Advertisement

ಚಕ್ರಬಡ್ಡಿಯ ಮೊತ್ತ ಗ್ರಾಹಕರ ಖಾತೆಗೆ ಗೊಂದಲ ಪರಿಹರಿಸಿ

12:36 AM Oct 28, 2020 | mahesh |

ಕೋವಿಡ್ ವೈರಸ್‌ ಹಾವಳಿ ಆರಂಭವಾದಾಗ ದೇಶಾದ್ಯಂತ ಲಾಕ್‌ಡೌನ್‌ ಜಾರಿ ಮಾಡಲಾಗಿತ್ತು. ಇದರ ಪರಿಣಾಮವು ದೇಶವಾಸಿಗಳ ಆರ್ಥಿಕ ಸ್ಥಿತಿಯ ಮೇಲೂ ಕಾಣಿಸಿಕೊಂಡಿತು. ಇದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಸಾಲ ಮೊರಟೋರಿಯಂ ಸೌಲಭ್ಯ ಕಲ್ಪಿಸಿತ್ತು. ಅಂದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲದಾರರು, ಶೈಕ್ಷಣಿಕ ಸಾಲ ಪಡೆದವರು, ಮನೆ ನಿರ್ಮಾಣಕ್ಕಾಗಿ, ಗೃಹೋಪಯೋಗಿ ವಸ್ತುಗಳ- ವಾಹನಗಳ ಖರೀದಿಗಾಗಿ ಸಾಲ ಮಾಡಿದವರು ಪ್ರತೀ ತಿಂಗಳು ಕಟ್ಟಬೇಕಾಗಿದ್ದ ಇಂಎಂಐ ಅನ್ನು 6 ತಿಂಗಳು ಮುಂದೂಡಬಹುದಾಗಿತ್ತು.

Advertisement

ಆದರೆ ಬ್ಯಾಂಕುಗಳು ಈ ಆರು ತಿಂಗಳ ಅವಧಿಯಲ್ಲಿ ಇಎಂಐ ಪಾವತಿಸದವರಿಗೆ ಬಡ್ಡಿಯ ಜತೆಗೆ ಚಕ್ರಬಡ್ಡಿಯನ್ನೂ ಕಟ್ಟಬೇಕಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಚಕ್ರಬಡ್ಡಿ ಕಟ್ಟಬೇಕು ಎಂದಾದರೆ, ಈ ಸೌಲಭ್ಯದಿಂದ ಜನರಿಗೆ ಲಾಭವೇನಾಯಿತು, ಹೊರೆಯೇ ಹೆಚ್ಚಾಗುತ್ತದಲ್ಲವೇ ಎಂದು ಪ್ರಶ್ನಿಸಲಾಗಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆದ ಅನಂತರ ಕೇಂದ್ರ ಸರಕಾರ ಸಾಲದ ಚಕ್ರಬಡ್ಡಿ ಮನ್ನಾ ಮಾಡಿ ಆದೇಶ ಹೊರಡಿಸಿದ್ದಷ್ಟೇ ಅಲ್ಲದೇ, ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸದ ಮೊತ್ತವನ್ನು ಫ‌ಲಾನುಭವಿಗಳ ಖಾತೆಗೆ ನವೆಂಬರ್‌ 5ರೊಳಗೆ ಜಮೆ ಮಾಡುವಂತೆ ಸೂಚಿಸಿದೆ.

ಈ ಸ್ಕೀಮನ್ನು ಕೇವಲ 2 ಕೋಟಿಯವರೆಗೆ ಸಾಲಪಡೆದವರಿಗಷ್ಟೇ ಅನ್ವಯಿಸಿರುವುದೇಕೆ ಎನ್ನುವ ಪ್ರಶ್ನೆಯೂ ಈ ಹಿಂದೆ ಎದುರಾಗಿತ್ತು, ಸಾಕಷ್ಟು ಎಂಎಸ್‌ಎಇಗಳು ತಾವು 2 ಕೋಟಿಗಿಂತ ಹೆಚ್ಚಿನ ಸಾಲ ಪಡೆದಿದ್ದು, ತಮಗೆ ಅನ್ಯಾಯವಾಗುತ್ತದೆ, ತಮಗೂ ಈ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು. ಆದರೆ ಹೀಗೆ ಮಾಡುವುದರಿಂದಾಗಿ ರಾಷ್ಟ್ರೀಯ ಅರ್ಥ್ಯವ್ಯವಸ್ಥೆ ಮತ್ತು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ದೊಡ್ಡ ಹೊರೆಯಾಗುತ್ತದೆ ಎಂದಿತ್ತು ಕೇಂದ್ರ ಸರಕಾರ.

ಇದೇನೇ ಇದ್ದರೂ, ನವೆಂಬರ್‌ 5ರೊಳಗಾಗಿ ಸಾಲಗಾರರ ಖಾತೆಗೆ ಸರಳಬಡ್ಡಿ ಹಾಗೂ ಚಕ್ರಬಡ್ಡಿಯ ನಡುವಿನ ಅಂತರದ ಹಣ ಜಮೆ ಮಾಡಲು ಸರಕಾರ ನಿರ್ಧರಿಸಿರುವುದು ಒಳ್ಳೆಯ ಸಂಗತಿಯೇ. ಆದರೆ ಈ ಆರು ತಿಂಗಳ ಅವಧಿಯಲ್ಲಿ ಪ್ರತೀ ತಿಂಗಳೂ ಸಂಪೂರ್ಣ ಅಥವಾ ಭಾಗಶಃ ಸಾಲ ಪಾವತಿಸಿದವರಿಗೆ ಏನು ಪ್ರಯೋಜನವಾಯಿತು ಎನ್ನುವ ಪ್ರಶ್ನೆಯೂ ಎದುರಾಗಿದ್ದು, ಅವರೂ ಸಹ ಈಗಿನ ನಿರ್ಣಯದ ಫ‌ಲಾನುಭವಿಗಳಾಗುತ್ತಾರೆ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ ಪ್ರತೀ ತಿಂಗಳೂ ಸಂಪೂರ್ಣ ಅಥವಾ ಭಾಗಶಃ ಸಾಲ ಪಾವತಿಸಿದವರ ಹಾಗೂ ಆರು ತಿಂಗಳ ಮೊರಟೋರಿಯಂ ಪಡೆದವರ ನಡುವೆ ಏಕರೂಪದಲ್ಲಿ ಲೆಕ್ಕಾಚಾರ ಹೇಗೆ ಹಾಕಲಾಗುತ್ತದೆ ಎನ್ನುವ ಬಗ್ಗೆ ಸಾರ್ವಜನಿಕರಲ್ಲಂತೂ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರದಲ್ಲಿ ಸರಕಾರ ಮತ್ತಷ್ಟು ಸ್ಪಷ್ಟತೆಯೊಂದಿಗೆ ಮುಂಬರುವುದು ಒಳಿತು.

ಇನ್ನು ನಿಗದಿತ ಅವಧಿಯೊಳಗೇ ಎಲ್ಲ ಬ್ಯಾಂಕುಗಳು ಖಾತೆದಾರರಿಗೆ ಸರಳ ಬಡ್ಡಿ – ಚಕ್ರಬಡ್ಡಿ ನಡುವಿನ ಅಂತರದ ಹಣವನ್ನು ಜಮೆ ಮಾಡುವುದೂ ಮುಖ್ಯವಾಗುತ್ತದೆ. ಇದು ದೊಡ್ಡ ಮೊತ್ತವಾಗಿದ್ದರೂ, ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಬ್ಯಾಂಕುಗಳು ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಆರ್‌ಬಿಐ ಸಾಲದಾತ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು, ಹೌಸಿಂಗ್‌ ಫೈನಾನ್ಸ್‌ ಕಂಪೆನಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ಜಾರಿ ಮಾಡಲಿ. ವಿಳಂಬವಾದಷ್ಟೂ ಆರ್ಥಿಕ ಸಂಕಷ್ಟದಿಂದ ಜರ್ಜರಿತರಾಗಿರುವ ಜನರಿಗೆ ಹೊರೆ ಹೆಚ್ಚುತ್ತಲೇ ಹೋಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next