Advertisement

ಅಲ್ಪಸಂಖ್ಯಾತ ಮಾನ್ಯತೆಗೆ ಅಧಿಸೂಚನೆ

06:10 AM Mar 24, 2018 | |

ಬೆಂಗಳೂರು: ಲಿಂಗಾಯತ ಹಾಗೂ ಬಸವ ತತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಸಮುದಾಯವನ್ನು “ಧಾರ್ಮಿಕ ಅಲ್ಪಸಂಖ್ಯಾತರು’ ಎಂದು ಮಾನ್ಯತೆ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Advertisement

ಇದರ ಜತೆಗೆ ಈ ಕುರಿತಂತೆ ಹಿಂದಿನ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಶುಕ್ರವಾರದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 

ಹೀಗಾಗಿ ಇನ್ನೊಂದು ವಾರದೊಳಗೆ ಲಿಂಗಾಯತ ಹಾಗೂ ಬಸವ ತತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಸಮುದಾಯವನ್ನು “ಧಾರ್ಮಿಕ ಅಲ್ಪಸಂಖ್ಯಾತರು’ ಎಂದು ಮಾನ್ಯತೆ ನೀಡುವಂತೆ ವಾರದೊಳಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ-1994ರ ಸೆಕ್ಷನ್‌ 2(ಡಿ) ಅಡಿ ಅಧಿಕಾರ ಚಲಾಯಿಸಿ ರಾಜ್ಯ ಸರ್ಕಾರವು ಪ್ರಸ್ತುತ ಇರುವ ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿ ಸೌಲಭ್ಯಗಳನ್ನು ಒಳಗೊಂಡಂತೆ ಹಕ್ಕು ಮತ್ತು ಆಸಕ್ತಿಗಳಿಗೆ ಧಕ್ಕೆ ಬಾರದ ಷರತ್ತಿಗೊಳಪಟ್ಟು ಲಿಂಗಾಯತ ಹಾಗೂ ಬಸವ ತತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾತರು ಎಂದು ಮಾನ್ಯತೆ ನೀಡಿ ಅಧಿಸೂಚನೆ ಹೊರಡಿಸಲಾಗಿದೆ.

ಅಧಿಸೂಚನೆಯಲ್ಲೇನಿದೆ?
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ -1994ರ ಸೆಕ್ಷನ್‌ 31ರನ್ವಯ ರಾಜ್ಯ ಸರ್ಕಾರಕ್ಕೆ ಮಾಡಿರುವ ಶಿಫಾರಸು ಪರಿಗಣಿಸಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ-1992ರ ಸೆಕ್ಷನ್‌ 2(ಸಿ) ಅಡಿಯಲ್ಲಿ ಕೇಂದ್ರ ಸರ್ಕಾರವು ಲಿಂಗಾಯತ ಮತ್ತು ಬಸವ ತತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಎಂದು ಮಾನ್ಯತೆ ನೀಡಬೇಕಿದೆ. ಅದನ್ನು ಅಧಿನಿಯಮದಲ್ಲಿ ಗೊತ್ತುಪಡಿಸಿದ ದಿನಾಂಕದಿಂದ ಜಾರಿಗೆ ಬರಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಕ್ರಂ ಬಾಷಾ ಮಾ.22ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Advertisement

ಕಳೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಕಾನೂನು ಇಲಾಖೆಗೆ ಕಳುಹಿಸಿಕೊಟ್ಟು ಪರಾಮರ್ಷೆ ನಡೆಸಲಾಗಿದೆ. ಸಂಪುಟ ಸಭೆ ನಿರ್ಣಯಕ್ಕೆ ಅನುಮೋದನೆ ನೀಡಿದ್ದು, ಇನ್ನೊಂದು ವಾರದೊಳಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
– ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next