ಧಾರವಾಡ: ಮಳೆ-ಬೆಳೆ ಇಲ್ಲದೇ ಮುಂಗಾರು ಸಂಪೂರ್ಣ ವಿಫಲವಾಗಿದ್ದು, ಈ ಕುರಿತು ರಾಜ್ಯ ಸರಕಾರಕ್ಕೆ ಧಾರವಾಡ ತಾಲೂಕಿನ ವಾಸ್ತವ ಸ್ಥಿತಿ ಹಾಗೂ ಬರಗಾಲದ ವಸ್ತುಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಆಗಸ್ಟ್ ಕೊನೆ ವಾರದ ವರೆಗೆ 615 ಮಿ.ಮೀ. ವಾಡಿಕೆ ಮಳೆ ಬದಲಾಗಿ 302.1 ಮಿ.ಮೀ. ಮಳೆಯಾಗಿದೆ. ಧಾರವಾಡ ತಾಲೂಕಿನಲ್ಲಿ ಶೇ.51 ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಳೆಹಾನಿ ಆಗಿ ಮುಂಗಾರು ಸಂಪೂರ್ಣ ವಿಫಲವಾಗಿದೆ.
ಹೀಗಾಗಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬೆಳೆಹಾನಿ ಹಾಗೂ ಈಗಿನ ಬರಗಾಲದ ಸನ್ನಿವೇಶದ ಕುರಿತು ಅಗತ್ಯ ಮಾಹಿತಿಯುಳ್ಳ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿ ಎಂ.ಕೆ. ಹಿರೇಮಠರ ಅವರಿಗೆ ಸೂಚನೆ ನೀಡಿದರು. ಕಳೆದ 15 ದಿನಗಳಿಂದ ಧಾರವಾಡ ತಾಲೂಕಿನ ಪ್ರದೇಶದ ಹತ್ತಿ ಬೆಳೆಗೆ ಕಾಂಡಕೊರಕ ರೋಗ ಕಂಡು ಬಂದಿದ್ದು, ಮಳೆ ಇಲ್ಲದೇ ಉಳಿದಿರುವ ಶೇ.5ರಷ್ಟು ಬೆಳೆಯೂ ರೋಗದಿಂದ ಹಾಳಾಗುವಂತಾಗಿದೆ.
ಈ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕಾದ ಗ್ರಾಮ ಸೇವಕರು ಲಕ್ಷ ವಹಿಸುತ್ತಿಲ್ಲ. ಕೈಗೆ ಸಿಗದ ಗ್ರಾಮ ಸೇವಕರಿಗೆ ಈ ರೋಗದ ಬಗ್ಗೆಯೇ ಮಾಹಿತಿ ಇಲ್ಲ. ಒಟ್ಟಿನಲ್ಲಿ ರೈತರ ಪಾಲಿಗೆ ಕೃಷಿ ಇಲಾಖೆ ಸತ್ತು ಹೋದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕೆಲ ತಾಪಂ ಸದಸ್ಯರು ಸಹ ಧ್ವನಿಗೂಡಿಸಿ, ಗ್ರಾಮ ಸೇವಕರ ಮೇಲೆ ತಪ್ಪಿರುವ ಹಿಡಿತ ಸಾಧಿಸಿ, ರೈತರಿಗೆ ಮಾಹಿತಿ ನೀಡಿ ರೋಗದ ಕಡಿವಾಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಕೃಷಿ ಇಲಾಖೆ ತಾಲೂಕಾಧಿಕಾರಿ ಎಂ.ಕೆ. ಹಿರೇಮಠ ಮಾತನಾಡಿ, ಕಳೆದು ಎರಡು ತಿಂಗಳ ಕಾಲ ರಜೆ ಮೇಲೆ ಇದ್ದೆ. ಈಗಷ್ಟೇ ಬಂದಿದ್ದು, ಈ ಕುರಿತಂತೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ರೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮವನ್ನು ಕೃಷಿ ಇಲಾಖೆ ಕೈಗೊಳ್ಳಲಿದ್ದು, ಗ್ರಾಮ ಸೇವಕರಿಗೆ ಅಗತ್ಯ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಠರಾವು ಪಾಸ್: ಜಿಲ್ಲಾಸ್ಪತ್ರೆಗೆ ಬರುವ ಕೆಲ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಮರಣೋತ್ತರ ಪರೀಕ್ಷೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಜನ್‌ಗೆ ಸೂಚನೆ ನೀಡಲು ತಾಪಂ ಸಭೆಯಲ್ಲಿ ಸದಸ್ಯರ ಒತ್ತಾಯದ ಮೇರೆಗೆ ಠರಾವು ಪಾಸ್ ಮಾಡಲಾಯಿತು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಕೆಲ ವಿಷಯ ಚರ್ಚೆ ಕೈಗೊಂಡು ಗಣೇಶ ವಿಸರ್ಜನೆ ಪ್ರಯುಕ್ತ ಮಧ್ಯಾಹ್ನದ ವೇಳೆಗೆ ಸಭೆ ಮುಕ್ತಾಯಗೊಳಿಸಲಾಯಿತು. ಉಪಾಧ್ಯಕ್ಷ ಮುತ್ತಪ್ಪ ನಾಯ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಫಕ್ಕೀರಪ್ಪ ಬುಡ್ಡಿಕಾಯಿ, ತಾಪಂ ಇಒ ರುದ್ರಸ್ವಾಮಿ ಸೇರಿದಂತೆ ತಾಪಂ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.