Advertisement

ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

10:33 AM Mar 11, 2019 | |

ಸಾಗರ: ಗುಣಮಟ್ಟದ ಕಾಮಗಾರಿ ನನ್ನ ಮೊದಲ ಆದ್ಯತೆ. ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕ ಹಣ ಪೋಲು ಮಾಡಲು ಪ್ರಯತ್ನ ಮಾಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಎಚ್‌. ಹಾಲಪ್ಪ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ನೂತನ ಕಚೇರಿ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು. 

ಲೋಕೋಪಯೋಗಿ ಇಲಾಖೆ ಸೇರಿದಂತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಇಲಾಖೆಗಳು ಸರ್ಕಾರದಿಂದ ಹಣ ಬಂದಿದೆ ಎಂದು ಖರ್ಚು ಮಾಡಲು ಕಾಮಗಾರಿ ಮಾಡಬೇಡಿ. ನೀವು ಮಾಡುವ ಕಾಮಗಾರಿ ಮುಂದಿನ 100 ವರ್ಷಗಳವರೆಗೆ ಸುರಕ್ಷಿತವಾಗಿರುವಂತೆ ಯೋಜನೆ ರೂಪಿಸಿ. ಈ ಹಿಂದೆ ಸಾಗರದಲ್ಲಿ ನಿರ್ಮಾಣ ಮಾಡಿದ ಅನೇಕ ಕಟ್ಟಡ, ವಾಟರ್‌ ಟ್ಯಾಂಕ್‌ ಅವ ಗಿಂತ ಮೊದಲೇ ಕುಸಿದು ಬಿದ್ದಿದೆ. ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಎಂದು ಪ್ರಶ್ನಿಸಿದ ಹಾಲಪ್ಪ, ನನ್ನ ಅವಧಿಯಲ್ಲಿ ಅಂತಹದ್ದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಸರ್ಕಾರಿ ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುವ ಶಾಲಾ-ಕಾಲೇಜು, ಸರ್ಕಾರಿ
ಕಟ್ಟಡಗಳನ್ನು ಬಹುಮಹಡಿ ಕಟ್ಟಡವಾಗಿ ನಿರ್ಮಾಣ ಮಾಡುವತ್ತ ಗಮನ ಹರಿಸಿ, ಅದಕ್ಕೆ ಲಿಫ್ಟ್‌ ವ್ಯವಸ್ಥೆಯನ್ನು ಇರಿಸಿಕೊಳ್ಳುವ ಚಿಂತನೆ ನಡೆಸಲಾಗಿದೆ. ನೂತನವಾಗಿ ನಿರ್ಮಾಣ ಮಾಡುವ ಕಾಮಗಾರಿಗಳನ್ನು ಮಲೆನಾಡು ಪರಿಸರಕ್ಕೆ ಪೂರಕವಾಗುವಂತೆ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು. 

ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ತಾಲೂಕಿನ ಕೆಲವು ಭಾಗದಲ್ಲಿ ಸಿಗುವುದು ಮರಳು ಮಿಶ್ರಿತ ಮಣ್ಣು ಎನ್ನುವುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದೃಢೀಕರಿಸಿದೆ. ಇಂತಹ ಮರಳಿನಲ್ಲಿ, ಎಂ- ಸ್ಯಾಂಡ್‌ನ‌ಲ್ಲಿ ನಿರ್ಮಾಣ ಮಾಡುವ ಕಟ್ಟಡದ ಗುಣಮಟ್ಟ ಪ್ರಶ್ನಾರ್ಹವಾಗಿರುತ್ತದೆ.

Advertisement

ಜೊತೆಗೆ ಗುತ್ತಿಗೆದಾರರು ಶೇ. 40ರಷ್ಟು ಕಡಿಮೆ ಬಿಡ್‌ನ‌ಲ್ಲಿ ಕಾಮಗಾರಿ ಗುತ್ತಿಗೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ
ಗುಣಮಟ್ಟದ ಕಾಮಗಾರಿ ಪ್ರಶ್ನಾರ್ಹ. ಈ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದರು.

 ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ ಇತರರು ಇದ್ದರು. ಡಯಾಸ್‌ ಬಾಬು ಪ್ರಾರ್ಥಿಸಿದರು. ಜಿ. ಪರಮೇಶ್ವರಪ್ಪ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next