Advertisement

ಸರ್ಕಾರಿ ಬಾಲ ಮಂದಿರ ಸ್ಥಳಾಂತರಕ್ಕೆ ಸೂಚನೆ

05:31 PM Sep 03, 2022 | Team Udayavani |

ಹಾಸನ: ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಭವನ ನಿರ್ಮಾಣಕ್ಕಾಗಿ ನಗರದ ಮಹಾರಾಜ ಪಾರ್ಕ್‌ ಪಕ್ಕದಲ್ಲಿರುವ ಬಾಲಕರ ಬಾಲ ಮಂದಿರವನ್ನು (ಸರ್ಟಿಫೈಡ್‌ ಸ್ಕೂಲ್‌ ) ಸ್ಥಳಾಂತರಿಸಬೇಕು ಎಂದು ಉನ್ನತಾಧಿಕಾರಿಗಳು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾ ರಿಯವರಿಗೆ ತೀವ್ರ ಒತ್ತಡ ಹೇರುತ್ತಿರುವುದರಿಂದ 37 ಅನಾಥ, ಪರಿತ್ಯಕ್ತ ಮಕ್ಕಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.

Advertisement

1954 ರಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಎ.ಕೆ.ಬೋರ್ಡಿಂಗ್‌ ಹೋಂಗೆ (ಈಗ ಸರ್ಟಿಫೈಡ್‌ ಸ್ಕೂಲ್‌ ಇರುವ ಸ್ಥಳ ) ಭೇಟಿ ನೀಡಿದ್ದರು. ಅವರ ನೆನಪಿಗಾಗಿ ಅಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಭವನ ನಿರ್ಮಾಣ ಮಾಡಬೇಕು ಎಂಬ ದಲಿತ ಸಂಘಟನೆಗಳ ಒತ್ತಡ ಹಿನ್ನೆಲೆ ರಾಜ್ಯ ಸರ್ಕಾರ 2021- 22ನೇ ಸಾಲಿನಲ್ಲಿ ಒಂದು ಕೋಟಿ ರೂ. ಅನುದಾನ ನೀಡುವ ಘೋಷಣೆ ಮಾಡಿತ್ತು. ಆ ಹಿನ್ನೆಲೆ ಈಗ ಬಾಲ ಮಂದಿರವನ್ನು ಸೆ.3ರೊಳಗೆ ಸ್ಥಳಾಂತರ ಮಾಡಬೇಕು ಎಂಬನಿರ್ದೇಶನ ಬಂದಿದೆ. ಬಾಡಿಗೆ ಕಟ್ಟಡಕ್ಕೆ ಬಾಲ ಮಂದಿರವನ್ನು ಸ್ಥಳಾಂತರ ಮಾಡಿ ಅಂಬೇಡ್ಕರ್‌ ಸ್ಮಾರಕ ಭವನ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಸೂಚನೆ ನೀಡಲಾಗಿದೆ.

ಎ.ಕೆ.ಬೋಡಿಂಗ್‌ ಹೋಂ ಇತಿಹಾಸ : ಒಟ್ಟು 1.37 ಎಕರೆಯಲ್ಲಿದ್ದ ಎ.ಕೆ.ಬೋರ್ಡಿಂಗ್‌ ಹೋಂ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿತ್ತು. ಅದರಲ್ಲಿ 26 ಗುಂಟೆ ಡಾ.ಬಿ.ಆರ್‌. ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 1999 ರಲ್ಲಿ ಬಿಟ್ಟು ಕೊಡಲಾಯಿತು. ಈಗ ಅಲ್ಲಿ ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಾಣವಾಗಿದ್ದು, ಜಿಲ್ಲಾಸಮಾಜ ಕಲ್ಯಾಣಾ ಧಿಕಾರಿಯವರ ಕಚೇರಿಯೂಆ ಕಟ್ಟಡದಲ್ಲಿದೆ. ಇನ್ನುಳಿದ 1.11 ಎಕರೆ ಬಾಲಕರ ಬಾಲ ಮಂದಿರದ ಅಧೀನದಲ್ಲಿದೆ.

ಶಿಕ್ಷಣ ಅಂಬೇಡ್ಕರ್‌ ಆಶಯ: ಶೋಷಿತ, ಹಿಂದುಳಿದ ವರ್ಗಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬುದೇ ಡಾ.ಅಂಬೇಡ್ಕರರ ಆಶಯವಾಗಿತ್ತು. ಆ ಹಿನ್ನೆಲೆ ಅಂದು ಎ. ಕೆ.ಬೋಡಿಂಗ್‌ ಹೋಂನಲ್ಲಿದ್ದ ಮಕ್ಕಳನ್ನು 1954 ರಲ್ಲಿ ಅಂಬೇಡ್ಕರರು ಭೇಟಿ ನೀಡಿದ್ದರು. ಆದರೆ, ಈಗ ಅಲ್ಲಿರುವ ಬಾಲಕರ ಬಾಲ ಮಂದಿರವನ್ನೇಸ್ಥಳಾಂತರ ಮಾಡಬೇಕು ಎಂಬುದು ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿದೆ ಎಂದು ಪ್ರೇರಣಾ ವಿಕಾಸ ವೇದಿಕೆ ಆತಂಕ ವ್ಯಕ್ತಪಡಿಸಿದೆ. ಬಾಲಕರ ಬಾಲ ಮಂದಿರವೇ ಅಂಬೇಡ್ಕರರ ಸ್ಮಾರಕವಲ್ಲವೇಎಂದೂ ವೇದಿಕೆ ಕೇಳುತ್ತದೆ.

ಬಾಲ ಮಂದಿರವನ್ನೂ ಉಳಿಸಬಹುದು : ಈಗ ಬಾಲಕರ ಬಾಲ ಮಂದಿರ ಇರುವ 1.11 ಎಕರೆಯಲ್ಲಿ ಕೆಲ ಭಾಗದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಭವನ ನಿರ್ಮಾಣಕ್ಕೆ ನೀಡಿ, ಇನ್ನುಳಿದ ಜಾಗದಲ್ಲಿ ಬಾಲಕರ ಬಾಲ ಮಂದಿರವನ್ನೂಉಳಿಸಿಕೊಳ್ಳಬಹುದು. ಈ ಬಗ್ಗೆ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರು ಚಿಂತನೆ ನಡೆಸಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿಯು ಅಭಿಪ್ರಾಯಪಡುತ್ತದೆ.

Advertisement

ಬಾಲಮಂದಿರ ಸ್ಥಳಾಂತರ ಜಿಜ್ಞಾಸೆ :  ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ದೇಶನಾಲಯಗಳು ವಿಂಗಡಣೆಯಾಗಿದ್ದರಿಂದ ಬಾಲಕರ ಬಾಲ ಮಂದಿರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬಂದಿತು ಈಗ 1.11 ಎಕರೆ ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷರ ಹೆಸರಿನಲ್ಲಿ 2003 ರಲ್ಲಿಯೇ ಖಾತಾ ಆಗಿದೆ. ಇ – ಖಾತಾ ಕೂಡ ಆಗಿದೆ. ಈ ಜಾಗದಲ್ಲಿ ಈಗ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಭವನ ನಿರ್ಮಾಣ ಮಾಡಲು ಬಾಲ ಮಂದಿರ ಸ್ಥಳಾಂತರ ಮಾಡಬೇಕು ಎಂದು ನಿರ್ಧಾರವಾಗಿದೆ. ಆದರೆ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಬಾಲಾಕರ ಬಾಲ ಮಂದಿರವನ್ನು ಸ್ಥಳಾಂತರ ಮಾಡುವುದಾದರೂ ಎಲ್ಲಿಗೆ ಎಂಬ ಜಿಜ್ಞಾಸೆ ಶುರುವಾಗಿದೆ. ಈಗ ಬಾಲ ಮಂದಿರಕ್ಕೆ ಸನಿಹದಲ್ಲಿಯೇ ಶಾಲೆಗಳು ಮತ್ತು ಪಿಯು ಕಾಲೇಜುಗಳಿವೆ. ಆಸ್ಪತ್ರೆಯೂ ಸನಿಹದಲ್ಲಿಯೇ ಇದೆ. ಹಾಗಾಗಿ ಈಗಿರುವ ಜಾಗವೇ ಬಾಲ ಮಂದಿರಕ್ಕೆ ಸೂಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next