ಶಿವಮೊಗ್ಗ : ಆತ್ಮನಿರ್ಭರ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸಿ ಯೋಜನೆಗಳ ಲಾಭ ಜನಸಾಮಾನ್ಯರಿಗೆ ದೊರಕುವಂತೆ ಮಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಮಂಗಳವಾರ ಜಿಪಂ ಸಭಾಂಗಣದಲ್ಲಿ ಡಿಸಿಸಿ, ಡಿಎಲ್‌ಆರ್‌ಸಿ ಸಭೆಯಲ್ಲಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬ್ಯಾಂಕುಗಳು ರೈತರು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಕೇಂದ್ರ ಸರ್ಕಾರದ ವಿಮಾ ಯೋಜನೆಗಳು, ಆವಾಸ್ ಯೋಜನೆ, ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ಒದಗಿಸುವ ಮುದ್ರಾ ಯೋಜನೆ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಹಾಯಧನ ಒದಗಿಸುವ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯಡಿ ಜಿಲ್ಲೆಯಲ್ಲಿ 5692 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದುವರೆಗೆ 3293 ಮಂದಿಗೆ ನೆರವು ಒದಗಿಸಲಾಗಿದೆ. ವಿಲೇವಾರಿಗೆ ಬಾಕಿಯಿರುವ ಎಲ್ಲಾ ಅರ್ಜಿಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ವಿಲೇವಾರಿಗೊಳಿಸಿ ಯೋಜನೆಯ ಲಾಭ ಪ್ರತಿಯೊಬ್ಬರಿಗೂ ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ: ಶಿವಮೊಗ್ಗ ನಗರದ ಗೋವಿಂದಪುರದಲ್ಲಿ 3ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಮಾದರಿ ಮನೆಗಳನ್ನು ನಿರ್ಮಿಸಲಾಗಿದೆ.
ಈಗಾಗಲೇ 2882 ಮಂದಿ ಅರ್ಜಿ ಸಲ್ಲಿಸಿದ್ದು ತಮ್ಮ ಪಾಲಿನ ಮೊತ್ತವನ್ನು ಪಾವತಿಸಿದ್ದಾರೆ. ಇವರಿಗೆ ಮನೆಗಳನ್ನು ನಿರ್ಮಿಸಲು ಬ್ಯಾಂಕುಗಳು ಸಾಲ ನೀಡುವ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಅಗತ್ಯವಿರುವ ದಾಖಲೆಗಳನ್ನು ಪಡೆದು ಸಾಲ ಸೌಲಭ್ಯ ಒದಗಿಸಿ, 2024ರ ಒಳಗಾಗಿ ಎಲ್ಲರಿಗೂ ಮನೆ ನಿರ್ಮಾಣ ಎಂಬ ಪ್ರಧಾನಮಂತ್ರಿ ಅವರ ಕನಸನ್ನು ನನಸುಗೊಳಿಸಬೇಕು ಎಂದು ಹೇಳಿದರು.
ಜೀವ ವಿಮೆ ಪ್ರಯೋಜನ ಹೆಚ್ಚಿನವರಿಗೆ ಸಿಗಬೇಕು: ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಮತ್ತು ಸುರûಾ ಭಿಮಾ ಯೋಜನೆಯಡಿ ಪ್ರಯೋಜನ ಹೆಚ್ಚಿನ ಜನರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಇದುವರೆಗೆ ಜಿಲ್ಲೆಯಲ್ಲಿ ಕೇವಲ 162 ಮಂದಿ ಮಾತ್ರ ಡೆತ್ ಕ್ಲೈಮ್ ಮಾಡಿ ತಲಾ ಎರಡು ಲಕ್ಷ ರೂ. ಪಡೆದುಕೊಂಡಿದ್ದಾರೆ. ಮರಣ ಹೊಂದುವವರ ಸಂಖ್ಯೆ ಇದಕ್ಕಿಂತ ಹೆಚ್ಚಾಗಿದ್ದು, ಯೋಜನೆಯ ವ್ಯಾಪ್ತಿಗೆ ಇನ್ನಷ್ಟು ಫಲಾನುಭವಿಗಳನ್ನು ಸೇರಿಸಬೇಕು. ಈ ಕುರಿತು ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎಂ.ಎಲ್. ವೈಶಾಲಿ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್, ವಿವಿಧ ಬ್ಯಾಂಕ್‌ಗಳ ಪ್ರತಿನಿಧಿ ಗಳು, ಅಧಿಕಾರಿಗಳು ಸಭೆಯಲ್ಲಿ ಇದ್ದರು.