Advertisement

ಅನಧಿಕೃತ ರಸ್ತೆ ವಿಭಜಕ ತೆರವಿಗೆ ಸೂಚನೆ

09:22 PM Apr 26, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ರಸ್ತೆ ವಿಭಜಕಗಳನ್ನು ತೆರವುಗೊಳಿಸಿ ಅಂಡರ್‌ ಪಾಸ್‌ಗಳಲ್ಲಿ ಕಡ್ಡಾಯವಾಗಿ ವಾಹನ ಸವಾರರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ವಿದ್ಯುತ್‌ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಸೂಚಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ಆಯೋಜಿಸಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರಗಳಲ್ಲಿ ರಸ್ತೆಗಳು ತುಂಬಾ ಕಿರಿದಾಗಿದ್ದು, ರಸ್ತೆ ಅಗತ್ಯ ಇರುವ ಕಡೆ ಅಗಲೀಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ತಾತ್ಕಾಲಿಕ ತಡೆಗೋಡೆಗೆ ಸೂಚನೆ: ಅಂಡರ್‌ಪಾಸ್‌ಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದರ ಜೊತೆಗೆ ಅಪಘಾತಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ಶಿಡÛಘಟ್ಟ ಪಟ್ಟಣದ ಬಳಿ ಹೆದ್ದಾರಿ ಪಕ್ಕ ಹಾದು ಹೋಗಿರುವ ರಾಜಕಾಲುವೆ ಬಳಿ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಲು ಸೂಚನೆ ನೀಡಿದಲ್ಲದೇ ಗೌರಿಬಿದನೂರು ಪಟ್ಟಣದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ತೀರಾ ಕಳಪೆಯಾಗಿ ಚರಂಡಿಗಳು ಹೂಳು ತುಂಬಿಕೊಂಡು ಕೊಳಚೆ ನೀರು ರಸ್ತೆಯ ಮೇಲೆ ಹರಿಯಲಾಗುತ್ತಿದೆ. ಕೂಡಲೇ ಸರಿಪಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಖಡಕ್‌ ಸೂಚನೆ ನೀಡಿದರು.

ಹೊಸ ರಸ್ತೆ ನಿರ್ಮಿಸಿ: ಜಿಲ್ಲೆಯ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ವಾಹನ ಸವಾರರಿಗೆ ಹಲವು ಮಾರ್ಗಸೂಚಿ ಫ‌ಲಕಗಳನ್ನು ಅಳವಡಿಸುವಂತೆ ಎಲ್ಲಾ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ರಸ್ತೆಗಳಲ್ಲೂ ಸಹ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಬಾಗೇಪಲ್ಲಿ ತಾಲೂಕಿನ ಗೂಳೂರು ಬಳಿ ರಸ್ತೆ ತುಂಬಾ ಹಾಳಾಗಿದ್ದು, ಹೊಸ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದರು.

ಶಾಲೆಗಳ ಸಮೀಪ ಉಬ್ಬುಗಳ ನಿರ್ಮಿಸಿ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಬಳಿ ರಸ್ತೆ ಹಾಳಾಗಿದ್ದು, ಹೊಸ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತಾ ಸಂದೇಶಗಳನ್ನೊಳಗೊಂಡ ಫ‌ಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ತಿಳಿಸಿದರು.

Advertisement

ಶಾಲಾ ಕಾಲೇಜುಗಳ ಸಮೀಪ ಹಾದು ಹೋಗುವ ಪ್ರಮುಖ ರಸ್ತೆಗಳ ಅಕ್ಕಪಕ್ಕ ಸುರಕ್ಷತಾ ಫ‌ಲಕ ಮತ್ತು ಮಾರ್ಗಸೂಚಿ ನಾಮಫ‌ಲಕ, ರಸ್ತೆ ಉಬ್ಬುಗಳನ್ನು ಹಾಗೂ ಜೀಬ್ರಾಕ್ರಾಸ್‌ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್‌ಬಾಬು ಮಾತನಾಡಿ, ಗೌರಿಬಿದನೂರು ಪಟ್ಟಣದಲ್ಲಿ ಮ್ಯಾನ್‌ಹೋಲ್‌ಗ‌ಳು ಅವೈಜ್ಞಾನಿಕವಾಗಿದ್ದು, ಇವುಗಳನ್ನು ಸರಿಪಡಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಬಸ್‌ ನಿಲ್ದಾಣ ಮತ್ತು ಬಸ್‌ ಡಿಪೋಗಳ ತಿರುವುಗಳ ಬಳಿ ಚಾಲಕರು ವೇಗವಾಗಿ ಚಾಲನೆ ಮಾಡುತ್ತಿದ್ದು, ರಸ್ತೆ ಉಬ್ಬುಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಗುರುದತ್ತ ಹೆಗಡೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರಶಂಕರ್‌, ಅಬಕಾರಿ ಇಲಾಖೆಯ ಉಪ ಆಯುಕ್ತ ಸಿ.ಜಗದೀಶ್‌ ಸೇರಿದಂತೆ ಜಿಲ್ಲೆಯ ನಗರಸಭೆಗಳ ಆಯುಕ್ತರು ಇದ್ದರು.

ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಖಾಸಗಿ ಬಸ್‌ ನಿಲ್ದಾಣ ನಿರ್ಮಿಸಿ: ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪಟ್ಟಣದಿಂದ ಹೊರ ಹೋಗುವ ಪ್ರಮುಖ ರಸ್ತೆಗಳ ಬಳಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ನಿಲ್ದಾಣ ನಿರ್ಮಾಣ ಆಗಬೇಕು. ಜಿಲ್ಲೆಯ ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚಿಂತಾಮಣಿ ನಗರಗಳಲ್ಲಿ ನೆನೆಗುದಿಗೆ ಬಿದ್ದಿರುವ ಖಾಸಗಿ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಸೂಚಿಸಿದರು.

ರಸ್ತೆ ನಿರ್ಮಾಣ ಮಾಡುವಾಗ ಸಾಕಷ್ಟು ಮರಗಳನ್ನು ಕಡಿಯುತ್ತಿರುವ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿಗಳು ಕಳವಳ ವ್ಯಕ್ತಪಡಿಸಿ, ಈಗಾಗಲೇ ನಿರ್ಮಾಣ ಮಾಡಿರುವ ರಸ್ತೆಗಳ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next