Advertisement

ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಸೂಚನೆ

09:08 AM May 29, 2020 | Suhan S |

ಧಾರವಾಡ: ಲಾಕ್‌ಡೌನ್‌ದಿಂದ ಸ್ಥಗಿತವಾಗಿದ್ದ ಜಿಲ್ಲೆಯ ಕಟ್ಟಡ, ರಸ್ತೆ ನಿರ್ಮಾಣ ಹಾಗೂ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಕೋವಿಡ್‌-19 ನಿಯಂತ್ರಣ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಕೈಗೊಂಡು ಅವರು ಮಾತನಾಡಿದರು. ಹೂವು ಬೆಳೆಗಾರರು, ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ನೀಡಿರುವ ಆರ್ಥಿಕ ನೆರವು ಪಡೆಯಲು ಉತ್ತೇಜನ ನೀಡುವ ಕೆಲಸಗಳನ್ನು ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ಮಹಾನಗರ ಪಾಲಿಕೆ, ಸ್ಮಾರ್ಟ್‌ ಸಿಟಿ ಸೇರಿದಂತೆ ವಿವಿಧ ನಿರ್ಮಾಣ ಸಂಬಂಧಿ ಇಲಾಖೆಗಳು ಕೋವಿಡ್‌ ಪೂರ್ವದಲ್ಲಿ ಕೈಗೊಂಡಿದ್ದ ನಿರ್ಮಾಣ ಕಾರ್ಯಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಬೇಕು. ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಹೊರತುಪಡಿಸಿ ಸ್ಥಳೀಯವಾಗಿ ಯಾವುದೇ ವಾಣಿಜ್ಯ ವಹಿವಾಟು, ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಡಿಸಿ ದೀಪಾ ಚೋಳನ್‌ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 43 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಪ್ರಯಾಣದ ಹಿನ್ನೆಲೆಯಿಂದ 28, ಸೋಂಕಿತರ ಸಂಪರ್ಕದಿಂದ 12 ಹಾಗೂ ಇತರೆ 3 ಜನರಲ್ಲಿ ಸೊಂಕು ದೃಢಪಟ್ಟಿದೆ. ಈಗಾಗಲೇ 11 ಜನ ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 32 ಸಕ್ರಿಯ ಪ್ರಕರಣಗಳು ಇವೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 33,587 ಮೂರು ಲೇಯರ್‌ ಮಾಸ್ಕ್ಗಳು, 10,231 ಎನ್‌-95 ಮಾಸ್ಕ್ಗಳು, 3,003 ಸ್ವಯಂ ರಕ್ಷಣಾ ಕಿಟ್‌ಗಳು ಸೇರಿದಂತೆ ವಿವಿಧ ಉಪಕರಣಗಳು, ಔಷಧ, ಮಾತ್ರೆಗಳು ಸೇರಿ ಒಟ್ಟು 85,556 ಸಾಮಗ್ರಿಗಳ ದಾಸ್ತಾನು ಇದೆ. ಬೇಡಿಕೆಗಳಿಗೆ ಅನುಗುಣವಾಗಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ ಎಂದರು.

ಕೋವಿಡ್‌-19 ನಿಯಂತ್ರಣಕ್ಕೆ ಸ್ಥಾಪಿಸಲಾಗಿರುವ ಸಹಾಯವಾಣಿ, ದೂರುನಿರ್ವಹಣಾ ಕೋಶ, ಕ್ಷಿಪ್ರ ಸ್ಪಂದನಾ ತಂಡಗಳು, ವೈದ್ಯಕೀಯ ತಂಡದ ಸಮಿತಿಗಳು ಸೇರಿದಂತೆ ಮತ್ತಿತರ ಸಿದ್ಧತೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವೈದ್ಯರಿಂದ ಮಾಹಿತಿ ಪಡೆಯಲಾಯಿತು. ಹು-ಧಾ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಎಸ್‌ಪಿ ವರ್ತಿಕಾ ಕಟಿಯಾರ್‌, ಡಿಸಿಪಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಂಯೋಜಕ ಪ್ರಕಾಶ ಇನ್ನಿತರರಿದ್ದರು.

Advertisement

ವರದಿ ವಿಳಂಬವಾಗದಂತೆ ಎಚ್ಚರ ವಹಿಸಿ : ಅವಳಿ ನಗರದಲ್ಲಿ ಗುರುತಿಸಲಾಗಿರುವ 7 ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಮತ್ತು ಅರೆವೈದ್ಯಕೀಯ ಮಾನವ ಸಂಪನ್ಮೂಲಗಳ ಕುರಿತು ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು, ಸಮರ್ಪಕ ನಿರ್ವಹಣೆಗೆ ಸೂಚಿಸಿದರು. ಪ್ರಯೋಗಾಲಯ ವರದಿಗಳು ವಿಳಂಬವಾಗದಂತೆ ಎಚ್ಚರ ವಹಿಸಬೇಕು. ಪಾಸಿಟಿವ್‌ ವ್ಯಕ್ತಿಗಳ ಚಿಕಿತ್ಸೆಗೆ ಜಿಲ್ಲೆಯಲ್ಲಿ ಇದುವರೆಗೆ ವೆಂಟಿಲೇಟರ್‌ಗಳ ಬಳಕೆಯ ಅಗತ್ಯ ಕಂಡುಬಂದಿಲ್ಲವಾದರೂ ಎಲ್ಲ ಪೂರಕ ಸಿದ್ಧತೆಗಳು ಸದಾಕಾಲ ಅಣಿಯಾಗಿರಬೇಕು. ಜಿಲ್ಲೆಯಲ್ಲಿ 9 ಫೀವರ್‌ ಕ್ಲಿನಿಕ್‌ಗಳು ಇದ್ದರೂ ಕಿಮ್ಸ್‌ ಮತ್ತು ಧಾರವಾಡ ಜಿಲ್ಲಾಸ್ಪತ್ರೆಗೆ ಹೆಚ್ಚು ಸಂಖ್ಯೆಯ ಜನರು ತಪಾಸಣೆಗೆ ಬರುತ್ತಿದ್ದಾರೆ. ಉಳಿದಂತೆ ಎಸ್‌ಡಿಎಂ ಆಸ್ಪತ್ರೆ, ಮಾದರಮಡ್ಡಿ, ಬಾರಾಕೊಟ್ರಿ, ಪುರೋಹಿತನಗರ, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ, ರೈಲ್ವೆ ಆಸ್ಪತ್ರೆಗಳಲ್ಲಿರುವ ಫೀವರ್‌ ಕ್ಲಿನಿಕ್‌ಗಳಿಗೂ ಜನರು ಹೋಗುವಂತೆ ಮಾರ್ಗದರ್ಶನ ಮಾಡಬೇಕು ಎಂದು ಸೂಚನೆ ನೀಡಿದರು.

ಕೈಗಾರಿಕೆಗಳು ರಾತ್ರಿ ಪಾಳಿಯಲ್ಲಿ ಮತ್ತು ರವಿವಾರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳಲ್ಲಿ ಇರುವ ಕೈಗಾರಿಕೆ ಘಟಕಗಳು ಉತ್ಪಾದನಾ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಕುಶಲಕರ್ಮಿ ಕೆಲಸಗಾರರು ಹಾಗೂ ಕಚ್ಚಾ ವಸ್ತುಗಳ ಕೊರತೆ ಇದ್ದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಲಭ್ಯವಿರುವ ಸ್ಥಳಗಳಿಂದ ಕೆಲಸಗಾರರು ಮತ್ತು ಕಚ್ಚಾ ವಸ್ತುಗಳನ್ನು ಒದಗಿಸಲಾಗುವುದು.-ಗೌರವ ಗುಪ್ತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next