Advertisement

ಈಗ ಹೊಸ ತೊಡಕು; ಸ್ಪೀಕರ್‌ ತೀರ್ಮಾನದ ಮೇಲೆ ಮುಂದಿನ ನಡೆ

06:00 AM Mar 17, 2018 | |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಂಡಾಯ ಶಾಸಕರಿಗೆ ಮತದಾನದ ಹಕ್ಕು ನೀಡಬಾರದು ಎಂದು ಜೆಡಿಎಸ್‌ ಹೈಕೋರ್ಟ್‌ ಮೊರೆ ಹೋಗಲು ಮುಂದಾಗುತ್ತಿದ್ದಂತೆಯೇ ಅಡ್ಡ ಮತದಾನ ಪ್ರಕರಣದ ಮರು ವಿಚಾರಣೆ ಮಾರ್ಚ್‌ 19ಕ್ಕೆ ಸ್ಪೀಕರ್‌ ಕೆ.ಬಿ.ಕೋಳಿವಾಡ ನಿಗದಿಪಡಿಸಿದ್ದಾರೆ.

Advertisement

ಪಕ್ಷಾಂತರ ಆಧಾರದ ಮೇಲೆ ಸದಸ್ಯರ ಅನರ್ಹತೆ ಕೋರಿ ಸಲ್ಲಿಸಿರುವ ಅರ್ಜಿಯ ಮುಂದುವರೆದ ವಿಚಾರಣೆ ಅಂದು ಬೆಳಗ್ಗೆ 11.30 ಕ್ಕೆ ಸ್ಪೀಕರ್‌ ಕೊಠಡಿಯಲ್ಲಿ ನಡೆಯಲಿದೆ. ಬಹುತೇಕ ಅಂದೇ ಸ್ಪೀಕರ್‌ ಅವ ರ ತೀರ್ಪು ಹೊರಬೀಳಬಹುದು ಎಂದು ಹೇಳಲಾಗಿದ್ದು, ಇದೀಗ ಬಂಡಾಯ ಶಾಸಕರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಚಿತ್ತ ಸ್ಪೀಕರ್‌ ತೀರ್ಪಿನತ್ತ ನೆಟ್ಟಿದೆ.

ಮರು ವಿಚಾರಣೆ ಸಂಬಂಧ ಎಲ್ಲ ಶಾಸಕರಿಗೂ ವಿಧಾನಸಬೆ ಕಾರ್ಯದರ್ಶಿ ಎಸ್‌.ಮೂರ್ತಿ ನೋಟಿಸ್‌ ಜಾರಿ ಮಾಡಿದ್ದು ಖುದ್ದು ಅಥವಾ ಅವರ ಪರ ವಕೀಲರು ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಸಿ.ಎನ್‌.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ಅವರ ದೂರಿನ ಆಧಾರದ ಮೇಲೆ ಜಮೀರ್‌ ಅಹಮದ್‌, ಎನ್‌.ಚೆಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಎಚ್‌.ಸಿ.ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್‌ ಅನ್ಸಾರಿ, ಎಸ್‌.ಭೀಮಾನಾಯಕ್‌ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ವಿಪ್‌ ಉಲ್ಲಂ ಸಿ ಅಡ್ಡ ಮತದಾನ ಮಾಡಿ ಪಕ್ಷದ ನಿಯಮ ಉಲ್ಲಂ ಸಿದ್ದ ಏಳು ಶಾಸಕರನ್ನು ಅನರ್ಹತೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿದ್ದು. ಮೂರು ಬಾರಿ ವಿಚಾರಣೆ ನಡೆದು ಸ್ಪಷ್ಟನೆ ಪಡೆಯಲಾಯಿತಾದರೂ ತೀರ್ಪು ಕೊಟ್ಟಿರಲಿಲ್ಲ.

ಇದೀಗ ಮಾರ್ಚ್‌ 23 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೂರನೇ  ಅಭ್ಯರ್ಥಿ ಕಣಕ್ಕಿಳಿಸಿದ್ದು ಜೆಡಿಎಸ್‌ ಬಂಡಾಯ ಶಾಸಕರ ಮತದ ಧೈರ್ಯದ ಮೇಲೆಯೇ.  ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಆದರೆ, ಜೆಡಿಎಸ್‌ ಸಹ ಅಭ್ಯರ್ಥಿ ಕಣಕ್ಕಿಳಿಸಿ ಏಳು ಬಂಡಾಯ ಶಾಸಕರಿಗೆ ಮತದಾನದ ಹಕ್ಕು ನೀಡಬಾರದು. ಅವರ ವಿರುದ್ಧದ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕಾದ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ ಎಂದು ಪಟ್ಟು ಹಿಡಿದಿದೆ. ಜತೆಗೆ ಸ್ಪೀಕರ್‌ ಅವರಿಂದ ನ್ಯಾಯ ಸಿಗದಿದ್ದರೆ ಹೈಕೋರ್ಟ್‌ ಮೊರೆ ಹೋಗುವುದಾಗಿ ತಿಳಿಸಿ ಮಾರ್ಚ್‌ 19 ರಂದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿಯೂ ತಿಳಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಸ್ಪೀಕರ್‌ ಕೋಳಿವಾಡ ದಿಢೀರ್‌ ಮರು ವಿಚಾರಣೆ ನಿಗದಿಪಡಿಸಿದ್ದಾರೆ.

Advertisement

ಏನಾಗಬಹುದು?
ಒಂದೊಮ್ಮೆ, ಜೆಡಿಎಸ್‌ ಹೈಕೋರ್ಟ್‌ ಮೊರೆ ಹೋಗಿ ಸ್ಪೀಕರ್‌ ಬಳಿ ಇರುವ ಅರ್ಜಿ ಇತ್ಯರ್ಥವಾಗುವವರೆಗೆ ಏಳು ಬಂಡಾಯ ಶಾಸಕರು ಮಾರ್ಚ್‌ 23 ರ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡದಿರುವ ತಡೆಯಾಜ್ಞೆ ಬಂದರೆ ಕಷ್ಟ. ಏಳು ಬಂಡಾಯ ಶಾಸಕರಿಗೆ ಮತದಾನದ ಹಕ್ಕು ನಿರಾಕರಣೆಯಾದರೆ ಚುನಾವಣಾ ಕಣದ ಇಡೀ ಚಿತ್ರಣ ಬದಲಾಗಲಿದೆ ಎಂಬ ಆತಂಕ ಹಿನ್ನೆಲೆಯಲ್ಲಿ ದಿಢೀರ್‌ ಮರು ವಿಚಾರಣೆ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಸಂಭಾವ್ಯ ಬೆಳವಣಿಗೆ
ಬಂಡಾಯ ಶಾಸಕರ ಪರ ತೀರ್ಪು ಬಂದರೆ

– ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಹುದು
– ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಗೆಲುವು ಸುಗಮ
– ಕಾಂಗ್ರೆಸ್‌ ಸೇರಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ
– ಜೆಡಿಎಸ್‌ ಅಭ್ಯರ್ಥಿ ಗೆಲುವು ಕಷ್ಟ
ಬಂಡಾಯ ಶಾಸಕರ ವಿರುದ್ಧ ತೀರ್ಪು ಬಂದರೆ
– ರಾಜ್ಯಸಭೆ ಚುನಾವಣೆ ಕಣದ ಚಿತ್ರಣ ಬದಲು
– ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಏಳು ಮತ ಕಡಿಮೆಯಾಗಿ ಗೆಲುವು ಕಷ್ಟವಾಗಬಹುದು
– ಜೆಡಿಎಸ್‌ನ ಅಭ್ಯರ್ಥಿ ಗೆಲುವಿನ ಸಾಧ್ಯತೆಯೂ ಹೆಚ್ಚಾಗಬಹುದು
– ಪಕ್ಷೇತರ ಶಾಸಕರಿಗೆ ಡಿಮ್ಯಾಂಡ್‌ ಸೃಷ್ಟಿಯಾಗಬಹುದು
– ಬಂಡಾಯ ಶಾಸಕರು ಮುಂದಿನ ಚುನಾವಣೆಗೆ ನಿಲ್ಲುವುದು ಕಷ್ಟವಾಗಬಹುದು
ಜೆಡಿಎಸ್‌ ಏನು ಮಾಡಬಹುದು
– ಸ್ಪೀಕರ್‌ ಒಂದೊಮ್ಮೆ ಬಂಡಾಯ ಶಾಸಕರ ಪರ ತೀರ್ಪು ಕೊಟ್ಟರೆ ಹೈಕೋರ್ಟ್‌ ಮೊರೆ ಹೋಗಬಹುದು
– ಮತೊಮ್ಮೆ ಏಳು ಶಾಸಕರಿಗೆ ವಿಪ್‌ ಕೊಟ್ಟು ಉಲ್ಲಂ ಸಿದರೆ  ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕ್ಕೆ “ದಾಖಲೆ’ ಸಿದ್ಧಪಡಿಸಿಕೊಳ್ಳಬಹುದು.
ಕಾನೂನು ತಜ್ಞರು ಏನಂತಾರೆ?
ಸ್ಪೀಕರ್‌ ಅವರು ಒಂದೊಮ್ಮೆ ಸೋಮವಾರ ಮರು ವಿಚಾರಣೆ ನಂತರ ಏಳು ಬಂಡಾಯ ಶಾಸಕರಿಗೆ ಮತದಾನದ ಹಕ್ಕು ನೀಡಿದರೆ ಅದನ್ನು ಜೆಡಿಎಸ್‌ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದಾದರೂ  ರಾಜ್ಯಸಭೆ ಮತದಾನಕ್ಕೆ ಮುಂಚೆ ತೀರ್ಪು ನೀಡುವಂತೆ ಕೇಳುವಂತಿಲ್ಲ. ಆದರೆ, ಫ‌ಲಿತಾಂಶ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಬಹುದು ಅಥವಾ ಜೆಡಿಎಸ್‌ ಆ ಕುರಿತು ಮನವಿಯನ್ನೂ ಮಾಡಬಹುದು.
ಲೆಕ್ಕಾಚಾರ ಏನಾಗಬಹುದು
ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಏಳು ಮತ ಕಡಿಮೆಯಾದರೆ ಪ್ರತಿ ಅಭ್ಯರ್ಥಿಗೆ ಗೆಲ್ಲಲು ಬೇಕಾದ ಮತಗಳ ಸಂಖ್ಯೆಯಲ್ಲೂ ಕಡಿಮೆಯಾಗಲಿದೆ. ಆಗ, ಬೇರೆಯದೇ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next