Advertisement

ಕೋರ್ಟ್‌ ಶುಲ್ಕ ಇ-ಪಾವತಿ : ಅಧ್ಯಾದೇಶ ಹೊರಡಿಸಿದ ರಾಜ್ಯ ಸರಕಾರ

01:44 AM Aug 03, 2020 | Hari Prasad |

ಬೆಂಗಳೂರು: ಇನ್ನು ಎಲ್ಲ ರೀತಿಯ ಕೋರ್ಟ್‌ ಶುಲ್ಕ ಮತ್ತು ಮರುಪಾವತಿಗಳನ್ನು ಇ-ಪಾವತಿ ಮೂಲಕ ನಡೆಸಲು ಅವಕಾಶ ಸಿಗಲಿದೆ.

Advertisement

ಹಾಗೆಯೇ ಸಿವಿಲ್‌ ದಾವೆಗಳಲ್ಲಿ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ರಾಜಿಯಲ್ಲಿ ಇತ್ಯರ್ಥಪಡಿಸಿಕೊಂಡರೆ ಕೋರ್ಟ್‌ ಶುಲ್ಕ ಇನ್ನು ಮುಂದೆ ಪೂರ್ಣವಾಗಿ ಮರುಪಾವತಿ ಆಗಲಿದೆ.

ಈ ಕುರಿತು ರಾಜ್ಯ ಸರಕಾರವು ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ಅಧ್ಯಾದೇಶ-2020 ಜಾರಿಗೆ ತಂದಿದೆ.

ಹಿಂದಿನ ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ ಅಧಿನಿಯಮ-1958ಕ್ಕೆ ತಿದ್ದುಪಡಿ ತರಲಾಗಿದ್ದು, ಜು. 31ರಂದು ರಾಜ್ಯಪಾಲರ ಒಪ್ಪಿಗೆ ಲಭಿಸಿದೆ.

ಕೋವಿಡ್‌ 19 ಪರಿಸ್ಥಿತಿಯಲ್ಲಿ ನ್ಯಾಯಾಲಯವು ಕಲಾಪಗಳ ಕಾರ್ಯವೈಖರಿ ಬದಲಿಸಿದ್ದು, ಆನ್‌ಲೈನ್‌ ಮೂಲಕ ನಡೆಯುತ್ತಿದೆ. ವಕೀಲರು, ಕಕ್ಷಿದಾರರ ಕೋರ್ಟ್‌ ಪ್ರವೇಶಕ್ಕೆ ನಿರ್ಬಂಧ ಇದೆ.

Advertisement

ಸ್ವಯಂ ಹಾಜರಿಗೆ ಅವಕಾಶ ಇಲ್ಲದೆ ಶುಲ್ಕಗಳ ಪಾವತಿ ಕಷ್ಟವಾಗುತ್ತಿತ್ತು. ಈಗ ಕೋರ್ಟ್‌ ಶುಲ್ಕವನ್ನು ಇ-ಪಾವತಿಸಬಹುದು. ಅದೇ ರೀತಿ ಮರುಪಾವತಿಗಳೂ ಇ-ಪಾವತಿ ಮೂಲಕ ಸಂದಾಯ ಆಗಲಿವೆ. ಈವರೆಗೆ 500 ರೂ.ಗಿಂತ ಹೆಚ್ಚಿನ ಪಾವತಿಗಳನ್ನು ಡಿಡಿ ಮೂಲಕ ಮಾಡಬೇಕಿತ್ತು. ಇನ್ನು ಇ-ಪಾವತಿ ಮೂಲಕ ಮಾಡಬಹುದು.

ರಾಜಿ ಸಂಧಾನ: ಪೂರ್ಣ ಮರುಪಾವತಿ
ಸ್ಥಿರಾಸ್ತಿ, ಒಡಂಬಡಿಕೆಗಳ ಉಲ್ಲಂಘನೆ, ಹಣ ವಸೂಲಾತಿ, ಮಾನನಷ್ಟ ಮತ್ತಿತರ ಸಿವಿಲ್‌ ದಾವೆಗಳನ್ನು ಅರ್ಜಿದಾರರು ಲೋಕ ಅದಾಲತ್‌, ರಾಜಿ-ಸಂಧಾನ ಅಥವಾ ದಾವೆ ವಾಪಸ್‌ ಪಡೆದುಕೊಳ್ಳುವ ಮೂಲಕ ಇತ್ಯರ್ಥಪಡಿಸಿಕೊಂಡ ಪ್ರಕರಣಗಳಲ್ಲಿ ಹಣ ವಾಪಸ್‌ ನೀಡುವಂತೆ ಕೋರ್ಟ್‌ ಆದೇಶ ನೀಡಿದರೆ ಪೂರ್ಣ ಶುಲ್ಕವನ್ನು ಮರು ಪಾವತಿಸಲಾಗುತ್ತದೆ.

ಹಿಂದಿನ ನಿಯಮದಂತೆ ಕೋರ್ಟ್‌ ಶುಲ್ಕ ಮರುಪಾವತಿ ಶೇ.50ರಷ್ಟಿತ್ತು. ಇದಕ್ಕೆ ತಿದ್ದುಪಡಿ ತಂದು ಶೇ.75ಕ್ಕೆ ಹೆಚ್ಚಿಸಲಾಗಿತ್ತು. ಈಗ ಪೂರ್ಣ ಶುಲ್ಕ ಮರುಪಾವತಿಗೆ ಅವಕಾಶ ನೀಡಲಾಗಿದೆ.

ಕೋವಿಡ್‌-19 ಕಾರಣ ಆನ್‌ಲೈನ್‌ ಕಲಾಪಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೇಸ್‌ ಇ-ಫೈಲಿಂಗ್‌, ಸಾಕ್ಷಿ- ಆರೋಪಿಗಳ ಹೇಳಿಕೆ ದಾಖಲು, ಆರೋಪಿಗಳ ಖುದ್ದು ಹಾಜರಿ, ಶುಲ್ಕ ಪಾವತಿ, ವಿವಾಹ ವಿಚ್ಛೇದನ ಪರಿಹಾರ ಸಂದಾಯ ಇತ್ಯಾದಿಗಳನ್ನು ಇ-ಪಾವತಿ ಮೂಲಕ ಮಾಡುವುದು ಮತ್ತಿತರ ವಿಚಾರಗಳ ಬಗ್ಗೆ ಹೈಕೋರ್ಟ್‌ ಮಾರ್ಗಸೂಚಿ ಹೊರಡಿಸಿದೆ. ಇದಕ್ಕೆ ಪೂರಕವಾಗಿ ಸಿವಿಲ್‌ ದಾವೆಗಳ ಇತ್ಯರ್ಥ ಮತ್ತು ಇ-ಪಾವತಿಗೆ ಸಂಬಂಧಿಸಿ ರಾಜ್ಯ ಸರಕಾರ ಅಧ್ಯಾದೇಶ ಹೊರಡಿಸಿದೆ ಎನ್ನಲಾಗಿದೆ.

ಸದ್ಯ ಕೋರ್ಟ್‌ ಕಲಾಪಗಳು ಆನ್‌ಲೈನ್‌ ಮತ್ತು ವೀಡಿಯೋ ಕಾನ್ಫರೆನ್ಸ್‌  ಮೂಲಕ ನಡೆಯುತ್ತಿವೆ. ಕೇಸ್‌ಗಳನ್ನು ಇ-ಫೈಲಿಂಗ್‌ ಮಾಡಿದರೆ ಶುಲ್ಕ ಪಾವತಿಗೆ ಆನ್‌ಲೈನ್‌ನಲ್ಲಿ  ಅವಕಾಶ ಇರಲಿಲ್ಲ. ಅದಕ್ಕಾಗಿ ಶುಲ್ಕ ಮತ್ತು ಮರುಪಾವತಿಗಳ ಆನ್‌ಲೈನ್‌ ಸಂದಾಯಕ್ಕೆ  ಅವಕಾಶ ಮಾಡಿಕೊಡಲು ಕಾಯ್ದೆಯಲ್ಲಿ  ಇ-ಪಾವತಿ ಅಂಶ ಸೇರಿಸಿ ಅಧ್ಯಾದೇಶ ತರಲಾಗಿದೆ.
– ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next