Advertisement

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

07:46 PM May 05, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಭಾನುವಾರ ಅಂತ್ಯಗೊಂಡಿದೆ. ಕೇಂದ್ರ ಸಚಿವರು ಸೇರಿ ಹಲವು ಪ್ರಮುಖ ನಾಯಕರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆಯಲಿದೆ.

Advertisement

14 ಕ್ಷೇತ್ರಗಳಾದ ಬೆಳಗಾವಿ, ಉತ್ತರ ಕನ್ನಡ, ಚಿಕ್ಕೋಡಿ, ಬಾಗಲಕೋಟೆ, ಬೀದರ್, ಹಾವೇರಿ, ಧಾರವಾಡ, ಕೊಪ್ಪಳ, ಬಳ್ಳಾರಿ , ರಾಯಚೂರು, ವಿಜಯಪುರ, ದಾವಣಗೆರೆ, ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಮತದಾನ ನಡೆಯಲಿದೆ.

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ನಡುವೆಯೇ ಅಬ್ಬರದ ಪ್ರಚಾರ ಅಂತ್ಯಗೊಂಡಿದೆ. ಲೈಂಗಿಕ ಹಗರಣದ ವಿಚಾರವೇ ಪ್ರಮುಖ ವಿಚಾರವಾಗಿರುವ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಯ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಮುಗಿಸಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಪ್ರಮುಖ ಕಾಂಗ್ರೆಸ್ ನಾಯಕರು ಚುನಾವಣ ಪ್ರಚಾರ ಸಭೆಗಳಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಆರೋಪದ ಮೇಲೆ ಬಿಜೆಪಿಯ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ‘ಸಾಮೂಹಿಕ ಅತ್ಯಾಚಾರಿ’ ಪರವಾಗಿ ಮತ ಕೇಳಿದ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ವಾಗ್ದಾಳಿ ನಡೆಸಿದ್ದರು.

2019 ರ ಚುನಾವಣೆಯಲ್ಲಿ ಎಲ್ಲಾ 14 ಸ್ಥಾನಗಳನ್ನು ಗೆದ್ದಿದ್ದರಿಂದ ಮಂಗಳವಾರ ನಡೆಯಲಿರುವ ಮತದಾನ ಬಿಜೆಪಿಗೆ ಹೆಚ್ಚು ಮಹತ್ವದ್ದಾಗಿದೆ. ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು.

Advertisement

ಮೇ 7 ರಂದು ನಡೆಯಲಿರುವ ಚುನಾವಣೆಗೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧಾರವಾಡದಿಂದ ಸತತ ಐದನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (ಹಾವೇರಿ) ಮತ್ತು ಜಗದೀಶ್ ಶೆಟ್ಟರ್ (ಬೆಳಗಾವಿ) ಯಿಂದ ಕಣಕ್ಕಿಳಿದಿದ್ದಾರೆ.

ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (ಉತ್ತರ ಕನ್ನಡ) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ (ಶಿವಮೊಗ್ಗ) ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ.

ಫೆಬ್ರವರಿಯಲ್ಲಿ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ್ ನಿಧನ ಹೊಂದಿದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಮೇ 7 ರಂದು ಉಪಚುನಾವಣೆ ನಡೆಯುತ್ತಿದೆ.

ಚುನಾವಣಾ ಆಯೋಗದ ಪ್ರಕಾರ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಹುಜನ ಸಮಾಜ ಪಕ್ಷ 9 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. 117 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಅಲ್ಲದೆ, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಂದ 73 ಮಂದಿ ಸ್ಪರ್ಧಿಸುತ್ತಿದ್ದಾರೆ. 14 ಕ್ಷೇತ್ರಗಳಲ್ಲಿ 2.59 ಕೋಟಿ ಮತದಾರರಿದ್ದು, ಒಟ್ಟು 28,257 ಮುಖ್ಯ ಮತಗಟ್ಟೆಗಳಿವೆ ಎಂದು ಚುನಾವಣ ಆಯೋಗ ತಿಳಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಲಬುರಗಿಯಲ್ಲಿ ಸಂಸದ ಡಾ. ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ (ಬೀದರ್), ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ (ಬೆಳಗಾವಿ), ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ್ (ಬಾಗಲಕೋಟೆ) ನಟ ಶಿವರಾಜಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ (ಶಿವಮೊಗ್ಗ)ದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ದಾವಣಗೆರೆಯಿಂದ ಕರ್ನಾಟಕದ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದ್ದು, ಹಾಲಿ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಸ್ಪರ್ಧೆ ನೀಡುತ್ತಿದ್ದಾರೆ.

14 ಕ್ಷೇತ್ರಗಳಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣ ಆಯೋಗ ವ್ಯಾಪಕ ವ್ಯವಸ್ಥೆಗಳನ್ನೂ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next