Advertisement

ಪ್ರತ್ಯೇಕ ಮತಗಟ್ಟೆ ನೀಡದಿದ್ರೆ ಮತದಾನ ಬಹಿಷ್ಕಾರ ಎಚ್ಚರಿಕೆ

04:40 PM Apr 14, 2018 | |

ಕೂಡ್ಲಿಗಿ: ಪ್ರತ್ಯೇಕ ಮತಗಟ್ಟೆ ನೀಡಬೇಕು. ಇಲ್ಲವಾದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿ ತಾಲೂಕಿನ ಸಾಣಿಹಳ್ಳಿ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರ್‌ ಟಿ.ಸುರೇಶ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಹಿರೇಹೆಗ್ಗಾಳ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಾಣಿಹಳ್ಳಿಯಲ್ಲಿ ಬರಿ ಪರಿಶಿಷ್ಟ ಜಾತಿಗೆ ಸೇರಿದ
125ಕ್ಕೂ ಹೆಚ್ಚು ಮನೆಗಳಿದ್ದು, 350ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೂ, ಕಳೆದ ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ನೀಡದೆ 3 ಕಿ.ಮೀ.ದೂರ ಇರುವ ಬೊಪ್ಪಲಾಪುರ ಮತಗಟ್ಟೆಗೆ ಸೇರಿಸುವ ಮೂಲಕ ಈ ಗ್ರಾಮದ ಮತದಾರರನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ಪ್ರತಿ ಚುನಾವಣೆಯಲ್ಲಿ ಶೇ. 20ರಷ್ಟು ಮಾತ್ರ ಇಲ್ಲಿನ ಜನ ಮತ ಚಲಾಯಿಸುತ್ತಿದ್ದು, ಬಹುತೇಕರು ಮತದಾನದಿಂದ ವಂಚಿತರಾಗುತ್ತಿದ್ದಾರೆ ಎಂದು ತಹಶೀಲ್ದಾರ್‌ ಗಮನಕ್ಕೆ ತರಲಾಯಿತು.

ಸಾಣಿಹಳ್ಳಿಯಲ್ಲಿನ ವೃದ್ಧರು, ಬಾಣಂತಿಯರು, ಗರ್ಭಿಣಿಯರು ಹಾಗೂ ವಿಕಲಚೇತನರು ಪ್ರತಿ ಚುನಾವಣೆಗಳಲ್ಲಿ ಬೊಪ್ಪಲಾಪುರ ಗ್ರಾಮಕ್ಕೆ ಹೋಗಿ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲೂ ಪ್ರತ್ಯೇಕ ಮತಗಟ್ಟೆಗೆ ಬೇಡಿಕೆ ಇಟ್ಟಿದ್ದೆವು. ವಿಪರ್ಯಾಸ ಎಂದರೆ, ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಅಲ್ಲದೇ ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಗುರುತಿಸಿದ್ದು, ಹೊಸದಾಗಿ ಕೆಲವು ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪೈಕಿ
ಕೇವಲ 220 ಮತದಾರರಿರುವ ಗೋವಿಂದಗಿರಿ ತಾಂಡಾದಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಆದರೆ 350ಕ್ಕೂ ಹೆಚ್ಚು ಮತದಾರರಿರುವ ಸಾಣಿಹಳ್ಳಿ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪನೆ ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವ ಅಧಿಕಾರ ಹೊಂದಿದ್ದರೂ, ಕಳೆದ 70 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಶೇ. 90ರಷ್ಟು ಜನರಿಗೆ ಮತದಾನ ಚಲಾಯಿಸಲು ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲೂ ಮತದಾನ ಬಹಿಸ್ಕರಿಸಲು ನಿರ್ಧರಿಸದ್ದೇವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸಿ ಹೋರಾಟ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ತಾಲೂಕು ಭೋವಿ ಸಂಘದ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಕೆ.ಶಿವಣ್ಣ, ಶಿವರಾಜ, ಸವಿತಾ, ಶಿವಣ್ಣ, ಸೋಮಣ್ಣ, ಸುರೇಶ, ವೀರೇಶ, ತಿಮ್ಮಪ್ಪ, ತ್ರಿಮೂರ್ತಿ, ಪರಶುರಾಮ, ಗೋವಿಂದಪ್ಪ, ನಾಗರಾಜ, ಹನುಂತಪ್ಪ, ಶರಣಪ್ಪ, ಯಶೋಧ, ಕೊಟ್ರೇಶ್‌, ಲಕ್ಷ್ಮೀ , ಕೊಟ್ರಬಸಪ್ಪ, ರತ್ನಮ್ಮ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next