Advertisement

ಹೆಚ್ಚುವರಿ ಭೂಸ್ವಾಧೀನಕ್ಕೆ ಅಧಿಸೂಚನೆ

12:30 AM Mar 16, 2019 | Team Udayavani |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರು- ಮಂಗಳೂರು ನಡುವಿನ ಬಿ.ಸಿ.ರೋಡ್‌ – ಅಡ್ಡಹೊಳೆಯವರೆಗಿನ ಚತುಷ್ಪಥ ಕಾಂಕ್ರೀಟ್‌ ರಸ್ತೆ ಕಾಮಗಾರಿ ಸಂಬಂಧ ಹೆಚ್ಚುವರಿ 117.5 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ಸಿಗಲಿದೆ. ಈ ಸಂಬಂಧ ಕೇಂದ್ರ ರಸ್ತೆ ಹಾಗೂ ಹೆದ್ದಾರಿಗಳ ಸಚಿವಾಲಯವು ಜ.31 ರಂದು ಹೊಸದಾಗಿ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಕಾಮಗಾರಿಗಿದ್ದ ವಿಘ್ನ ನಿವಾರಣೆಯಾಗಿದ್ದು, ಐದಾರು ತಿಂಗಳೊಳಗೆ ಹೆಚ್ಚುವರಿ ಭೂಮಿ ಸ್ವಾಧೀನಗೊಳ್ಳಬಹುದು. ಹಾಗಾಗಿ ಮಳೆಗಾಲದ ಬಳಿಕ ಕಾಮಗಾರಿ ಚುರುಕು ಪಡೆಯುವ ಲಕ್ಷಣಗಳಿವೆ. 

Advertisement

ಮೂಲ ಅಧಿಸೂಚನೆಯಲ್ಲಿ ಬಿಟ್ಟು ಹೋದ ಸರ್ವೆ ನಂಬರ್‌ ಮತ್ತು ಹೆಚ್ಚುವರಿ ಜಮೀನುಗಳ ಸ್ವಾಧೀನಕ್ಕಾಗಿ ಈಗ ಸಾರ್ವಜನಿಕರಿಗೆ ನೋಟಿಸ್‌ ನೀಡಲಾಗಿದೆ. ಮುಂದಿನ 20 ದಿನಗಳೊಳಗೆ ಕಲಂ 3ಸಿ (1)ರ ಅನ್ವಯ ಹಾಸನದಲ್ಲಿರುವ ಭಾರತೀಯ ರಾ. ಹೆ. ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿಗಳ ಕಾರ್ಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಡ್ಡಹೊಳೆ-ಬಿ.ಸಿ.ರೋಡ್‌ ರಸ್ತೆ ಚತುಷ್ಪಥ ಕಾಮಗಾರಿ 2017ರ ಮಾರ್ಚ್‌ 28 ರಂದು ಆರಂಭವಾಗಿತ್ತು. ಕಳೆದ ಮಳೆಗಾಲದಲ್ಲಿ ಭಾರೀ ಮಳೆ ಸುರಿದು ಕೆಲವೆಡೆ ಭೂಕುಸಿತ ಉಂಟಾಗಿತ್ತು. ಜತೆಗೆ ರಸ್ತೆಗೆ ಇನ್ನಷ್ಟು ಭೂಮಿ ಅಗತ್ಯ ಕಂಡುಬಂದ ಕಾರಣ ಹೆಚ್ಚುವರಿ ಭೂಮಿಯನ್ನು ಗುರುತಿಸ ಲಾಗಿತ್ತು. ಒಟ್ಟು 821 ಕೋ.ರೂ. ವೆಚ್ಚದ ಕಾಂಕ್ರೀಟ್‌ ಹೆದ್ದಾರಿ ಕಾಮಗಾರಿಯನ್ನು ಹಾಲಿ ರಸ್ತೆಯ ಅಕ್ಕಪಕ್ಕದಲ್ಲಿ ಸಮತಟ್ಟು ಮಾಡಿ ಕೆಲಸ ಆರಂಭಿಸಲಾಗಿತ್ತು.

63 ಕಿ.ಮೀ. ಉದ್ದದ ರಸ್ತೆ
ಬೆಂಗಳೂರಿನ ನೆಲಮಂಗಲದಿಂದ ಹಾಸನದವರೆಗಿನ ಚತುಷ್ಪಥ ರಸ್ತೆಯನ್ನು ಮಂಗಳೂರಿನವರೆಗೂ ವಿಸ್ತರಿಸುವ ಯೋಜನೆಯಿದು. ಶಿರಾಡಿ ಘಾಟಿಯಲ್ಲಿ 2 ಹಂತದಲ್ಲಿ ಕಾಂಕ್ರೀಟ್‌ ಕಾಮಗಾರಿ ಪೂರ್ಣ ಗೊಂಡಿದೆ. ಹಾಸನದಿಂದ ಶಿರಾಡಿಯ ಮಾರನಹಳ್ಳಿಯವರೆಗೆ 45 ಕಿ.ಮೀ. ಹಾಗೂ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ 63 ಕಿ.ಮೀ. ರಸ್ತೆ ಚತುಷ್ಪಥಗೊಳ್ಳಲಿದೆ. ಆಲೂರು ತಾಲೂಕಿನ 5, ಸಕಲೇಶಪುರ ತಾಲೂಕಿನ 12 ಗ್ರಾಮಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ, ಶಿರಿವಾಗಿಲು, ನೂಜಿಬಾಳ್ತಿಲ, ನೆಲ್ಯಾಡಿ, ಕೊಣಾಲು, ಗೋಳಿತಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ, ರೆಖ್ಯಾ, ಬಿಳಿಯೂರು, ಕಡೇಶ್ವಾಲ್ಯ, ಪೆರ್ನೆ, ಕೆದಿಲ, ಪೆರಾಜೆ, ಮಾಣಿ, ಬಾಳ್ತಿಲ, ಗೋಳ್ತಮಜಲು, ಕಸಬಾ ಪಾಣೆಮಂಗಳೂರು, ನರಿಕೊಂಬು, ಬಿ.ಮೂಡ ಗ್ರಾಮಗಳಲ್ಲಿ ಚತುಷ್ಪಥ ರಸ್ತೆ ಹಾದುಹೋಗಲಿದೆ.  

ಭೂಸ್ವಾಧೀನಕ್ಕೆ ಕನಿಷ್ಠ 6 ತಿಂಗಳು!
ಹೆಚ್ಚುವರಿ ಭೂ ಸ್ವಾಧೀನದ ಅಧಿಸೂಚನೆಗೆ ಆಕ್ಷೇಪಗಳಿದ್ದರೆ ಅದನ್ನು ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಪರಿಶೀಲಿಸಲಿದ್ದಾರೆ. ಅದು ಅಂತಿಮವಾದ ಬಳಿಕ ಅಧಿಕಾರಿಗಳು ಅಳತೆ ನಡೆಸಿ ಮೌಲ್ಯ ನಿರ್ಧರಿಸಬೇಕು. ಹೆಚ್ಚುವರಿ ಗಿಡಮರಗಳನ್ನು ಕಡಿಯುವುದಾದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆ ಬಳಿಕ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿ ಭೂ ಸ್ವಾಧೀನ ಆರಂಭಿಸಬೇಕು. ಇದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗಬಹುದು ಎನ್ನುತ್ತವೆ ಇಲಾಖೆ ಮೂಲಗಳು. 

ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next