ಕಲಬುರಗಿ: ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದ ಭಾರತೀಯ ಕೃಷಿ ವಿಮಾ ಯೋಜನೆ (ಎನ್‌ಎಐಎಸ್) ನಾಲ್ಕು ವರ್ಷಗಳ ಹಿಂದೆ ರದ್ದು ಮಾಡಿ “ಕೃಷಿ ವಿಮಾ ಯೋಜನೆ’ ಎಂದು ಬದಲಿಸಿ ಬಂಡವಾಳ ಹೂಡಿಕೆ ಕಂಪನಿಗಳ ಕೈಗೆ ನೀಡಿ ಖಾಸಗೀಕರಣಗೊಳಿಸಿದ ನಂತರ ಅತಿವೃಷ್ಟಿ-ಅನಾವೃಷ್ಟಿಯಿಂದ ಹಾನಿಗೀಡಾದ ಬೆಳೆಗೆ ಸೂಕ್ತ ಬೆಳೆ ವಿಮೆ ಸಿಗದಂತಾಗಿದೆ. ಬೆಳೆ ವಿಮೆ ಖಾಸಗೀಕರಣ ಮಾಡಿದರೂ ಪ್ರಿಮಿಯಂ ಮೊತ್ತ ಅರ್ಧಕ್ಕೆ ಇಳಿಸಲಾಗಿದೆ.
“ಭಾರತೀಯ ಕೃಷಿ ವಿಮೆ’ ಎಂದು ಇದ್ದಿದ್ದನ್ನು “ಪ್ರಧಾನ ಮಂತ್ರಿ ಕೃಷಿ ಫಸಲ್ ಬಿಮಾ ಯೋಜನೆ’ ಎಂದು ಬದಲಾಯಿಸಲಾಯಿತು. 2018ರಲ್ಲಿ ರೈತರಿಂದ 38 ಸಾವಿರ ಕೋಟಿ ರೂ. ಪ್ರಿಮಿಯಂ ತುಂಬಿಕೊಂಡಿದ್ದು, ಕೇವಲ 4000 ಕೋಟಿ ರೂ. ಪರಿಹಾರ ಕೊಟ್ಟಿದ್ದೇ ಇದಕ್ಕೆ ಸಾಕ್ಷಿ. ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಅಧೀನದಲ್ಲಿದ್ದಾಗ ಪ್ರಿಮಿಯಂ 60 ರೂ. ತುಂಬಿಸಿಕೊಂಡಿದ್ದರೆ 40 ರೂ. ಪರಿಹಾರ ದೊರಕುತ್ತಿತ್ತು.
ಈಗ 100 ರೂ. ತುಂಬಿಸಿಕೊಂಡರೂ 10 ರೂ. ಪರಿಹಾರವೂ ಸಿಗುತ್ತಿಲ್ಲ. ರಾಜ್ಯ ಸರ್ಕಾರದಿಂದಲೇ ವಿಮಾ ಕಂಪನಿ ಸ್ಥಾಪಿಸಲು ಯೋಚಿಸಲಾಗಿದೆ ಎಂದು ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಎಚ್.ಎನ್. ಶಿವಶಂಕರ ರೆಡ್ಡಿ ಹೇಳಿದ್ದರು. ಆದರೆ ಈ ಹೇಳಿಕೆ ಕಾರ್ಯರೂಪಕ್ಕೆ ಬರಲೇ ಇಲ್ಲ. 2018ರ ಮಾರ್ಚ್‌ಗೆ ಮುಕ್ತಾಯವಾದ ಹಣಕಾಸು ವರ್ಷದಲ್ಲಿ 11 ಖಾಸಗಿ ವಿಮಾ ಕಂಪನಿಗಳು 3,000 ಕೋಟಿ ರೂ. ಲಾಭ ಗಳಿಸಿವೆ. ಈ ವರ್ಷದಲ್ಲಿ ಇದೇ 11 ಖಾಸಗಿ ವಿಮಾ ಕಂಪನಿಗಳು 11,509 ಕೋಟಿ ರೂ.ಗಳನ್ನು ಬೆಳೆ ವಿಮೆ ಪ್ರಿಮಿಯಂ ಸಂಗ್ರಹಿಸಿವೆ.
ಹಗಲು ದರೋಡೆ: ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಎನ್ನುವ ಎರಡು ಯೋಜನೆ ಹೊಂದಿದೆ. ಈ ಎರಡೂ ವಿಮಾ ಯೋಜನೆಗಳ ಶೇ.98ರಷ್ಟು ಪ್ರಿಮಿಯಂನ್ನು ಕೇಂದ್ರ, ರಾಜ್ಯ ಸರ್ಕಾರ ಭರಿಸಿದರೆ, ಶೇ.2ರಷ್ಟನ್ನು ಹಣವನ್ನು ರೈತರು ಪಾವತಿಸುತ್ತಾರೆ. 2018-19ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಅಂದಾಜು 16 ಕೋಟಿ ರೂ. ಪ್ರಿಮಿಯಂನ್ನು ರೈತರೇ ತುಂಬಿದ್ದಾರೆ.
ರಾಜ್ಯದ ಮನವಿ ತಿರಸ್ಕಾರ: ಬೆಳೆ ವಿಮೆ ಮಾಡಿಸುವ ದಿನಾಂಕವನ್ನು ವಿಸ್ತರಿಸುವಂತೆ ಆ.1ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಹಾಗೂ ವಿಮಾ ಕಂಪನಿಗಳಿಗೆ ಪತ್ರ ಬರೆದಿದ್ದರು. ಆದರೆ ವಿಮಾ ಕಂಪನಿಗಳು ಮನವಿ ತಿರಸ್ಕರಿಸಿವೆ.
ಕೇಂದ್ರ ಹಣಕಾಸು ಸಚಿವರೇ ಅಸಹಾಯಕರಾದರು!: ಇತ್ತೀಚೆಗೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರವಾಹ ವೀಕ್ಷಣೆಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದರು. ಈ ವೇಳೆ ಕೃಷಿ ಬೆಳೆ ವಿಮಾ ಕಂಪನಿಗಳು ಬೆಳೆಗಳ ಹಾನಿಗೆ ಮೊದಲ ಹಂತದ ಶೇಕಡಾವಾರು ಪರಿಹಾರ ನೀಡುವಂತೆ ಹಾಗೂ ಬೆಳೆ ವಿಮೆ ಮಾಡಿಸುವ ದಿನ ಜು.31ಕ್ಕೆ ಮುಕ್ತಾಯವಾಗಿದ್ದನ್ನು ವಿಸ್ತರಿಸುವಂತೆ ಮನವಿ ಮಾಡಿದ್ದರು. ಆದರೆ, ಕೃಷಿ ವಿಮೆಯನ್ನು ಖಾಸಗೀಕರಣಗೊಳಿಸಿದ ಪರಿಣಾಮ ಕೇಂದ್ರ ಸಚಿವರೇ ಅಸಹಾಯಕರಾಗುವಂತೆ ಮಾಡಿತು.
ಬೆಳೆ ವಿಮೆಗೆಂದು 18 ಖಾಸಗಿ ಕಂಪನಿಗಳ ಬದಲು ಮೊದಲಿನಂತೆ ಕೇಂದ್ರ ಸರ್ಕಾರ ಅಧೀನದ ಎರಡು ಕಂಪನಿಗಳಿಗೆ ಮಾತ್ರ ಬೆಳೆ ವಿಮೆ ಅಧಿಕಾರ ನೀಡಬೇಕು. ನಾವು ಮೊದಲಿನಿಂದಲೂ ಖಾಸಗೀಕರಣ ವಿರೋಧಿಸುತ್ತಾ ಬಂದಿದ್ದೇವೆ. ರೈತರಿಗೆ ಈಗ ಖಾಸಗೀಕರಣ ಬಿಸಿ ತಟ್ಟುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
-ಮಾರುತಿ ಮಾನ್ಪಡೆ, ಉಪಾಧ್ಯಕ್ಷರು, ಕೆಪಿಆರ್‌ಎಸ್
* ಹಣಮಂತರಾವ ಭೈರಾಮಡಗಿ