ನ್ಯೂಯಾರ್ಕ್: ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಸ್ವಿಯಾಟೆಕ್ ಅವರನ್ನು ಕೆಳಗಿಳಿಸುವ ಮೂಲಕ ನೊವಾಕ್ ಜೊಕೋವಿಕ್ ಮತ್ತು ಅರಿನಾ ಸಬಲೆಂಕಾ ಟೆನಿಸ್ ಲೋಕದ ನೂತನ ನಂಬರ್ ವನ್ ಆಟಗಾರರೆಂಬ ಗೌರವಕ್ಕೆ ಭಾಜನರಾಗಿದ್ದಾರೆ.
ಇವರಲ್ಲಿ ನೊವಾಕ್ ಜೊಕೋವಿಕ್ ಮರಳಿ ಅಗ್ರಸ್ಥಾನ ಅಲಂಕರಿಸಿದರೆ, ಅರಿನಾ ಸಬಲೆಂಕಾ ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರರಾದರು. ಯುಎಸ್ ಓಪನ್ ಚಾಂಪಿಯನ್ ಖ್ಯಾತಿಯ ಜೊಕೋವಿಕ್ ತಮ್ಮ ಅಗ್ರಪಟ್ಟವನ್ನು ದಾಖಲೆಯ 390ನೇ ವಾರಕ್ಕೆ ವಿಸ್ತರಿಸಿದರು.
ಮರಳಿ ನಂ.1 ಪಟ್ಟ ಅಲಂಕರಿಸಬೇಕಾದರೆ ಜೊಕೋವಿಕ್ ಯುಎಸ್ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯವನ್ನು ಜಯಿಸಿದರೆ ಸಾಕಿತ್ತು. ಇದೇ ವೇಳೆ ಸ್ಟೆಫನಸ್ ಸಿಸಿಪಸ್ ಮತ್ತು ಆ್ಯಂಡ್ರೆ ರುಬ್ಲೇವ್ 2 ಸ್ಥಾನ ಮೇಲೇರಿದರು.
ವನಿತಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್ ದ್ವಿತೀಯ ಸ್ಥಾನಕ್ಕೆ ಕುಸಿದರು. ಯುಎಸ್ ಓಪನ್ ಚಾಂಪಿಯನ್ ಎನಿಸಿಕೊಂಡು ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಕೊಕೊ ಗಾಫ್ 3 ಸ್ಥಾನ ಮೇಲೇರಿ ಮೂರನೇ ಸ್ಥಾನ ಅಲಂಕರಿಸಿದರು. ಇದು ಗಾಫ್ ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ.
ಬೋಪಣ್ಣ 7 ಸ್ಥಾನ ಪ್ರಗತಿ
ಯುಎಸ್ ಓಪನ್ ಡಬಲ್ಸ್‌ನಲ್ಲಿ ಫೈನಲ್ ತನಕ ಸಾಗಿದ ರೋಹನ್ ಬೋಪಣ್ಣ ಪುರುಷರ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಏರಿದ್ದಾರೆ. ಅವರದು 7 ಸ್ಥಾನಗಳ ಜಿಗಿತ. ಸಿಂಗಲ್ಸ್‌ನಲ್ಲಿ ಸುಮಿತ್ ನಾಗಲ್ 33 ಸ್ಥಾನ ಮೇಲೇರಿದ್ದು, 156ನೇ ರ್‍ಯಾಂಕಿಂಗ್ ಪಡೆದಿದ್ದಾರೆ.