ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನ ಚೈನ್ ತುಂಡಾಗಿರುವುದಕ್ಕೆ ರಾಜ್ಯ ಸರಕಾರದ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಸರ್ಕಾರದ ವಿರುದ್ದ ಗುಡುಗಿದರು.
ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ಗೇಟ್ ಸ್ಥಿತಿ ಅವಲೋಕಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 19 ನೇ ಗೇಟ್ ಕ್ರಸ್ಟ್ ಗೇಟ್ ಅಲ್ಲಿ ಉಳಿದಿಲ್ಲ. ಕಿತ್ತುಕೊಂಡು ಹೋಗಿದೆ. ಇದರಿಂದ ರೈತ ಸಮೂಹ ತುಂಬಾ ಆತಂಕದಲ್ಲಿದೆ. ಇದನ್ನು ನೋಡಿದರೆ ರಾಜ್ಯದಲ್ಲಿ ಆಡಳಿತ ಜವಾಬ್ದಾರಿ ಹಳಿ ತಪ್ಪಿದೆ ಎನಿಸುತ್ತದೆ.
ಜಲಾಶಯ ನಂಬಿ 10 ಲಕ್ಷ ಎಕರೆ ರೈತರು ಜೀವನ ನಡೆಸುತ್ತಿದ್ದಾರೆ. ಇದರಿಂದ ರೈತರಿಗೆ ಬಹಳ ಆಘಾತವಾಗಿದೆ. ರೈತರ ತಲೆ ಮೇಲೆ ರಾಜ್ಯ ಸರಕಾರ ಬಂಡೆ ಎಳೆದಿದೆ. ಪ್ರತಿ ವರ್ಷ ಗೇಟ್ ಮೆಂಟೇನನ್ಸ್ ಮಾಡುವ ಕೆಲಸ ಸರಕಾರದ ಜವಾಬ್ದಾರಿ. ಆದರೆ, ಅಧಿಕಾರಿಗಳು, ಆಡಳಿತ ವ್ಯವಸ್ಥೆಯ ಅಸಡ್ಡೆಯಿಂದ ಈ ಸಮಸ್ಯೆ ತಲೆದೂರಿದೆ ಎಂದರು.
ಕೂಡಲೇ ಇಡೀ ಸರಕಾರ ಸ್ಥಳದಲ್ಲಿ ಕುಳಿತು ಸಮಸ್ಯೆ ಬಗೆಹರಿಸಬೇಕು. ಗೇಟ್ ಅಳವಡಿಕೆಯ ಪ್ರಯತ್ನ ಮಾಡಬೇಕು. ಇದಲ್ಲದೇ ರೈತರಿಗೆ ನೀರು ಉಳಿಸುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೇ ಈ ಭಾಗದ ರೈತರೊಂದಿಗೆ ಸೇರಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೈದ್ಯ ಬಸವರಾಜ ಕ್ಯಾವಟರ್, ಚಂದ್ರು ಹಲಗೇರಿ, ಗಣೇಶ ಹೊರತಟ್ನಾಳ್ ಸೇರಿದಂತೆ ಇತರರು ಇದ್ದರು.