ಬೆಂಗಳೂರು: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಎಲ್ಲಾ 198 ವಾರ್ಡ್ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಬಗ್ಗೆ ನಿಗಾವಹಿಸಲು “ಮಾರ್ಷಲ್’ಗಳನ್ನು ನೇಮಕ ಮಾಡಿರು ವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳ ಮತ್ತು ಸಿಬ್ಬಂದಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ಸಲ್ಲಿಸಿದ್ದ ಅರ್ಜಿಯು ಬುಧವಾರ ನ್ಯಾ. ಸುನೀಲ್‌ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಕೆಲ ಕಾಲ ವಾದ ಆಲಿಸಿದ ನ್ಯಾಯ ಪೀಠ, ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಆಯುಕ್ತರು, ಕರ್ನಾಟಕ ಮಾಜಿ ಸೈನಿಕರ ಕಲ್ಯಾಣ ಸಂಘ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಗೊಳಿಸಿ, ಅರ್ಜಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಾದ ವಿ.ಶ್ರೀನಿವಾಸ್ ವಾದ ಮಂಡಿಸಿ, ಬಿಬಿಎಂಪಿ 2017ರ ಏ.26ರಂದು ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ವಾರ್ಡ್ ಮಟ್ಟ ದಲ್ಲಿ ನಿಗಾ ಇಡಲು ಪ್ರಾಯೋಗಿಕವಾಗಿ ಮಾರ್ಷಲ್‌ಗಳನ್ನು ನೇಮಕ ಮಾಡಲು ನಿರ್ಧರಿಸಿತ್ತು.
ಬಳಿಕ 2019ರ ಆ.23ರಂದು ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ಕಾರ್ಯಕಾರಿ ಎಂಜಿನಿಯರ್ ಎಲ್ಲ 198 ವಾರ್ಡ್‌ಗಳಲ್ಲಿ ಮಾರ್ಷ್‌ಲ್‌ಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆದೇಶ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ, ಘನ ತ್ಯಾಜ್ಯ ವಿಲೇವಾರಿ ಬಗ್ಗೆ ನಿಗಾವಹಿಸುವುದು ಕಿರಿಯ ಹಾಗೂ ಹಿರಿಯ ಆರೋಗ್ಯಾಧಿಕಾರಿಗಳ ಕರ್ತವ್ಯ. ಸದ್ಯ 38 ಕಿರಿಯ ಹಾಗೂ 30 ಹಿರಿಯ ಆರೋಗ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ.
ಬಿಬಿಎಂಪಿ ಆ ಹುದ್ದೆಗಳನ್ನು ಭರ್ತಿ ಮಾಡಿ ಪಾಲಿಕೆ ಸಿಬ್ಬಂದಿಗೆ ಘನ ತ್ಯಾಜ್ಯ ವಿಲೇವಾರಿಯ ನಿರ್ವಹಣೆ ಕೆಲಸವನ್ನು ವಹಿಸುವ ಬದಲು ಮಾರ್ಷಲ್‌ಗಳನ್ನು ನೇಮಕ ಮಾಡಿರುವುದು ಕಾನೂನು ಬಾಹಿರ, ಇದರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಯ ಉಲ್ಲಂಘನೆಯಾಗಿದೆ. ಅಲ್ಲದೆ, ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಕಾಯ್ದೆ-1970ಕ್ಕೆ ವಿರುದ್ಧವಾಗಿ ದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅಲ್ಲದೆ, ಪಾಲಿಕೆಯ ಸಿಬ್ಬಂದಿಗೆ ನೀಡುತ್ತಿರುವುದಕ್ಕಿಂತ ಹೆಚ್ಚಿನ ವೇತನ ನೀಡಿ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಂಡಿರುವುದು ಸಿಸಿಎ ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮ (ಕೆಎಸ್‌ಸಿಎ) ಗಳಿಗೆ ವಿರುದ್ಧವಾಗಿದೆ. ಮಾರ್ಷಲ್‌ಗಳ ನೇಮಕ ಆಕ್ಷೇಪಿಸಿ 2019ರ ಸೆ.17ರಂದು ಸರ್ಕಾರ ಮತ್ತು ಬಿಬಿಎಂಪಿಗೆ ಮನವಿ ನೀಡಿದ್ದರೂ ಸಹ ಅದನ್ನು ಪರಿಗಣಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ಮಾರ್ಷಲ್‌ಗಳ ನೇಮಕಕ್ಕೆ ಕರ್ನಾಟಕ ಮಾಜಿ ಯೋಧರ ಕಲ್ಯಾಣ ಟ್ರಸ್ಟ್ ಗೆ ನೀಡಿರುವ ಹೊರಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಟ್ರಕ್ ಟರ್ಮಿನಲ್ ಮೇಲ್ಮನವಿ ವಜಾ
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-4ರಲ್ಲಿ ದಾಸನಪುರ ಬಳಿಯ “ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಗೆಸ್ ನೇರ ರಸ್ತೆ ಸಂಪರ್ಕ ಕಲ್ಪಿಸಲು ಸರ್ಕಾರ ಭೂ ಸ್ವಾಧೀನಪಡಿಸಿಕೊಂಡಿ ದ್ದನ್ನು ಪ್ರಶ್ನಿಸಿ ಜಮೀನು ಮಾಲೀಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತಂತೆ ಜಮೀನು ಮಾಲೀಕರಾದ ದತ್ತಪ್ಪ ಸೇರಿದಂತೆ ಮೂವರು ಸಲ್ಲಿಸಿದ್ದ ಮೇಲ್ಮನವಿಯನ್ನು ನಾ. ರವಿ ಮಳಿಮಠ ಹಾಗೂ ನಾ. ಎಂ.ಐ.ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದ್ದು, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿಹಿಡಿದಿದೆ.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಒಟ್ಟು 28 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಅದಕ್ಕೆ ನೇರ ರಸ್ತೆ ಸಂಪರ್ಕ ಕಲ್ಪಿಸಲು 4 ಎಕರೆಗೂ ಹೆಚ್ಚಿನ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು ಮಾಲೀಕರಿಗೆ ಈಗಾಗಲೇ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರವನ್ನೂ ನೀಡಲಾಗಿದೆ. ಈ ತಕರಾರಿನಿಂದ ಯೋಜನೆ ಜಾರಿಗೆ ಅಡ್ಡಿಯಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಏಕಸದಸ್ಯ ನ್ಯಾಯಪೀಠದ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.