Advertisement

ಮಳೆಗಾದ ಸಮಸ್ಯೆಗೆ ಸಂದಿಸಲು ಸಜ್ಜಾಗಲು ಸೂಚನೆ

12:09 PM May 22, 2018 | Team Udayavani |

ಬೆಂಗಳೂರು: ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಎಂ.ಮಹೇಶ್ವರ್‌ ರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

Advertisement

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆಯಲ್ಲಿ ಎಂಟೂ ವಲಯಗಳ ಜಂಟಿ ಆಯುಕ್ತರೊಂದಿಗೆ ಸಭೆ ನಡೆಸಿದ ಅವರು, ಮಳೆಯಿಂದ ಅನಾಹುತಕ್ಕೆ ಒಳಗಾಗುವ ಪ್ರದೇಶಗಳನ್ನು ಗುರುತಿಸಲು ಅಧಿಕಾರಿಗಳು ಮುಂದಾಗಬೇಕು. ಜತೆಗೆ ಅಪಾಯ ಸಂಭವ್ಯ ಸ್ಥಳಗಳಲ್ಲಿ ಜನರಿಗೆ ತೊಂದರೆಯಾಗದಂತೆ ಅಲ್ಪಾವಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದಾರೆ. 

ಪಾಲಿಕೆಯ ಎಂಟು ವಲಯಗಳಲ್ಲಿರುವ ನಿಯಂತ್ರಣ ಕೊಠಡಿಗಳಲ್ಲಿ 24*7 ಸಿಬ್ಬಂದಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಬೇಕು. ಜತೆಗೆ ಮಳೆಗಾಲ ಮುಗಿಯುವವರೆಗೆ 63 ಕಡೆಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ಸಿಬ್ಬಂದಿ ನಿಯೋಜನೆ ಮಾಡುವಂತೆ ಸೂಚಿಸಿದ್ದಾರೆ.

ಮನೆಗಳಿಗೆ ಹಾಗೂ ರಸ್ತೆಗಳಲ್ಲಿ ನೀರು ನಿಂತರೆ ಕೂಡಲೇ ತೆರವುಗೊಳಿಸಲು ಪಪ್‌ಗ್ಳು, ಮರಗಳು ಉರುಳಿದರೆ ಶೀಘ್ರ ತೆರವುಗೊಳಿಸಲು ಯಾಂತ್ರಿಕ ಗರಗಸಗಳು, ಕಟ್ಟಿಂಗ್‌ ಯಂತ್ರಗಳು, ಹಾರೆ, ಪಿಕಾಸಿ, ಗುದ್ದಲಿ, ಸಲಿಕೆ, ಹಗ್ಗ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿರುವ ಆಯುಕ್ತರು, ನೀರು ಹರಿಯಲು ಸಮಸ್ಯೆಯಿರುವ ಕಡೆಗಳಲ್ಲಿ ಕಿರುಚರಂಡಿಗಳಲ್ಲಿ ಹೂಳು ತೆಗೆಯುವ ಕೆಲಸ ಆರಂಭಿಸುವಂತೆ ಹೇಳಿದ್ದಾರೆ. 

ಇನ್ನು ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಾಗೂ ಕಟ್ಟೆ ಹೊಡೆಯುವ ಅಪಾಯವಿರುವ ಕೆರೆಗಳ ಬಳಿ ಆದ್ಯತೆಯ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹಾಗೂ ಕೆರೆಗಳಲ್ಲಿ ಹೂಳು ತೆಗೆಯಲು ಯೋಜನೆ ರೂಪಿಸುವಂತೆ ಸೂಚನೆ ನೀಡಿದ್ದಾರೆ. ಜತಗೆ ಮಳೆಗಾಲದಲ್ಲಿ ಸೃಷ್ಟಿಯಾಗುವ ರಸ್ತೆಗಳನ್ನು ಶೀಘ್ರ ಮುಚ್ಚುವ ಮೂಲಕ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. 

Advertisement

ಪಾಲಿಕೆಯ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ 177 ಕಿ.ಮೀ. ಉದ್ದದ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲಾಗಿದೆ. ಉಳಿದಂತೆ 212 ಕಿ.ಮೀ. ರಾಜಕಾಲುವೆ ದುರಸ್ತಿ ಕಾರ್ಯ ಚಾಲನೆಯಲ್ಲಿದ್ದು, ಅದರಲ್ಲಿ 120 ಕಿ.ಮೀ. ಉದ್ದದ ರಾಜಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೂ, ಇನ್ನೂ 92 ಕಿ.ಮೀ. ಉದ್ದದ ರಾಜಕಾಲುವೆ ಕೆಲಸ ಬಾಕಿಯಿದ್ದು, ಮಳೆಯ ಅಪಾಯ ತಪ್ಪಿಸಲು ತಾತ್ಕಾಲಿಕ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ. 

ಮುಂಗಾರಿಗೂ ಮೊದಲೇ 3,629 ಗುಂಡಿ: ಮಳೆಗಾಲ ಆರಂಭವಾಗುವ ಮೊದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 3,629 ರಸ್ತೆ ಗುಂಡಿಗಳು ಸೃಷ್ಟಿಯಾಗಿರುವ ಬಗ್ಗೆ ಆಯುಕ್ತರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರಂತೆ ಕೂಡಲೇ ಗುಂಡಿಗಳನ್ನು ಶೀಘ್ರ ಮುಚ್ಚುವಂತೆ ಹಾಗೂ ಮುಂದೆ ಸೃಷ್ಟಿಯಾಗುವ ಗುಂಡಿಗಳನ್ನು ತಡ ಮಾಡದೆ ದುರಸ್ತಿ ಮಾಡುವಂತೆಯೂ ಆಯುಕ್ತರು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಕೇಂದ್ರ: ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳಿಗೆ ಶೀಘ್ರವಾಗಿ ಸ್ಪಂದಿಸಲು ಕೇಂದ್ರ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗುತ್ತದೆ. ಅದರ ನಿರ್ವಹಣೆಗೆ ಸ್ನಾತಕೋತ್ತರ ಪದವಿ ಪಡೆದಿರುವ, ಅನುಭವಿಯೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸುವ ಬಗ್ಗೆಯೂ ಆದೇಶಿಸಲಾಗಿದೆ. ಹಾಗೇ, ಬೆಸ್ಕಾಂ, ಜಲಮಂಡಳಿ ಸೇರಿ ಇನ್ನಿತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ವಿಪತ್ತು ನಿವಾರಣೆ ಮಾಡಬೇಕೆಂದು ಸೂಚಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next