Advertisement

ಎಂಡೋ ಪೀಡಿತ ಗ್ರಾಮಗಳ ನೀರಿನ ಪರೀಕ್ಷೆಗೆ ಸೂಚನೆ

08:57 AM Nov 15, 2018 | |

ಮಂಗಳೂರು: ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರಿನಲ್ಲಿ ಇನ್ನೂ ವಿಷಕಾರಿ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಜಂಟಿ ಸಮಿತಿ ರಚಿಸುವಂತೆ ವಿಧಾನ ಪರಿಷತ್‌ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ. ಕೊಂಡಯ್ಯ ಜಿಲ್ಲಾಧಿಕಾರಿಗೆ ಸೂಚಿಸಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋ ಸಂತ್ರಸ್ತರಿಗೆ ಹಾಗೂ ಮೃತ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ 92 ಗ್ರಾಮಗಳಲ್ಲಿ ಎಂಡೋ ಸಿಂಪಡಿಸಲಾಗಿದ್ದು, ಆ ಪ್ರದೇಶದ ಪ್ರತಿಯೊಂದು ಮನೆಯ ಬಾವಿ ಹಾಗೂ ಬೋರ್‌ವೆಲ್‌ಗ‌ಳ ನೀರು ಪರೀಕ್ಷೆ ಮಾಡಬೇಕು.  ಸ್ಯಾಂಪಲ್‌ ತೆಗೆಯಲು ತೆರಳುವ ತಂಡದಲ್ಲಿ ಎಂಡೋ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರುವರ ಸದಸ್ಯರನ್ನು ಸೇರಿಸಿಕೊಳ್ಳುವಂತೆ ಸೂಚಿಸಿದರು.

ಸವಲತ್ತು ಹೆಚ್ಚಳಕ್ಕೆ ಮನವಿ
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಲತ್ತುಗಳ ಪರಿಶೀಲನೆ ಹಾಗೂ ಅಧ್ಯಯನಕ್ಕಾಗಿ ನಿಯೋಗ ಜಿಲ್ಲೆಗೆ ಆಗಮಿಸಿದೆ. ಎಂಡೋಪೀಡಿತರ ಮನೆಗೆ ತೆರಳಿ ಸ್ಥಿತಿಗತಿಗಳನ್ನು ಗಮನಿಸಿದ್ದೇವೆ. ಸವಲತ್ತುಗಳನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಸರಕಾರಕ್ಕೆ ಮನವಿ ನೀಡಲಾಗುತ್ತದೆ ಎಂದರು. ಕೊಕ್ಕಡ ಮತ್ತು ಕೊಲ್ಯದಲ್ಲಿ ಎಂಡೋ ಪಾಲನಾ ಕೇಂದ್ರವನ್ನು ಸರಕಾರೇತರ ಸಂಸ್ಥೆಯಿಂದ ನಡೆಸಲಾಗುತ್ತಿದೆ. ಇದರಿಂದ ಎಂಡೋ ಪೀಡಿತ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಬದಲಾವಣೆಗಳಾಗಿರುವುದರಿಂದ ಇನ್ನಷ್ಟು ಪಾಲನಾ ಕೇಂದ್ರಗಳನ್ನು ತೆರೆಯುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಎಂಡೋ ಸಂತ್ರಸ್ತರ ಪೋಷಕರು ಜತೆಯಾಗಿ ಒಂದು ಸೊಸೈಟಿ ನಿರ್ಮಿಸಿದ್ದು, ಅದಕ್ಕೆ ಜಾಗ ಹಾಗೂ ಸ್ವಂತ ಕಟ್ಟಡ ನಿರ್ಮಿಸಲು ಮನವಿ ಮಾಡಿದ್ದಾರೆ. ಅದನ್ನು ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ಜಿಲ್ಲೆಯಲ್ಲಿ ಪ್ರಸ್ತುತ ಶೇ. 60 ಎಂಡೋ ಸಂತ್ರಸ್ತರಿಗೆ 1,500 ರೂ. ಹಾಗೂ 60ಕ್ಕಿಂತ ಹೆಚ್ಚು ಪೀಡಿತರಿಗೆ 3,000 ರೂ. ಮಾಸಾಶನ ನೀಡಲಾಗುತ್ತಿದೆ. ಇದನ್ನು ಕನಿಷ್ಠ 5,000 ರೂ.ಗೆ ಹೆಚ್ಚಿಸಲು ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ 8 ಸೂಪರ್‌ ಸ್ಪೆಷಾಲಿಟಿಗಳಲ್ಲಿ ಎಂಡೋಸಂತ್ರಸ್ತರಿಗೆ ಯಾವುದೇ ಸಂದರ್ಭದಲ್ಲಿಯೂ ವೈದ್ಯಕೀಯ ಸೌಲಭ್ಯವನ್ನು ನೀಡುವ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಆದರೆ ಕೆಲ ಆಸ್ಪತ್ರೆಗಳಲ್ಲಿ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ದೂರು ಸಭೆಯಲ್ಲಿ ಕೇಳಿ ಬಂತು. ಆದ್ದರಿಂದ ಮುಂದಿನ ವಾರ ಎಲ್ಲ 8 ಆಸ್ಪತ್ರೆಗಳ ಮುಖ್ಯಸ್ಥರ ಸಭೆ ನಡೆಸಿ ನೀಡಿರುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದು, ಒಪ್ಪಂದ ಪಾಲಿಸಲು ಖಡಕ್‌ ಆದೇಶ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಕೆ.ಸಿ. ಕೊಂಡಯ್ಯ ಹೇಳಿದರು.

Advertisement

ಎಂಡೋದಿಂದ ಮೃತಪಟ್ಟವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕೇರಳದಲ್ಲಿ ಕಂಪೆನಿಯೊಂದಿಗೆ ವ್ಯವಹರಿಸಿ ಅವರಿಂದಲೇ ಹಣ ಪಡೆದು ಪರಿಹಾರ ಒದಗಿಸಲಾಗಿದೆ. ಅದೇ ರೀತಿ ವ್ಯವಸ್ಥೆಯಾಗಬೇಕು ಎಂದು ಶಾಸಕ ಹರೀಶ್‌ ಪೂಂಜ ಆಗ್ರಹಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿಯವರು ಕೇರಳದ ಮಾದರಿ ಪರಿಶೀಲಿಸಿ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಜಿಪಂ ಸಿಇಒ ಡಾ| ಸೆಲ್ವಮಣಿ ಆರ್‌., ಅಪರ ಜಿಲ್ಲಾಧಿಕಾರಿ ಕುಮಾರ್‌, ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌, ಸಮಿತಿ ಸದಸ್ಯರು ಇದ್ದರು.

ಕೊಕ್ಕಡ, ಕೊçಲ ಎಂಡೋಪಾಲನಾ ಕೇಂದ್ರಕ್ಕೆ ಭೇಟಿ 
ಅಲಂಕಾರು/ನೆಲ್ಯಾಡಿ: ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ. ಕೊಂಡಯ್ಯ ನೇತೃತ್ವದ ತಂಡವು ಕೊಕ್ಕಡ, ಕೊಲ ಎಂಡೋಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಎಂಡೋ ಸಂತ್ರಸ್ತರು ಮತ್ತು ಅವರ ಕುಟುಂಬಿಕರ ಜತೆ ಮಾತನಾಡಿದರು. ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸುವುದಾಗಿ ತಿಳಿಸಿದ ಅವರು, ಎಂಡೋಸಲ್ಫಾನ್‌ ಸಂಸ್ಥೆಯೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಮತ್ತು ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಸರಕಾರದ ಗಮನ ಸೆಳೆಯುವೆ ಎಂದರು.

ಎಂಡೋ ಸಂತ್ರಸ್ತರ ಬೇಡಿಕೆ ಈಡೇರಿಸದೇ ಇದಲ್ಲಿ ಸಂತ್ರಸ್ತರ ಜತೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆಂಗುಡೇಲು ತಿಳಿಸಿದರು. ನೆಲ್ಯಾಡಿಯಲ್ಲಿ ತಂಡದ ಜತೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next