Advertisement

ಅನಾಥ ಮಕ್ಕಳಿಗೆ ಶಿಕ್ಷಣ-ವಸತಿ ಕಲ್ಪಿಸಲು ಸೂಚನೆ

04:02 PM Dec 22, 2018 | Team Udayavani |

ಶಹಾಪುರ: ಅನಾಥ ಪ್ರಜ್ಞೆ ಕಾಡುತ್ತಿರುವ ಮಕ್ಕಳಿಗೆ ಅಭಯ ಹಸ್ತ ನೀಡುವ ಮೂಲಕ ಅವರಿಗೆ ಭದ್ರತೆ ವ್ಯವಸ್ಥೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಪ್ರಭು ಎನ್‌. ಬಡಿಗೇರ ಹಾಗೂ ಸಿವಿಲ್‌ ನ್ಯಾಯಾಧೀಶ ಹಣಮಂತ್ರಾಯ ಕುಲಕರ್ಣಿ ಸೂಚಿಸಿದರು.

Advertisement

ನಗರದ ಫಿಲ್ಟರ್‌ ಬೆಡ್‌ ಕಾಲೋನಿಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿದ್ದ ಮೂವರು ಮಕ್ಕಳ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಭೇಟಿ ಮಾಡಿ ಕಾಲೋನಿ ನಾಗರಿಕರೊಂದಿಗೆ ಮತ್ತು ಶಾಲಾ ಶಿಕ್ಷಕರ ಜೊತೆ ಮಾತನಾಡಿ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಕ್ಕಳ ರಕ್ಷಣೆ ಕುರಿತು ಸರ್ಕಾರಿ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚಿಸಿದರು.

ಎರಡು ವರ್ಷದ ಹಿಂದೆ ಅನಾರೋಗ್ಯದಿಂದ ತಂದೆ ಮೃತಪಟ್ಟಿದ್ದು, ಪ್ರಸ್ತುತ ಹದಿನೈದು ದಿನಗಳ ಹಿಂದೆ ತಾಯಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರ್ವರ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ತಕ್ಷಣ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಥಾಮಸ್‌ ದೊಡ್ಮನಿ ಅವರಿಗೆ ನಿರ್ದೇಶನ ನೀಡಿದರು. ಅಲ್ಲದೆ ಮಾನವ ಹಕ್ಕು ಮತ್ತು ಕಾನೂನು ಸೇವಾ ಪ್ರಾಧಿಕಾರದಡಿ ಬರುವ ಸೌಲಭ್ಯಗಳನ್ನು ನೀಡಿ ಮಕ್ಕಳಿಗೆ
ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.

ಬಾಲ ಕಾರ್ಮಿಕರ ಯೋಜನಾ ನಿರ್ದೇಶಕರ ಭೇಟಿ: ಅನಾಥ ಮಕ್ಕಳ ಸಮಗ್ರ ಮಾಹಿತಿ ಪಡೆದ ಜಿಲ್ಲಾಧಿಕಾರಿ ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಬಾಲ ಕಾರ್ಮಿಕ ಯೋಜನಾ ಇಲಾಖೆಯ ನಿರ್ದೇಶಕ ರಘುವೀರಸಿಂಗ್‌ ಠಾಕೂರ ಅವರನ್ನು ಮಕ್ಕಳ ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆ ಠಾಕೂರ ಮತ್ತು ಇತರೆ ಇಲಾಖೆ ಅಧಿಕಾರಿಗಳು ಅನಾಥ ಮಕ್ಕಳನ್ನು ಭೇಟಿಯಾಗಿ ಸ್ಥಳದಲ್ಲಿದ್ದ ನಾಗರಿಕರೊಂದಿಗೆ ಚರ್ಚಿಸಿ ಸಂಬಂಧಿಸಿದ ದಾಖಲಾತಿಗಳು ಮತ್ತು ಇತರೆ ಸಮಗ್ರ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next