ಬೆಂಗಳೂರು: ಹಾಲಿ ಮತ್ತು ಮಾಜಿ ಶಾಸಕರು-ಸಂಸದರ ವಿರುದ್ಧ ಬಾಕಿ ಇರುವ ಹಾಗೂ ಸರ್ಕಾರ ವಾಪಸ್ ಪಡೆದುಕೊಂಡ ಕ್ರಿಮಿನಲ್ ಪ್ರಕರಣಗಳ ಕುರಿತು ಸಮಗ್ರ ಮಾಹಿತಿಯನ್ನು ಮೂರು ವಾರಗಳಲ್ಲಿ ನ್ಯಾಯಾಲಯದ ಮುಂದೆ ಮಂಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಹೈಕೋರ್ಟ್ 2020ರಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಪ್ರಕರಣದಲ್ಲಿ ಹೈಕೋರ್ಟ್‌ಗೆ ನೆರವು ನೀಡಲು ನಿಯೋಜಿಸಲಾಗಿರುವ ಹಿರಿಯ ವಕೀಲ ಆದಿತ್ಯ ಸೋಂದಿ ಹಾಜರಾಗಿ, ಈ ವಿಚಾರವಾಗಿ 2023ರ ನ.9ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಶಾಸಕರು-ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಬೇಕಿದೆ.
ಅದೇ ರೀತಿ 2022ರ ಮಾರ್ಚ್ 5ರಂದು ಹೈಕೋರ್ಟ್ ನೀಡಿದ ಆದೇಶದಂತೆ ಕೈಗೊಳ್ಳಲಾದ ಕ್ರಮಗಳನ್ನು ಪರಿಶೀಲಿಸಬೇಕಿದೆ. ಅಲ್ಲದೇ ವಿಶೇಷ ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಳ್ಳಬೇಕಾಗಿದೆ. ಅಲ್ಲದೇ ಶಾಸಕರು-ಸಂಸದರ ವಿರುದ್ಧದ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದುಕೊಂಡಿದ್ದರ ಬಗ್ಗೆ ನ್ಯಾಯಾಲಯ ಪರಾಮರ್ಶೆ ನಡೆಸಬೇಕಾಗಿದೆ ಎಂದು ವಿವರಿಸಿದರು.
ಸಮಗ್ರ ಮಾಹಿತಿ ನೀಡುವಂತೆ ಸೂಚನೆ : ಹಿರಿಯ ವಕೀಲ ಆದಿತ್ಯ ಸೋಂದಿ ಅವರ ಸ್ಪಷ್ಟನೆಯನ್ನು ಪರಿಗಣಿಸಿದ ನ್ಯಾಯಪೀಠ, 2020ರ ಸೆ. 16ರ ನಂತರದಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರು-ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಸಮಗ್ರ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು 3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ರಿಜಿಸ್ಟ್ರರ್‌ಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತು.