ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಘೋಷಣೆಯಾದ ಬೆನ್ನಲ್ಲೇ ದೇಶದ ರೈತರ ಖಾತೆಗೆ ನಗದು ವರ್ಗಾಯಿಸುವ ಪ್ರಕ್ರಿಯೆಗೆ ಸರ್ಕಾರ ಸಿದ್ಧತೆ ಶುರು ಮಾಡಿದೆ. ಮಾರ್ಚ್ ಅಂತ್ಯದೊಳಗಾಗಿ ರೈತರ ಖಾತೆಗೆ ಮೊದಲ ಕಂತಿನ ರೂಪದಲ್ಲಿ 2 ಸಾವಿರ ರೂ.ಗಳು ಜಮೆಯಾಗಲಿದ್ದು, ಈ ಯೋಜನೆಯ ವ್ಯಾಪ್ತಿಗೆ ಬರುವಂಥ ಸಣ್ಣ ರೈತರನ್ನು ಗುರುತಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಸರ್ಕಾರದ ಅಂದಾಜಿನ ಪ್ರಕಾರ ಈ ಯೋಜನೆಯಿಂದ 12 ಕೋಟಿ ರೈತರಿಗೆ ಲಾಭವಾಗಲಿದೆ. ಅಲ್ಲದೆ, ಪ್ರಸಕ್ತ ವಿತ್ತ ವರ್ಷದಲ್ಲಿ ಯೋಜನೆಗಾಗಿ 20 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಹೀಗಾಗಿ, ತ್ವರಿತಗತಿಯಲ್ಲಿ ಫಲಾನುಭವಿ ರೈತರನ್ನು ಗುರುತಿಸಿ, ಅವರಿಗೆ ಮುಂದಿನ ತಿಂಗಳ ಅಂತ್ಯದೊಳಗಾಗಿ ಮೊದಲ ಕಂತನ್ನು ಪಾವತಿಸಲಿದ್ದೇವೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಶನಿವಾರ ತಿಳಿಸಿದ್ದಾರೆ.
2 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ ಮೂರು ಕಂತಿನಂತೆ (ತಲಾ 2 ಸಾವಿರ ರೂ.) ವಾರ್ಷಿಕ 6 ಸಾವಿರ ರೂ.ಗಳನ್ನು ಖಾತೆಗೆ ನೇರ ವರ್ಗಾವಣೆ ಮಾಡುವ ಘೋಷಣೆಯನ್ನು ಶುಕ್ರವಾರ ಹಣಕಾಸು ಸಚಿವ ಪಿಯೂಷ್ ಗೋಯಲ್ ಮಾಡಿದ್ದರು. ಇದರ ಬಗ್ಗೆ ಶನಿವಾರ ಪ್ರತಿಕ್ರಿಯಿಸಿರುವ ರಾಜೀವ್ ಕುಮಾರ್, ‘ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆ ಬರಲಿಕ್ಕಿಲ್ಲ ಎನ್ನುವ ವಿಶ್ವಾಸವಿದೆ. ಈಶಾನ್ಯ ರಾಜ್ಯಗಳಲ್ಲಷ್ಟೇ ಸ್ವಲ್ಪ ವಿಳಂಬವಾಗಬಹುದು. ಈಗಾಗಲೇ ನಾವು ಕಾರ್ಯಪ್ರವೃತ್ತರಾಗಿದ್ದು, ತ್ವರಿತ ಜಾರಿಗೆ ಪಣ ತೊಟ್ಟಿದ್ದೇವೆ. ರೈತರನ್ನು ಗುರುತಿಸುವಂಥ ಕಾರ್ಯ ಆದಷ್ಟು ಬೇಗ ನಡೆಯಬೇಕಿದೆ. ಹಾಗಾಗಿ, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ’ ಎಂದಿದ್ದಾರೆ.
ತಿಂಗಳಿಗೆ 500 ರೂ. ಎಂದರೆ ಬಡ ರೈತರಿಗೆ ಸಣ್ಣ ಮೊತ್ತವಲ್ಲ. ಅವರು ಈ ಹಣವನ್ನು ಆಹಾರಕ್ಕೋ, ಮಕ್ಕಳನ್ನು ಶಾಲೆಗೆ ಕಳುಹಿಸಲೋ ಬಳಸುತ್ತಾರೆ. ಅದನ್ನು ಅಲ್ಪವಾಗಿ ಕಾಣುವುದು ಸರಿಯಲ್ಲ.
• ರಾಜೀವ್ ಕುಮಾರ್, ನೀತಿ ಆಯೋಗದ ಉಪಾಧ್ಯಕ್ಷ
ರಾಜ್ಯಗಳು ಏನು ಮಾಡಬೇಕು?
•ಮೊದಲಿಗೆ ಗ್ರಾಮಗಳಲ್ಲಿರುವ ಅರ್ಹ ಸಣ್ಣ ರೈತರ ದತ್ತಾಂಶವನ್ನು ಸಿದ್ಧಪಡಿಸಬೇಕು
•ಫಲಾನುಭವಿಗಳ ಹೆಸರು, ಲಿಂಗ, ಅವರು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದವರೇ, ಅಲ್ಲವೇ ಎಂಬ ಬಗ್ಗೆ ವಿವರ ಸಂಗ್ರಹಿಸಬೇಕು
•ಈ ವಿವರವನ್ನು ಗ್ರಾಮ ಪಂಚಾಯತ್‌ಗಳ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು