Advertisement

ಪ್ರವಾಹ ತಡೆಗೆ ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

04:55 PM May 22, 2022 | Team Udayavani |

ಬೆಳಗಾವಿ: ಪ್ರವಾಹ ಸಂದರ್ಭದಲ್ಲಿ ಜನ-ಜಾನುವಾರುಗಳ ತಕ್ಷಣ ರಕ್ಷಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಚಿಲ್ಲದೇ ಮಾನವ ಪ್ರಾಣಹಾನಿ ಅಥವಾ ಜಾನುವಾರ ಜೀವಹಾನಿಯಾದರೆ 24 ಗಂಟೆಗಳಲ್ಲಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರವಾಹ ನಿರ್ವಹಣೆ ಕುರಿತ ಜಿಲ್ಲಾಮಟ್ಟದ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಗಳಿಗೆ ನೀರು ನುಗ್ಗಿದಾಗ ಆ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ವಿಳಂಬ ಮಾಡಬಾರದು ಎಂದು ತಿಳಿಸಿದರು.

ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನೆರೆಯ ರಾಜ್ಯದ ಜಲಾಶಯಗಳ ಸಂಗ್ರಹ, ಮಳೆ ಪ್ರಮಾಣದ ಮೇಲೆ ನಿಗಾ ವಹಿಸಲು ಅನುಕೂಲವಾಗುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಬೇಕು. ಜಲಾಶಯಗಳಿಂದ ನೀರು ಬಿಡುಗಡೆ ಕುರಿತು ನಿರಂತರ ನಿಗಾ ವಹಿಸಿ ಪ್ರತಿದಿನ ಮಾಹಿತಿ ನೀಡುವಂತೆ ತಂಡ ರಚಿಸಿ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು ಎಂದು ತಿಳಿಸಿದರು.

ಸ್ಥಳೀಯ ಜನರ ತಂಡ ರಚನೆಗೆ ಸೂಚನೆ: ಕೃಷ್ಣಾ ನದಿತೀರದ ಗ್ರಾಮಗಳ ಸಮೀಕ್ಷೆ ಕೈಗೊಂಡು ಹಿಂದಿನ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಬೋಟ್‌ ಮತ್ತಿತರ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಸ್ಥಳೀಯವಾಗಿ ತಕ್ಷಣವೇ ಸ್ಪಂದಿಸಲು ಅನುಕೂಲವಾಗುವಂತೆ ಸ್ಥಳೀಯ ಮಟ್ಟದಲ್ಲಿ ಹತ್ತು ಜನರ ತಂಡ ಸದಾ ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ನದಿತೀರದ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ: ಎಸ್‌ಡಿಆರ್‌ ಎಫ್‌ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಮುಂಚಿತವಾಗಿಯೇ ನದಿತೀರದ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ನಿರ್ದೇಶನ ನೀಡಿದರು.

Advertisement

ಸಂಬಂಧಿಸಿದ ಇಲಾಖೆಗಳು ಪಂಚಾಯತ ಮಟ್ಟದಲ್ಲಿ ಸ್ಥಳೀಯ ಜನರನ್ನು ಸೇರಿಸಿಕೊಂಡು ತಂಡಗಳನ್ನು ರಚಿಸಬೇಕು. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಜತೆಗೂಡಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಮಳೆಗಾಲ ಆರಂಭವಾಗುತ್ತಿರುವುದರಿಂದ ಯಾವುದೇ ಅಧಿಕಾರಿಗಳು ಹಾಗೂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗೆ ರಜೆ ನೀಡಬಾರದು ಎಂದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು, ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿ ಸಿದಂತೆ ಕಳೆದ ಬಾರಿಯ ಅನುಭವದ ಆಧಾರದ ಮೇಲೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀರಿನ ಹರಿವು ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸಜ್ಜಾಗಿರಬೇಕು. ಬೋಟ್‌ಗಳನ್ನು ದುರಸ್ತಿ ಮಾಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಾಲಾಗಳ ಸ್ವಚ್ಛತೆಗೆ ಸೂಚನೆ: ನಗರ ಹಾಗೂ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ನಾಲಾಗಳನ್ನು ಮೂರು ದಿನಗಳಲ್ಲಿ ಸ್ವತ್ಛಗೊಳಿಸಬೇಕು ಎಂದು ಜಿಲ್ಲಾ ಧಿಕಾರಿಗಳು ಸಂಬಂ ಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯುತ್‌ ಕಂಬಗಳು ಮತ್ತು ಮರಗಳು ಉರುಳಿಬಿದ್ದರೆ ತುರ್ತಾಗಿ ತೆರವುಗೊಳಿಸಬೇಕು. ಬೀದಿದೀಪ ಮತ್ತಿತರ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ನಗರ ಪೊಲೀಸ್‌ ಆಯುಕ್ತ ಡಾ| ಎಂ.ಬಿ. ಬೋರಲಿಂಗಯ್ಯ ಅವರು ಹಿಂದಿನ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸಿದ್ಧತೆ ಮಾಡಿಕೊಂಡರೆ ಅನಾಹುತಗಳನ್ನು ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಪಂ ಸಿಇಒ ದರ್ಶನ್‌ ಎಚ್‌.ವಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಅನುಕೂಲವಾಗುವಂತೆ ಸ್ಥಳೀಯ ಶಾಸಕರ ಅನುದಾನದಲ್ಲಿ ಬೋಟ್‌ ಖರೀದಿಗೆ ತಹಶೀಲ್ದಾರರು ಪ್ರಯತ್ನಿಸಬೇಕು. ಹೆಚ್ಚೆಚ್ಚು ಬೋಟ್‌ಗಳು ಲಭ್ಯವಿದ್ದರೆ ತಕ್ಷಣವೇ ಜನರ ರಕ್ಷಣೆಗೆ ಬಳಸಬಹುದು. ಸಾಧ್ಯವಾದರೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಅವುಗಳನ್ನು ಒದಗಿಸಬಹುದು. –ನಿತೇಶ ಪಾಟೀಲ, ಜಿಲ್ಲಾಧಿಕಾರಿಗಳು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next