ನ್ಯೂಯಾರ್ಕ್: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಈ ವರ್ಷದ ತಮ್ಮ ಸತತ ಗೆಲುವಿನ ಓಟವನ್ನು 25 ಪಂದ್ಯಗಳಿಗೆ ವಿಸ್ತರಿಸಿದ್ದಾರೆ. ಯುಎಸ್ ಓಪನ್ ಪಂದ್ಯಾವಳಿಯ ತೃತೀಯ ಸುತ್ತು ಪ್ರವೇಶಿಸುವ ಮೂಲಕ ಸರ್ಬಿಯನ್ ಟೆನಿಸಿಗ ಈ ಹೆಗ್ಗಳಿಕೆಗೆ ಪಾತ್ರರಾದರು.
ಬುಧವಾರ ರಾತ್ರಿಯ ದ್ವಿತೀಯ ಸುತ್ತಿನ ಮುಖಾಮುಖಿಯಲ್ಲಿ ಜೊಕೋವಿಕ್ ಬ್ರಿಟನ್ನಿನ ಕೈಲ್ ಎಡ್ಮಂಡ್ಸ್ ಅವರನ್ನು 6-7 (5-7), 6-3, 6-4, 6-2 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಅವರಿನ್ನು ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ ಸವಾಲನ್ನು ಎದುರಿಸುವರು. ಸ್ಟ್ರಫ್ ಅಮೆರಿಕದ ಮೈಕಲ್ ಮೋ ವಿರುದ್ಧ 6-2, 6-2, 7-5 ಅಂಕಗಳಿಂದ ಗೆದ್ದು ಬಂದರು.
ವರ್ಷವೊಂದರಲ್ಲಿ ಸತತ 25 ಪಂದ್ಯಗಳನ್ನು ಗೆದ್ದದ್ದು ಜೊಕೋವಿಕ್ ಅವರ 2ನೇ ಅತ್ಯುತ್ತಮ ಸಾಧನೆಯಾಗಿದೆ. 2011ರಲ್ಲಿ ಅವರು ಸತತ 41 ಪಂದ್ಯಗಳಲ್ಲಿ ಗೆದ್ದು ಬಂದಿದ್ದರು. ಕೆನಡಾದ ಡೆನ್ನಿಸ್ ಶಪೊವಲೋವ್, ಗ್ರೀಸ್‌ನ ಸ್ಟೆಫನಸ್ ಸಿಸಿಪಸ್ 3ನೇ ಸುತ್ತು ಪ್ರವೇಶಿಸಿದ ಉಳಿದಿಬ್ಬರು ಪ್ರಮುಖ ಆಟಗಾರರು. ಶಪೊವಲೋವ್ ದಕ್ಷಿಣ ಕೊರಿಯಾದ ನೋನ್ ಸೂನ್ ವೂ ಅವರನ್ನು 6-7 (5-7), 6-4, 6-4, 6-2ರಿಂದ ಪರಾಭವಗೊಳಿಸಿದರೆ, ಸಿಸಿಪಸ್ ಅಮೆರಿಕದ ಮ್ಯಾಕ್ಸಿಮ್ ಕ್ರೇಸಿ ವಿರುದ್ಧ 7-6 (7-2), 6-3, 6-4 ಅಂತರದ ಮೇಲುಗೈ ಸಾಧಿಸಿದರು.
ಸಿಸಿಪಸ್ ಅವರ ಮುಂದಿನ ಸುತ್ತಿನ ಎದುರಾಳಿ ಕ್ರೊವೇಶಿಯಾದ ಬೋರ್ನ ಕೊರಿಕ್. ಅವರು ಆರ್ಜೆಂಟೀನಾದ ಜುವಾನ್ ಇಗ್ನೇಸಿಯೊ ಲೊಂಡೆರೊ ವಿರುದ್ಧ 5 ಸೆಟ್‌ಗಳ ಸೆಣಸಾಟದಲ್ಲಿ ಗೆದ್ದು ಬಂದರು. ಶಪೊವಲೋವ್ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಆಡಲಿದ್ದಾರೆ. ಅವರು ಫ್ರಾನ್ಸ್‌ನ ಗಿಲ್ಲೆಸ್ ಸಿಮೋನ್‌ಗೆ ಸೋಲುಣಿಸಿದರು.
ದಿವಿಜ್ ಜೋಡಿಗೆ ಸೋಲು
ಭಾರತದ ದಿವಿಜ್ ಶರಣ್-ಸರ್ಬಿಯಾದ ನಿಕೋಲ ಕ್ಯಾಸಿಕ್ ಜೋಡಿ ಪುರುಷರ ಡಬಲ್ಸ್ ಸ್ಪರ್ಧೆಯ ಪ್ರಥಮ ಸುತ್ತಿನಲ್ಲೇ ಸೋಲನುಭವಿಸಿದೆ. ಕ್ರೊವೇಶಿಯಾದ ಮೆಕ್ಟಿಕ್-ಕೂಲೋಫ್ ಜೋಡಿ ಇವರೆದುರಿನ ಪಂದ್ಯವನ್ನು 6-4, 3-6, 6-3 ಅಂತರದಿಂದ ಜಯಿಸಿತು.