ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಹೆಚ್ಚು ಒತ್ತು ನೀಡುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಬಗ್ಗೆ ಬಿಬಿಎಂಪಿಯ ಎಲ್ಲ ವಲಯದ ಕಂದಾಯ ಅಧಿಕಾರಿಗಳೊಂದಿಗೆ ಆಯುಕ್ತರು ಗುರುವಾರ ಸಭೆ ನಡೆಸಿ, ಕೋವಿಡ್ ಸೋಂಕು ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಕೇವಲ 68 ಕೋಟಿ ರೂ. ಮಾತ್ರ ಪಾಲಿಕೆಯ ಖಜಾನೆಯಲ್ಲಿದೆ. ಹೀಗಾಗಿ, ಪಾಲಿಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರನ್ನು ಪತ್ತೆ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡುವಂತೆ ಸೂಚನೆ ನೀಡಿದರು.
ಈ ವರ್ಷ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಹೇಗಿದ್ದರೂ 2021ರ ಮಾರ್ಚ್‌ನ ವರೆಗೆ ಅವಕಾಶ ಇದೆ.ಆದರೆ, ಈಗಾಗಲೇ ಆಸ್ತಿತೆರಿಗೆ ಉಳಿಸಿಕೊಂಡಿರುವವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಆಯುಕ್ತರು ಕಂದಾಯ ವಿಭಾಗದ ಅಧಿಕಾರಿಗಳಿಗೆ ತಿಳಿಸಿದರು.
ವಲಯವಾರು ಪಟ್ಟಿಗೆ ಸೂಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಮಾಡಿ ಅತೀ ಹೆಚ್ಚು ಬಾಕಿ ಉಳಿಸಿಕೊಂಡವರ ಸರದಿಯಾಗಿ ನೋಟಿಸ್ ಜಾರಿ ಮಾಡುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಯಾರೂ ಪಾಲಿಕೆಯ ನೋಟಿಸ್‌ಗೂ ಉತ್ತರ ನೀಡುವುದಿಲ್ಲವೂ ಅವರ ವಾಣಿಜ್ಯ ಕಟ್ಟಡ ಅಥವಾ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮನೆಯವಸ್ತುಗಳನ್ನು ಜಪ್ತಿ ಮಾಡಲು ಕ್ರಮ ವಹಿಸಿ ಇದಕ್ಕೂ ಮೊದಲು ನೋಟಿಸ್ ಜಾರಿ ಮಾಡಿ. ಇದಕ್ಕೆ ನೀಡುವ ಉತ್ತರದ ಮೇಲೆ ಕ್ರಮವಹಿಸಿ ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ ಎಂದು ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೀವದ ಜೊತೆ ಜೀವನವೂ ಮುಖ್ಯ!: ಜೀವದ ಜೊತೆ ಜೀವನವೂ ಮುಖ್ಯ ಎಂದು ಆಯುಕ್ತರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೋವಿಡ್ ತುರ್ತು ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಅದೇ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವುದೂ ಅತೀ ಮುಖ್ಯ ಹೀಗಾಗಿ, ಆಸ್ತಿತೆರಿಗೆ ಸಂಗ್ರಹದ ಕಡೆಯೂ ಗಮನಹರಿಸಿ, ಕೋವಿಡ್ ಕೆಲಸವನ್ನೂ ನಿಭಾಯಿಸಿ ಇದು ಸಂಕಷ್ಟದ ಸಮಯವಾಗಿದ್ದು, ದಕ್ಷತೆಯಿಂದ ಎದುರಿಸಿ ಎಂದು ಆಯುಕ್ತರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ವಿಶೇಷ ಆಯುಕ್ತ (ಕಂದಾಯ)ರಾದ ಬಸವರಾಜು, ಜಂಟಿ ಆಯುಕ್ತ ವೆಂಕಟಾಚಲಪತಿ ಹಾಗೂ ಸಭೆಯಲ್ಲಿ ವಿವಿಧ ವಲಯದ ಕಂದಾಯ ಅಧಿಕಾರಿಗಳು ಹಾಜರಿದ್ದರು.