Advertisement
ನ್ಯುಮೋನಿಯಾದಂಥ ಪ್ರಕರಣಗಳು ದೇಶದಲ್ಲಿ ವ್ಯಾಪಿಸಿದರೆ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲ ಮೂಲಸೌಕರ್ಯಗಳನ್ನು ಆಸ್ಪತ್ರೆಗಳು ಹೊಂದಿವೆಯೇ ಎಂಬ ಬಗ್ಗೆ ಪರಿಶೀಲಿಸಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲೂ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಬರೆದ ಪತ್ರದಲ್ಲಿ ಸೂಚಿಸಲಾಗಿದೆ.
ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಇನ್‌ಫ್ಲುಯೆಂಜಾಗೆ ನೀಡಲಾಗುವ ಔಷಧಗಳು ಮತ್ತು ಲಸಿಕೆಗಳು, ವೈದ್ಯಕೀಯ ಆಮ್ಲಜನಕ, ಆ್ಯಂಟಿಬಯಾಟಿಕ್‌ಗಳು, ಪಿಪಿಇ (ವೈಯಕ್ತಿಕ ಸುರಕ್ಷ ಸಾಧನ)ಗಳು, ಪರೀಕ್ಷಾ ಕಿಟ್‌ಗಳ ಲಭ್ಯತೆ ಬಗ್ಗೆ ಪರಿಶೀಲಿಸಬೇಕು. ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಕೂಡ ತಮ್ಮ ಆಮ್ಲಜನಕದ ಸ್ಥಾವರಗಳು ಹಾಗೂ ವೆಂಟಿಲೇಟರ್‌ಗಳ ಸಮರ್ಪಕ ಕಾರ್ಯನಿರ್ವಹಣೆಯನ್ನು ದೃಢಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ನಿರ್ದೇಶನ ನೀಡಲಾಗಿದೆ. ಮಾದರಿ ರವಾನೆಗೆ ಸೂಚನೆ
ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಗಂಭೀರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಇರುವಂಥ ರೋಗಿಗಳು ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರ ಮೂಗಿನ ಮತ್ತು ಗಂಟಲಿನ ದ್ರವ ಮಾದರಿಗಳನ್ನು ಕಳುಹಿಸಿಕೊಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಈ ಮಾದರಿಗಳನ್ನು ವಿಆರ್‌ಡಿಎಲ್ (ವೈರಸ್ ಸಂಶೋಧನೆ ಮತ್ತು ಪತ್ತೆ ಪ್ರಯೋಗಾಲಯ)ಗಳಿಗೆ ಕಳುಹಿಸಿ, ಶ್ವಾಸಕೋಶ ಸಂಬಂಧಿ ರೋಗಕಾರಕಗಳಿವೆಯೇ ಎಂಬುದನ್ನು ಪತ್ತೆಹಚ್ಚಲಾಗುತ್ತದೆ. ಸಂಭಾವ್ಯ ಅಪಾಯವನ್ನು ತಡೆಯುವ ಸಲುವಾಗಿ ತತ್‌ಕ್ಷಣದಿಂದಲೇ ಈ ಮುನ್ನೆಚ್ಚರಿಕೆ ಕ್ರಮವನ್ನು ಜಾರಿ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Related Articles
ಚೀನದಲ್ಲಿ ಶ್ವಾಸಕೋಶ ಸಂಬಂಧಿ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗಿದೆ. ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮದ ಹಿನ್ನೆಲೆಯಲ್ಲಿ ನ. 27ರಂದು ಆರೋಗ್ಯ ಇಲಾಖೆ ತಾಂತ್ರಿಕ ಸಮಿತಿಯ ಜತೆಗೆ ಸಭೆ ನಡೆಸಿ, ಅಗತ್ಯವಿರುವ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ.
– ಡಾ| ರಂದೀಪ್, ಆಯುಕ್ತರು, ಆರೋಗ್ಯ ಇಲಾಖೆ
Advertisement
ಚೀನದಲ್ಲಿ ಸೋಂಕಿನ ಅಲೆ“ಉಸಿರಾಟದ ಸಮಸ್ಯೆ’ ಎಂಬ ಹೊಸ ಸೋಂಕಿನ ಅಲೆ ಚೀನದಾದ್ಯಂತ ವ್ಯಾಪಿಸುತ್ತಿದೆ. ನ್ಯುಮೋನಿಯಾ ಸೋಂಕು ಶೈಕ್ಷಣಿಕ ಸಂಸ್ಥೆಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಹರಡುತ್ತಿದೆ. ಕೊರೊನಾ ಸೋಂಕಿನ ಕರಾಳತೆಯನ್ನು ಇದು ನೆನಪಿಸಿದ್ದು, ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸೋಂಕಿತ ಮಕ್ಕಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಪ್ರತೀ ದಿನ ಸರಾಸರಿ 1,200ರಷ್ಟು ರೋಗಿಗಳು ತುರ್ತು ನಿಗಾ ಘಟಕಗಳಿಗೆ ದಾಖಲಾಗುತ್ತಿದ್ದಾರೆ ಎಂದು ಬೀಜಿಂಗ್‌ನ ಪ್ರಮುಖ ಆಸ್ಪತ್ರೆಯೊಂದು ಮಾಹಿತಿ ನೀಡಿದೆ. ಅಲ್ಲದೆ ಚೀನದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಕೆಲವು ಕಡೆ ವಾರಗಟ್ಟಲೆ ಶಾಲೆಗಳನ್ನು ಮುಚ್ಚಿದ ನಿದರ್ಶನಗಳೂ ವರದಿಯಾಗುತ್ತಿವೆ. ಚಳಿಗಾಲವೂ ಆಗಿರುವ ಕಾರಣ ಸೋಂಕಿನ ವ್ಯಾಪಿಸುವಿಕೆ ವೇಗ ಪಡೆಯುವ ಸಾಧ್ಯತೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಹಲವು ದೇಶಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಒದಗಿಸುವಂತೆ ಚೀನಕ್ಕೆ ಇತ್ತೀಚೆಗೆ ಸೂಚಿಸಿದೆ. ಕೊರೊನಾ ನಿರ್ಬಂಧಗಳು ತೆರವುಗೊಂಡ ಹಿನ್ನೆಲೆಯಲ್ಲಿ ಸಾಮಾನ್ಯ ಫ್ಲೂ ಕಾಣಿಸಿಕೊಳ್ಳುತ್ತಿದೆ ಅಷ್ಟೆ ಎಂದು ಚೀನದ ಕೆಲವು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ, ಈ ಸೋಂಕಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗದೇ ಇರುವುದು ಹಲವು ಅನುಮಾನ, ಆತಂಕಗಳಿಗೆ ಕಾರಣವಾಗಿದೆ.