವಣೆಗೆ ಸಂಬಂಧಪಟ್ಟ ಸಭೆಯಲ್ಲಿ ಮಾತ್ರ ಅವರು ಭಾಗಿಯಾಗಿದ್ದಾರೆ. ಆದರೆ ಯಡಿಯೂರಪ್ಪನವರಿಗಾಗಲಿ, ವಿಜಯೇಂದ್ರ ಅವರಿಗಾಗಲಿ ರಾಷ್ಟ್ರೀಯ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ.

ಒಂದೊಮ್ಮೆ ತಮ್ಮ ಸಲಹೆಗೆ ವರಿಷ್ಠರು ಸಮ್ಮತಿಸಿದರೂ ಪಿತೃಪಕ್ಷದಲ್ಲಿ ತಮ್ಮ ಪುತ್ರ ಅಧಿಕಾರ ಸ್ವೀಕರಿಸುವುದಕ್ಕೆ ಖುದ್ದು ಯಡಿಯೂರಪ್ಪನವರೇ ಒಪ್ಪುವ ಸಾಧ್ಯತೆ ಕಡಿಮೆ. ಹೀಗಾಗಿ ಇನ್ನು ಕೆಲ ದಿನಗಳ ಕಾಲ ಬಿಜೆಪಿಯ ಆಯಕಟ್ಟಿನ ಸ್ಥಾನಗಳಿಗೆ ನೇಮಕ ನಡೆಯುವ ಸಾಧ್ಯತೆ ಕಡಿಮೆ.

ಕುತೂಹಲ ಸೃಷ್ಟಿ : ಇದೆಲ್ಲದರ ಮಧ್ಯೆ ಬಿ.ವೈ.ವಿಜಯೇಂದ್ರ ದಿಲ್ಲಿ ಭೇಟಿಯ ಉದ್ದೇಶ ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ನಿಗದಿಯಾಗಿರಲಿಲ್ಲ. ಜತೆಗೆ ಚುನಾವಣಾ ಸಮಿತಿ ಸಭೆಗೆ ಅವರು ಅಪೇಕ್ಷಿತರೂ ಅಲ್ಲ. ಆದಾಗಿಯೂ ವಿಜಯೇಂದ್ರ ಎರಡು ದಿನಗಳಿಂದ ದಿಲ್ಲಿಯಲ್ಲಿ ಬೀಡು ಬಿಟ್ಟಿರುವುದು ಮಾತ್ರ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ದಿಲ್ಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, “ನಾನು ಯಾವುದೇ ಆಸೆ ಇಲ್ಲದೆ ಪಕ್ಷದ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ರಾಷ್ಟ್ರೀಯ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ವಿಳಂಬಕ್ಕೆ ಸೂಕ್ತ ಕಾರಣ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ಟಿಕೆಟ್‌ ವಿಚಾರದ ಸಂದರ್ಭದಲ್ಲೂ ನನ್ನ ಹೆಸರು ಚರ್ಚೆಗೆ ಬಂತು. ಟಿಕೆಟ್‌ ಕೊಟ್ಟ ಬಳಿಕವೂ ಚರ್ಚೆಯಾಯ್ತು. ನನ್ನ ಹೆಸರು ಮಾಧ್ಯಮದಲ್ಲಿ ಆಗಾಗ ಬರುತ್ತಲೇ ಇರುತ್ತದೆ. ಆದರೆ ನಾನಂತೂ ಯಾವುದೇ ಹುದ್ದೆಯ ಆಸೆಯಿಂದ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಪರಂ ವಿರುದ್ಧ ಆಕ್ರೋಶ : ಶಿವಮೊಗ್ಗ ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಶಿವಮೊಗ್ಗದಲ್ಲಿ ಕಲ್ಲು ತೂರಾಟ ಹೊಸದಲ್ಲ’ ಎಂಬ ಗೃಹ ಸಚಿವರ ಮಾತಿನ ಅರ್ಥವೇನು? ಹಾಗಾದರೆ ಇಲ್ಲಿ ಯಾರು ಬೇಕಾದರೂ ಕಲ್ಲು ತೂರಬಹುದೇ? ಇಂಥ ಚಟುವಟಿಕೆಗೆ ಗೃಹ ಸಚಿವರ ಹೇಳಿಕೆ ಪ್ರಚೋದನೆ ನೀಡಿದಂಥಲ್ಲವೇ? ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ಹಬ್ಬಿದ ಕಿಡಿ ರಾಜ್ಯಕ್ಕೆ ವ್ಯಾಪಿಸಿದರೂ ಆಶ್ಚರ್ಯವಿಲ್ಲ. ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಆದರೆ ಭಾನುವಾರ ನಡೆದ ಘಟನೆ ಶಾಂತಿಕದಡುವಂತದ್ದಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವೈಯಕ್ತಿಕ ಕಾರಣಕ್ಕಾಗಿ ನಾನು ದಿಲ್ಲಿಗೆ ಬಂದಿದ್ದೇನೆ. ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗೆ ಬಂದಿಲ್ಲ.
-ಬಿ.ವೈ.ವಿಜಯೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next