ಯಾದಗಿರಿ: ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಪಂ ಸಿಇಒ ಅಮರೇಶ ಆರ್. ನಾಯಕ ಪಿಡಿಒಗಳಿಗೆ ಸೂಚಿಸಿದರು.
ರಾಮಸಮುದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಯಾವುದೇ ಗ್ರಾಮಗಳಲ್ಲಿನ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೂ ಮೀಟರ್ ಅಳವಡಿಸುವ ಮೂಲಕ ನಳದ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಜೆಜೆಎಂ ಕಾಮಗಾರಿ ನಿರ್ವಹಿಸುವ ಏಜೆನ್ಸಿ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಆರಂಭವಾಗಿದ್ದು, ಈ ಅಭಿಯಾನದಡಿ ಶಾಲಾ ಮಕ್ಕಳ ಭೋಜನಾಲಯ, ಆಟದ ಮೈದಾನ, ಶೌಚಾಲಯ, ಉದ್ಯಾನವನ ನಿರ್ಮಿಸಬೇಕು. ಜೊತೆಗೆ ಅವುಗಳ ಸಮರ್ಪಕ ಬಳಕೆ ಮಾಡಿ, ಸದುಪಯೋಗ ಪಡೆದುಕೊಳ್ಳುವಂತೆ ಶಾಲಾ ಮುಖ್ಯಗುರುಗಳಿಗೆ ತಿಳಿಸಿದರು.
ನರೇಗಾ ಯೋಜನೆಯಲ್ಲಿ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆ ಇಲ್ಲದೆ ಇರುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕಾಗಿ ಪಟ್ಟಣಗಳಿಗೆ ಗುಳೆ ಹೋಗುತ್ತಾರೆ. ಗುಳೆ ಹೋಗುವುದನ್ನು ತಡೆಯಲು ನರೇಗಾದಡಿ ಎಲ್ಲರಿಗೂ ಕೂಲಿ ಕೆಲಸ ಸಮರ್ಪಕವಾಗಿ ಸಿಗುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಹೇಳಿದರು.
ಯಾದಗಿರಿ ತಾಪಂ ಇಒ ಬಸವರಾಜ ಶರಬೈ, ನರೇಗಾ ಯೋಜನೆಯ ಯಾದಗಿರಿ ತಾಪಂ ಸಹಾಯಕ ನಿರ್ದೇಶಕ ಮದ್ರಶೇಖರ ಪವಾರ, ಶರಣಪ್ಪ ಬಂದರವಾಡ, ನಿಂಗಪ್ಪ, ಶ್ರೀಧರ, ರಾಜಕುಮಾರ, ರಾಜೇಂದ್ರಕುಮಾರ, ಬಸಪ್ಪ ಹೋತಪೇಠ, ಸಿಬ್ಬಂದಿ ಇದ್ದರು.