Advertisement

ನೋವಾ 3 ಐ: ನೋ ಅನ್ನಂಗಿಲ್ಲ!

04:00 AM Oct 29, 2018 | |

ಮೊನ್ನೆ ಮೊನ್ನೆಯಷ್ಟೇ ಮಾರುಕಟ್ಟೆಗೆ ಬಂದ ಹೊಸ ಫೋನ್‌ ಹುವಾವೇ ನೋವಾ 3ಐ. ಈ ಫೋನ್‌ ಹೇಗಿದೆ? ಇದರ ಪ್ಲಸ್‌ ಪಾಯಿಂಟ್‌ಗಳೇನು? ಹಾಗೆಯೇ, ಇದಕ್ಕಿರುವ ನೆಗೆಟಿವ್‌ ಅಂಶಗಳು ಏನೇನು? ಈ ಕುರಿತಂತೆ ಇಲ್ಲಿ ವಿವರಣೆಯಿದೆ…

Advertisement

ಹುವಾವೇ ಕಂಪೆನಿಯ ನೋವಾ 3ಐ ಮೀಡಿಯಂ ಸೆಗ್‌ಮೆಂಟ್‌ (ಮಧ್ಯಮ ವಿಭಾಗ) ಫೋನ್‌. ಇದು ಭಾರತದಲ್ಲಿ ಇತ್ತೀಚಿಗೆ ಬಿಡುಗಡೆಯಾಗಿದೆ. ಈ ಫೋನ್‌ ಹೇಗಿದೆ ಗೊತ್ತಾ? ಬಾಕ್ಸ್‌ ತೆರೆದು ಮೊಬೈಲ್‌ ಅನ್ನು ಕೈಯಲ್ಲಿ ಹಿಡಿದೊಡನೆ ಅದು ಎಲ್ಲರ ಗಮನ ಸೆಳೆಯುವುದು ಗ್ಯಾರಂಟಿ. ವಿಮರ್ಶೆಗೆ ನಾನು ಬಳಸಿದ್ದು ಐರಿಸ್‌ ಪರ್ಪಲ್‌ ಬಣ್ಣದ ಫೋನು. ನೇರಳೆ ಮತ್ತು ನೀಲಿ ಬಣ್ಣ ಮಿಶ್ರಿತವಾದ ಶಕ್ತಿಶಾಲಿಯಾದ ಗಾಜಿನ ದೇಹವುಳ್ಳ ಫೋನಿದು. ಗಾಜಿನ ಬಾಡಿಯ ಅಂಚಿನಲ್ಲಿ ಲೋಹವಿದೆ.

ಫೋನನ್ನು ಎದುರು ಹಿಡಿದಾಗ ನಮ್ಮ ಎಡಕ್ಕೆ ಸಿಮ್‌ ಹಾಕುವ ಟ್ರೇ ಇದೆ. ಇದರಲ್ಲಿ ಎರಡು ನ್ಯಾನೋ ಸಿಮ್‌ ಅಥವಾ ಒಂದು ನ್ಯಾನೋ ಸಿಮ್‌ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಹಾಕಬಹುದು ( ಇದನ್ನು ಹೈಬ್ರಿಡ್‌ ಸಿಮ್‌ ಸ್ಲಾಟ್‌ ಎಂದು ಕರೆಯಲಾಗುತ್ತದೆ) ಫೋನಿನ ತಳ ಭಾಗದಲ್ಲಿ ಎಡಕ್ಕೆ 3.5 ಎಂಎಂ ಆಡಿಯೋ ಜಾಕ್‌ ಕಿಂಡಿ, ಮಧ್ಯದಲ್ಲಿ ಮೈಕ್ರೋ ಯುಎಸ್‌ಬಿ ಕಿಂಡಿ, (ಟೈಪ್‌ ಸಿ ಪೋರ್ಟ್‌ ಇಲ್ಲ), ಅದರ ಪಕ್ಕ ಮೈಕ್ರೋಫೋನ್‌ ಹೋಲ್‌, ಅದರ ಪಕ್ಕದಲ್ಲಿ ಸ್ಪೀಕರ್‌ ಇದೆ. ಹಿಂಬದಿಯ ಎಡಭಾಗದಲ್ಲಿ ಉದ್ದಕ್ಕೆ ಡುಯಲ್‌ ಲೆನ್ಸ್‌ ಕ್ಯಾಮರಾ ಮತ್ತು ಫ್ಲಾಶ್‌ ಇದೆ.

ಮಧ್ಯದಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಇದೆ. 1080*2340 ಫ‌ುಲ್‌ ಎಚ್‌ಡಿ ಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಇದ್ದು, 409 ಪಿಪಿಐ ಹೊಂದಿದೆ. ಹೀಗಾಗಿ ಮೊಬೈಲ್‌ನ ಪರದೆ, ಇಂಟರ್‌ಫೇಸ್‌ ಮತ್ತು ಚಿತ್ರಗಳು, ಆ್ಯಪ್‌ಗ್ಳು ತುಂಬಾ ರಿಚ್‌ ಆಗಿ ಕಾಣುತ್ತವೆ. ಈಗಿನ ಫ್ಯಾಷನ್‌ ಆಗಿರುವ ನಾಚ್‌ ಡಿಸ್‌ಪ್ಲೇ ಮೊಬೈಲ್‌ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.  ಫಿಂಗರ್‌ ಪ್ರಿಂಟ್‌ ಸೆನ್ಸರ್‌ ವೇಗ ಚೆನ್ನಾಗಿದೆ. ಜೊತೆಗೆ, ಫೇಸ್‌ ಅನ್‌ಲಾಕ್‌ ಕೂಡ ಇದ್ದು, ವೇಗವಾಗಿ ಮತ್ತು ಮಂದ ಬೆಳಕಿನಲ್ಲೂ ಕೆಲಸ ಮಾಡುತ್ತದೆ. ವಿನ್ಯಾಸದಲ್ಲಿ ಇದು ಸುಂದರ ಮೊಬೈಲ್‌.

ಇಂಟರ್‌ಫೇಸ್‌ ಮತ್ತು ಪ್ರೊಸೆಸರ್‌ ಸಾಮರ್ಥ್ಯ: ಈ ಮೊಬೈಲ್‌ ಅಂಡ್ರಾಯ್ಡ ಓರಿಯೋ 8.2 ಕಾರ್ಯಾಚರಣಾ ವ್ಯವಸ್ಥೆ ಹೊಂದಿದೆ. ಅದಕ್ಕೆ ಹುವಾವೇದವರ ಎಮೋಷನ್‌ ಯೂಸರ್‌ ಇಂಟರ್‌ಫೇಸ್‌ ಇದೆ. ಪ್ಯೂರ್‌ ಅಂಡ್ರಾಯ್ಡ ಜೊತೆಯಲ್ಲಿ ಅದಕ್ಕೆ ಹೊಂದಿಕೊಂಡಂತೆ ಮಾಡಿರುವ ಈ ಯುಐನಿಂದ ಗ್ರಾಹಕರಿಗೆ ಅನೇಕ ಪ್ರಯೋಜನಗಳು, ಶಾರ್ಟ್‌ ಕಟ್‌ಗಳು, ಆಕರ್ಷಕ ಥೀಮ್‌ಗಳು ದೊರಕುತ್ತವೆ. ಫೋನ್‌ ಲಾಕ್‌ ಆಗಿದ್ದಾಗಲೂ ಫೋನ್‌ನಲ್ಲಿ ಟಾರ್ಚ್‌, ಕ್ಯಾಲುಕುಲೇಟರ್‌, ಸೌಂಡ್‌ ರೆಕಾರ್ಡಿಂಗ್‌ ಮಾಡಬಹುದು,

Advertisement

ಫೋಟೋ ತೆಗೆಯಬಹುದು (ಫೋನ್‌ ಲಾಕ್‌ ಆಗಿದ್ದ ಮೇಲೆ ಫೋಟೋ ತೆಗೆದು ಹಾಗೆಯೇ ಅದರಲ್ಲಿರುವ ಫೋಟೋಗಳನ್ನು ನೋಡಿಬಿಡಬಹುದಲ್ಲವೇ? ಎಂಬ ಸಂದೇಹ ಬೇಡ. ಗ್ಯಾಲರಿ ನೋಡಲಾಗುವುದಿಲ್ಲ!) ಇದರಲ್ಲಿ ಹುವಾವೇ ಕಂಪೆನಿಯದೇ ಆದ ಕಿರಿನ್‌ 710 ಪ್ರೊಸೆಸರ್‌ ಇದೆ. (ಇದೇ ಪ್ರೊಸೆಸರ್‌ ಆನರ್‌ 8ಎಕ್‌ ನಲ್ಲೂ ಇದೆ) ಇದು ಮಧ್ಯಮ ದರ್ಜೆಯ 8 ಕೋರ್‌ಗಳ ಪ್ರೊಸೆಸರ್‌ ಆಗಿದ್ದು,  4 ಕೋರ್‌ಗಳು ಕಾರ್ಟೆಕ್ಸ್‌ ಎ73 2.2 ಗಿಗಾ ಹಟ್ಜ್ ಮತ್ತು ಇನ್ನು 4 ಪ್ರೊಸೆಸರ್‌ಗಳು ಕಾರ್ಟೆಕ್ಸ್‌ ಎ53 1.7 ಗಿ.ಹ. ಸಾಮರ್ಥ್ಯ ಹೊಂದಿವೆ.

ಹೀಗಾಗಿ ಫೋನು ವೇಗವಾಗಿ ಕೆಲಸ ಮಾಡುತ್ತದೆ. ಎಲ್ಲಿಯೂ ನಿಧಾನ ಅನಿಸುವುದಿಲ್ಲ. ಬಟರಿ ಸ್ಮೂತ್‌ ಅಂತಾರಲ್ಲ,  ಹಾಗೆ ಕೆಲಸ ನಿರ್ವಹಿಸುತ್ತದೆ. ಆ್ಯಪ್‌ಗ್ಳು ವೇಗವಾಗಿ ತೆರೆದುಕೊಳ್ಳುತ್ತವೆ. 4 ಜಿಬಿ ರ್ಯಾಮ್‌ ಇದ್ದು, ರ್ಯಾಮ್‌ ಮ್ಯಾನೇಜ್‌ಮೆಂಟ್‌ ಚೆನ್ನಾಗಿದೆ. ಹತ್ತಾರು ಆ್ಯಪ್‌ಗ್ಳನ್ನು ತೆರೆದರೂ 4ಜಿಬಿಯಲ್ಲಿ 2.3 ಜಿಬಿ ರ್ಯಾಮ್‌ ಫ್ರೀ ಇತ್ತು. ಇದರಲ್ಲಿ 128 ಜಿಬಿ ಆಂತರಿಕ ಸ್ಟೋರೇಜ್‌ ಇರುವುದು ವಿಶೇಷ.

ಇದರಿಂದ ನಿಮ್ಮ ಹೆಚ್ಚಿನ ವಿಡಿಯೋ ಫೋಟೋಗಳನ್ನು ತುಂಬಿಕೊಳ್ಳಬಹುದು! ಗೇಮ್‌ಗಾಗಿ ಪ್ರತ್ಯೇಕ ಮಾಲಿ ಜಿ51 ಚಿಪ್‌ಸೆಟ್‌ ಇದೆ. ಜೊತೆಗೆ ಗೇಮ್‌ಗಳನ್ನು ಅಡೆತಡೆಯಿಲ್ಲದಂತೆ  ಆಡಲು ಹುವಾವೇ ಹೊಸದಾಗಿ ಜಿಪಿಯು ಟಬೋì ಟೆಕ್ನಾಲಜಿ ಎಂಬ ವಿಶೇಷ ತಂತ್ರಜ್ಞಾನ ಅಳವಡಿಸಿದೆ. ಈ ಟೆಕ್ನಾಲಜಿಯಿಂದಾಗಿ ಗೇಮ್‌ಗಳನ್ನು ಸರಾಗವಾಗಿ ಆಡಬಹುದಾಗಿದೆ ಮತ್ತು ಫ್ರೆàಂಗಳು ಡ್ರಾಪ್‌ ಆಗುವುದಿಲ್ಲ.

ಕ್ಯಾಮರಾ..ಆ್ಯಕ್ಷನ್‌: ಕ್ಯಾಮರಾಕ್ಕೆ ಹುವಾವೇ ಹೆಚ್ಚಿನ ಒತ್ತು ನೀಡುತ್ತದೆ. ಇದರಲ್ಲಿ ಕೃತಕ ಬುದ್ಧಿ ಮತ್ತೆ (ಎಐ) ಕ್ಯಾಮರಾ ಇದೆ.  ಆದರೆ ಹಿಂಬದಿಯಲ್ಲಿ 16 ಪ್ಲಸ್‌ 2 ಮೆ.ಪಿ. ಕ್ಯಾಮರಾ ಇದೆ. ಎಐ ಅನ್ನು ಆಯ್ಕೆ ಮಾಡಿಕೊಂಡು ಫೋಟೋ ತೆಗೆದರೆ, ನೀವು ಯಾವ ಸೀನ್‌ ಮೇಲೆ ಕ್ಯಾಮರಾ ಹಿಡಿಯುತ್ತೀರೋ ಅದಕ್ಕೆ ತಕ್ಕಂತೆ ಬೆಳಕು, ಬಣ್ಣಗಳನ್ನು ತಾನೇ ಸರಿಪಡಿಸಿಕೊಳ್ಳುತ್ತದೆ.

ಕ್ಯಾಮರಾವನ್ನು ಗಿಡಗಳ ಮೇಲೆ ಫೋಕಸ್‌ ಮಾಡಿದರೆ, ಪ್ಲಾಂಟ್‌ ಎಂದು ತೋರಿಸುತ್ತದೆ. ನಾಲ್ಕಾರು ಜನರು ನಿಂತ ಫೋಟೋ ತೆಗೆದರೆ ಗ್ರೂಪ್‌ ಫೋಟೋ ಎಂದು ನಮೂದು ಮಾಡುತ್ತದೆ.  ಅದರ ಬಜೆಟ್‌ಗೆ ಹೋಲಿಸಿದರೆ ಕ್ಯಾಮರಾ ಗುಣಮಟ್ಟ ಚೆನ್ನಾಗಿದೆ. 24 ಪ್ಲಸ್‌ 2 ಮೆಗಾಪಿಕ್ಸಲ್‌ ಕ್ಯಾಮರಾ ಇದೆ. ವಿಡಿಯೋದಲ್ಲಿ ಸೂಪರ್‌ ಸ್ಲೋ ಮೋಷನ್‌ ಮೋಡ್‌ ಇದ್ದು, ಸೆಕೆಂಡಿಗೆ 480 ಫ್ರೆàಮ್‌ಗಳು ಚಲಿಸುವ ಮೂಲಕ, ಮಕ್ಕಳ ಕುಣಿದಾಟ ಓಡುವಿಕೆ ವಿಡಿಯೋಗಳು ವಿಶಿಷ್ಟವಾಗಿ ಕಂಡವು.

ಬ್ಯಾಟರಿ: ಸತತವಾಗಿ ಬಳಸಿದರೂ, ಬ್ಯಾಟರಿ ಒಂದು ದಿನ ಪೂರ್ತಿ ಬರುತ್ತದೆ. ಮಧ್ಯ ಮಧ್ಯ ನೆಟ್‌ ಆನ್‌ ಮಾಡಿಕೊಂಡು, ಮಧ್ಯಮ ಪ್ರಮಾಣದಲ್ಲಿ ಬಳಸಿದರೆ ಒಂದೂವರೆ ದಿನ ಬರುತ್ತದೆ. (3340 ಎಂಎಎಚ್‌). ಕರೆ ಗುಣಮಟ್ಟ ತೃಪ್ತಿಕರವಾಗಿದೆ.

ಈ ಫೋನಿನಲ್ಲಿ ಕಂಡು ಬಂದ ಕೊರತೆಗಳು: ಪ್ರತಿ ಫೋನಿನಲ್ಲೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಬಜೆಟ್‌ ಫೋನ್‌ಗಳಲ್ಲಂತೂ ಕಂಪೆನಿಗಳು ಒಂದು ಕೊಟ್ಟು ಒಂದು ಕಿತ್ತುಕೊಳ್ಳುತ್ತವೆ. ಈ ವರ್ಗದ ಫೋನಿಗೆ ಫಾಸ್ಟ್‌ ಚಾರ್ಜರ್‌ ಖಂಡಿತ ಬೇಕಿತ್ತು. ಟೈಪ್‌ ಸಿ ಯುಎಸ್‌ಬಿ ಕಿಂಡಿ ಹಾಗೂ ಚಾರ್ಜರ್‌ ಕೊಡಬೇಕಿತ್ತು.. ಮುಂಬದಿ 24 ಮೆ.ಪಿ ಕ್ಯಾಮರಾ ಕೊಟ್ಟಂತೆ, ಹಿಂಬದಿಯಲ್ಲೂ 24+2 ಮೆಪಿ ಕ್ಯಾಮರಾ ಇರಬೇಕಿತ್ತು.  ಬ್ಯಾಟರಿ 3750  ಎಂಎಎಚ್‌ ಬೇಕಾಗಿತ್ತು. 128 ಜಿಬಿ ರೋಮ್‌ ಕೊಟ್ಟ ಮೇಲೆ, 6 ಜಿಬಿ ರ್ಯಾಮ್‌ ಇರಬೇಕು. ಇಷ್ಟಿದ್ದರೆ ಇದು ಇನ್ನೂ ಉತ್ತಮ ಮೊಬೈಲ್‌ ಆಗಿರುತ್ತಿತ್ತು. 

ಹುವಾವೇ ನೋವಾ 3ಐ ಸ್ಪೆಸಿಫಿಕೇಶನ್‌:  4 ಜಿಬಿ ರ್ಯಾಮ್‌, 128 ಜಿಬಿ ಆಂತರಿಕ ಸ್ಟೋರೇಜ್‌, 6.3 ಇಂಚಿನ ಎಫ್ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ, 24+2 ಮೆಗಾಪಿಕ್ಸಲ್‌ ಯುಗಳ ಸೆಲ್ಫಿ ಕ್ಯಾಮರಾ, 16+2 ಮೆಗಾಪಿಕ್ಸಲ್‌ ಯುಗಳ ಹಿಂಬದಿ ಕ್ಯಾಮರಾ. ಕಿರಿನ್‌ 710 ಎಂಟು ಕೋರ್‌ಗಳ ಪ್ರೊಸೆಸರ್‌, 3340 ಎಂಎಎಚ್‌ ಬ್ಯಾಟರಿ, ಮೈಕ್ರೋ ಯುಎಸ್‌ಬಿ ಟೈಪ್‌ ಚಾರ್ಜರ್‌. (ಗೇಮ್‌ಗಾಗಿ) ಜಿಪಿಯು ಟಬೋì, ಡುಯಲ್‌ ವಿಓಎಲ್‌ಟಿಇ. ಐರಿಸ್‌ ಪರ್ಪಲ್‌ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯ. ದರ. 21,000 ರೂ. ಅಮೆಜಾನ್‌ ನಲ್ಲಿ ಮಾತ್ರ ಲಭ್ಯ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next