ಹೊಸದಿಲ್ಲಿ: ಚೀನದಲ್ಲಿ ಹುಟ್ಟಿದ ಕೋವಿಡ್ ವೈರಸ್, ವಿಶ್ವಾದ್ಯಂತ ಹರಡಿ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದಂತೆ, ‘ಫ್ಯುಸಾರಿಯಮ್ ವಿಲ್ಟ್ ಟಿಆರ್4’ ಎಂಬ ನೂತನ ಶಿಲೀಂಧ್ರ, ವಿಶ್ವಾದ್ಯಂತ ಬಾಳೆಹಣ್ಣಿನ ತೋಟಗಳ ಮೇಲೆ ದಾಳಿ ಮಾಡಿ, ಬೆಳೆಗಳನ್ನು ನಾಶಪಡಿಸುತ್ತಿದೆ.
ವಿಶ್ವದಲ್ಲಿಯೇ ಅತೀ ಹೆಚ್ಚು ಬಾಳೆಹಣ್ಣು ಬೆಳೆಯುವ ಭಾರತಕ್ಕೂ ಈ ರೋಗ ಆಗಮಿಸಿದ್ದು, ಉತ್ಪಾದನೆಯನ್ನು ಕುಂಠಿತಗೊಳಿಸಿದೆ. ಇದನ್ನು ಮೊದಲಿಗೆ ತೈವಾನ್‌ನಲ್ಲಿ ಗುರುತಿಸಲಾಯಿತು. ಬಳಿಕ ಇದು ಏಷ್ಯಾದಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಿಗೆ ಹರಡಿತು. ಅನಂತರ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿದೆ.
ಲಕ್ಷಣಗಳೇನು?: ಈ ಶಿಲೀಂಧ್ರ ಮೊದಲಿಗೆ ಬಾಳೆಯ ಎಲೆಗಳ ಮೇಲೆ ದಾಳಿ ಮಾಡುತ್ತದೆ. ಅವುಗಳು ಹಳದಿ ಬಣ್ಣಕ್ಕೆ ತಿರುಗಿ ಅನಂತರ ಒಣಗಿ ಉದುರಿ ಹೋಗುತ್ತವೆ. ಬಳಿಕ ಇತರ ಭಾಗಗಳಿಗೆ ಹರಡುತ್ತಿದ್ದಂತೆ ಬಾಳೆ ಗಿಡವೇ ನಾಶವಾಗುತ್ತದೆ.
ಈ ರೋಗ ನಿಯಂತ್ರಣಕ್ಕೆ ಈವರೆಗೂ ಯಾವುದೇ ಕೀಟನಾಶಕ ಕಂಡು ಹಿಡಿಯಲಾಗಿಲ್ಲ. ಇದನ್ನು ಸಸ್ಯ ಪ್ರಪಂಚದ ಕೋವಿಡ್-19 ಎನ್ನಬಹುದು. ಭಾರತದಲ್ಲಿ ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಇದರ ಹಾವಳಿ ಹೆಚ್ಚಾಗಿ ಕಂಡು ಬಂದಿದ್ದು, ದೇಶದ ಹಾಟ್‌ಸ್ಪಾಟ್‌ಗಳಾಗಿವೆ. ಇದರ ನಿಯಂತ್ರಣಕ್ಕೆ ಯತ್ನಿಸುತ್ತಿದ್ದೇವೆ ಎಂದು ತಿರುಚಿಯ ಬಾಳೆಹಣ್ಣು ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕಿ ಎಸ್.ಉಮಾ ಅವರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಫ್ಯುಸಾರಿಯಮ್ ವಿಲ್ಟ್ ಟಿಆರ್4, ಸಸ್ಯರೋಗಗಳ ಪೈಕಿಯೇ ಅತ್ಯಂತ ವಿನಾಶಕಾರಿಯಾಗಿದೆ. ರೋಗ ಹರಡುವಿಕೆ ತಡೆಯಲು ‘ಸಸ್ಯ ಕ್ವಾರಂಟೈನ್’ ಸೇರಿದಂತೆ ಜೈವಿಕ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡುತ್ತಾರೆ. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಬಾಳೆಹಣ್ಣಿನ ತಳಿಯಲ್ಲಿಯೇ ಈ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.