ಗದಗ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಕುರಿತಂತೆ ನಿಗದಿಪಡಿಸಿದ ಗುರಿ ಸಾಧನೆಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ನಿಗದಿಪಡಿಸಿದ ಗುರಿಯನ್ನು ಆಯಾ ಆರ್ಥಿಕ ವರ್ಷದಲ್ಲೆ ಪೂರ್ಣವಾಗಿ ಮುಗಿಸಬೇಕು. ಇಲ್ಲದಿದ್ದಲ್ಲಿ ನಿಮ್ಮನ್ನೇ ಹೊಣೆ ಮಾಡಲಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಅವುಗಳನ್ನು ಸರಿಯಾದ ಸಮಯಕ್ಕೆ ಅನುಷ್ಠಾನ ಮಾಡುವ ಮೂಲಕ ಆ ಸಮುದಾಯವನ್ನು ಸಬಲರನ್ನಾಗಿಸಲು ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪೂಜಾರ ಮಾತನಾಡಿ, 2011 ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1,53,400 ಅಲ್ಪಸಂಖ್ಯಾತ ಜನರಿದ್ದಾರೆ. 2021 -22 ನೇ ಸಾಲಿನ ರಾಜ್ಯ ವಲಯ ಕಾರ್ಯಕ್ರಮ ಅಡಿಯಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ 2 ಚರ್ಚ್ ಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಲು 45.25 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮದರಸಾ ಆಧುನೀಕರಣ ಹಾಗೂ ಔಪಚಾರಿಕ ಶಿಕ್ಷಣಯಡಿ ಗದಗಿನ ದಿವಾನ್ ಜಿಜಾಮಾತಾ ಮಸ್ಜಿದ್ ಮದರಸಾಗೆ 5 ಲಕ್ಷ, ಪಿ.ಎಚ್.ಡಿ ವಿದ್ಯಾರ್ಥಿಗೆ 2.10 ಲಕ್ಷ ಪ್ರೋತ್ಸಾಹ, ಬಿ.ಎಡ್, ಡಿ.ಎಡ್ ಅಭ್ಯಾಸಿಸುವ 28 ವಿದ್ಯಾರ್ಥಿಗಳಿಗೆ ತಲಾ 25 ಸಾವಿರದಂತೆ 7 ಲಕ್ಷ, 77 ವಿದ್ಯಾರ್ಥಿಗಳಿಗೆ ವಿದ್ಯಾಸಿರಿಯಡಿ ತಲಾ 9000 ರೂ. ಗಳಂತೆ 6.93 ಲಕ್ಷ ರೂ., 3 ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ವಾಹಣೆಗೆ 122.93 ಲಕ್ಷ ರೂ., 6 ಮೌಲಾನಾ ಆಝಾದ್ ಮಾದರಿ ಶಾಲೆ ನಿರ್ವಹಣೆಗೆ 31.37 ಲಕ್ಷ ರೂ ಸೇರಿದಂತೆ ಒಟ್ಟು ರಾಜ್ಯ ವಲಯದ ಕಾರ್ಯಕ್ರಮಗಳಿಗೆ 345.67 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 6 ಮೆಟ್ರಿಕ್ ಪೂರ್ವ, ನಂತರದ ವಸತಿ ನಿಲಯಗಳಿದ್ದು, 5 ಸ್ವಂತ ಕಟ್ಟಡ ಹೊಂದಿವೆ. 6 ವಸತಿ ನಿಲಯಗಳಲ್ಲಿ 350 ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 6 ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ 693 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 6 ಶಾಲೆಗಳ ಪೈಕಿ 4 ಶಾಲೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ, 2 ಶಾಲೆಗಳ ಕಟ್ಟಡಕ್ಕೆ ನಿವೇಶನ ಮಂಜೂರಾತಿ ಹಂತದಲ್ಲಿವೆ ಎಂದು ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2021-22 ಸಾಲಿನಲ್ಲಿ ಪಿ.ಎಂ.ಎ.ವೈ.ಎಚ್.ಎಫ್.ಎ ವಸತಿ ಯೋಜನೆಯಡಿ 91 ಮನೆ ನಿರ್ಮಾಣಕ್ಕೆ 445.90 ಲಕ್ಷ ರೂ. ಖರ್ಚು ಮಾಡಿ ನಿಗದಿತ ಗುರಿ ಸಾಧಿಸಲಾಗಿದೆ. 2021-22 ಸಾಲಿನಲ್ಲಿ 122.93 ಲಕ್ಷ ದಲ್ಲಿ 5 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೇ.100 ಗುರಿ ಸಾಧನೆ ಮಾಡಲಾಗಿದೆಯೆಂದು ಮಂಡಳಿ ಅಧಿಕಾರಿ ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆಗಳ ನಿರ್ವಹಣೆಗಾಗಿ ಅಲ್ಪಸಂಖ್ಯಾತರಿಗಾಗಿ 109.32 ಲಕ್ಷ ಆರ್ಥಿಕ ವಾರ್ಷಿಕ ಗುರಿ ಸಾಧನೆಯಾಗಿದೆ. ಭೌತಿಕ 463 ಗುರಿ ನೀಡಲಾಗಿದೆ. ಕೃಷಿ ಇಲಾಖೆಯಿಂದ ಬೀಜ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸುವಿಕೆ, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ನಿಗದಿಪಡಿಸಲಾದ 650 ಗುರಿ ಪೈಕಿ ಶೇ.96 ಸಾಧನೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆಯ ಜಿಲ್ಲಾ ಉದ್ಯಮ ಕೇಂದ್ರದ ಜಿಲ್ಲಾ ವಲಯ ಯೋಜನೆಯಡಿ ಸಿದ್ಧ ಉಡುಪು ತಯಾರಿಕೆಯಲ್ಲಿ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ 48 ಹೋಳಿಗೆ ಯಂತ್ರ ವಿತರಿಸಲಾಗಿದೆ. ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ಪೂರೈಕೆಯಡಿ 1.96 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ವಕ್ಫ್ ಬೋರ್ಡ್, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಸಹಕಾರ, ಪೊಲೀಸ್, ಕೈಗಾರಿಕೆ ಇಲಾಖೆ, ನಗರಸಭೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪ್ರತಿನಿಧಿಗಳು ಹಾಜರಿದ್ದು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಗುರಿ ಸಾಧನೆಯ ಅಂಕಿ ಸಂಖ್ಯೆ ವಿವರ ನೀಡಿದರು.