ಮಹಾಲಿಂಗಪುರ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸಚಿವರಾದ ನಂತರ ಆರ್.ಬಿ.ತಿಮ್ಮಾಪೂರ ಅವರ ಸರ್ವಾಧಿಕಾರಿ ಧೋರಣೆ ಹಾಗೂ ದುವರ್ತನೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಮುಖಂಡರಿಗೆ ತುಂಬಾ ಅನ್ಯಾಯವಾಗಿದೆ. ಇದರಿಂದಾಗಿ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸಚಿವರ ವರ್ತನೆಗೆ ಬೇಸತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಧರೆಪ್ಪ ಸಿದ್ದಪ್ಪ ಸಾಂಗಲಿಕರ ರಾಜ್ಯ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಮುಧೋಳ ಮೀಸಲು ಮತಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ ಪಕ್ಷದ ಅಭ್ಯರ್ಥಿಯ ಸತತ ಸೋಲಿನ ನಂತರ 2023ನೇ ಸಾಲಿನ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕೆ ನಾನು ಪಕ್ಷದ ಅಭ್ಯರ್ಥಿಯಾದ ಆರ್.ಬಿ.ತಿಮ್ಮಾಪೂರ ಗೆಲುವಿಗಾಗಿ ಶ್ರಮಿಸಿದ್ದೇನೆ ಎಂದು ತಿಳಿಸಿದರು.
2021ರ ಅಕ್ಟೋಬರ್ 15 ರಿಂದ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದ ಹಿರಿಯರು, ಕಾರ್ಯಕರ್ತರು ಪದಾಧಿಕಾರಿಗಳೊಂದಿಗೆ, ಅಭ್ಯರ್ಥಿಯ ಗೆಲುವಿಗಾಗಿ ಪ್ರಾಮಾಣಿಕ ಕಾರ್ಯಕರ್ತನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಸಚಿವರಾದ ನಂತರ ತಿಮ್ಮಾಪೂರ ಅವರು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಲಾಗದೆ ಪಕ್ಷದ ಹೆಸರಿಗೆ ಕಳಂಕ ಬರುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರವೆಂಬುದು ಕೇವಲ ತಮ್ಮ ಮನೆಯ ಸ್ವತ್ತೆಂದು ತಿಳಿದು ಅವರ ಕುಟುಂಬ ಸದಸ್ಯರೆಲ್ಲರೂ ನಡೆದುಕೊಳ್ಳುತ್ತಿದ್ದಾರೆ ಎಂದರು.
ಇವರ ವರ್ತನೆ ಕಂಡು ಬೇಸತ್ತು ಮತದಾರರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಮತಗಳ ಅಂತರ ನೀಡಿರುವುದು ಇವರ ಆಡಳಿತ ವೈಖರಿಗೆ ಆದ ಪರಿಣಾಮವಾಗಿದೆ. ಪಕ್ಷದ ಅಭ್ಯರ್ಥಿಯ ಸೋಲಿಗೆ ಆರ್.ಬಿ.ತಿಮ್ಮಾಪೂರ ಅವರೇ ನೇರ ಹೊಣೆಗಾರರು ಎಂದು ಹೇಳಿದರು.
ಜಿಲ್ಲಾ ಲಿಂಗಾಯತ್/ಪಂಚಮಸಾಲಿ ಸಮಾಜದ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷನಾದ ನನ್ನೂಡನೆ ಕೂಡಾ ಸರಿಯಾಗಿ ವರ್ತಿಸಲಾರದ ಕಾರಣ, ನಾನು ಜನಸಾಮಾನ್ಯರ ಕೆಲಸಗಳನ್ನು ಮಾಡಲು ಅಸಹಾಯಕನಾಗಿ ಮನನೊಂದು ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆಂದು ಧರೆಪ್ಪ ಸಾಂಗ್ಲೀಕರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.