ಜೈಪುರ/ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆ ಮತ್ತು ರಾಜಸ್ಥಾನ ಸಿಎಂ ಬದಲಾವಣೆ ವಿಷಯದಲ್ಲಿ ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ರಾಜಸ್ಥಾನದಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ಕ್ರುದ್ಧಗೊಂಡಿರುವ ಹೈಕಮಾಂಡ್, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೂವರು ಕಟ್ಟಾ ಬೆಂಬಲಿಗರಿಗೆ ಶೋಕಾಸ್ ನೋಟಿಸ್ ನೀಡಿದೆ.
ಶಿಸ್ತು ಉಲ್ಲಂಘನೆ ಸಂಬಂಧ ಈ ನೋಟಿಸ್ ನೀಡಿದ್ದು, ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆಂದು ಪ್ರಶ್ನಿಸಿದೆ.
ಈ ಮಧ್ಯೆ, ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಅಶೋಕ್ ಗೆಹ್ಲೋಟ್ ಇನ್ನೂ ಹೊರಬಿದ್ದಿಲ್ಲ ಎಂದು ಮೂಲಗಳು ಹೇಳಿವೆ.
ಸ್ವತಃ ಗೆಹ್ಲೋಟ್ ಅವರು ಸೋನಿಯಾ ಗಾಂಧಿಯವರ ಜತೆ ಮಾತುಕತೆ ನಡೆಸಿದ್ದಾರೆ. ಆದರೂ ರಾಜಸ್ಥಾನದ ಇಡೀ ಹೈಡ್ರಾಮಾದ ಹಿಂದೆ ಅಶೋಕ್ ಗೆಹ್ಲೋಟ್ ಅವರಿಲ್ಲ ಎಂಬುದನ್ನು ಹೈಕಮಾಂಡ್ ನಂಬಲು ತಯಾರಿಲ್ಲ.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿಸುವ ಬಗ್ಗೆ ಚಿಂತನೆಯಲ್ಲಿದೆ ಎನ್ನಲಾಗಿದೆ. ಕುಮಾರಿ ಸೆಲ್ಜಾ ಮತ್ತು ಕೆ.ಸಿ. ವೇಣುಗೋಪಾಲ್ ಅವರ ಬಗ್ಗೆಯೂ ಪಕ್ಷ ಉತ್ಸುಕವಾಗಿದೆ ಎನ್ನಲಾಗಿದೆ.