Advertisement

ಶಾಂತಿಯುತ ಹಬ್ಬ ಆಚರಣೆಗೆ ಸೂಚನೆ

04:55 PM Aug 22, 2017 | Team Udayavani |

ಯಾದಗಿರಿ: ಗಣೇಶಚತುರ್ಥಿ ಹಾಗೂ ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಜಿಲ್ಲಾ ಧಿಕಾರಿ ಮಂಜುನಾಥ್‌ ಜೆ. ತಿಳಿಸಿದರು. ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಂತಿ ಸಭೆ ಹಾಗೂ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಿಕೊಂಡು ಬಂದಿದ್ದು, ಮುಂದೆ ಕೂಡ ಇದೇ ರೀತಿ ಹಬ್ಬಗಳನ್ನು ಆಚರಿಸಲು ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು. ಪ್ರಮುಖ ರಸ್ತೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಸಾರ್ವಜನಿಕರಲ್ಲಿ ತೊಂದರೆಯುಂಟು ಮಾಡಬಾರದು ಎಂದ ಅವರು, ಪೊಲೀಸ್‌ ಇಲಾಖೆ, ಜೆಸ್ಕಾಂ, ನಗರಸಭೆ, ಅಗ್ನಿಶಾಮಕದಳ ಹಾಗೂ ಪರಿಸರ ಮಂಡಳಿಯಿಂದ ಪೂರ್ವ ಪರವಾನಿಗಿ ಕಡ್ಡಾಯವಾಗಿ ಪಡೆಯಬೇಕು. ಇದಕ್ಕಾಗಿ ನಗರ ಠಾಣೆಯಲ್ಲಿ ಏಕಗವಾಕ್ಷಿ (ಸಿಂಗಲ್‌ ವಿಂಡೋ) ತೆರೆಯಲಾಗಿದೆ. ಜಿಲ್ಲೆಯಾದ್ಯಂತ ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸ್ಥಳಗಳು ಮತ್ತು ಮೆರವಣೆಗೆಗಳಲ್ಲಿ ಶಬ್ಧ ಮಾಲಿನ್ಯ ಉಂಟು ಮಾಡಬಾರದು. 50 ಹರ್ಡ್ಸ್‌ಕ್ಕಿಂತ ಹೆಚ್ಚಿನ ಶಬ್ಧ ಉಂಟು ಮಾಡುವ ಧ್ವನಿವರ್ಧಕ ಸೌಂಡ್ಸ್‌ ಸಿಸ್ಟಮ್‌ಗಳನ್ನು ಬಳಸಬಾರದು ಎಂದರು. ಬನಾಯೇಂಗೆ ಮಂದಿರ್‌ ಎಂಬ ಹಾಡನ್ನು ಮಾಧ್ಯಮದಲ್ಲಿ ವರ್ಗಾಯಿಸುವುದು. ಬಿತ್ತರಿಸುವುದು. ಹಾಡುವುದು ಹಾಗೂ ಕೇಳುವುದನ್ನು ನಿಷೇ ಧಿಸಲಾಗಿದೆ ಎಂದ ಅವರು, ಗಣೇಶ ವಿಗ್ರಹ ಕೂಡಿಸಿದ ಸ್ಥಳಗಳಲ್ಲಿ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳನ್ನು
ಬಳಸಬೇಕು. ಮಸೀದಿಗಳ ಬಳಿಯಿರುವ ಗಣೇಶ ಮಂಟಪಗಳಲ್ಲಿ ನಮಾಜ್‌ ವೇಳೆ ಸಣ್ಣ ಧ್ವನಿಯಲ್ಲಿ ಧ್ವನಿ ವರ್ಧಕ ಬಳಸಬೇಕು ಎಂದರು. ಗಣೇಶ ಮೂರ್ತಿಗಳನ್ನು ದೊಡ್ಡ ಕೆರೆ ಮತ್ತು ಸಣ್ಣ ಕೆರೆಗಳಲ್ಲಿ ವಿಸರ್ಜಿಸಬೇಕು. ವಿದ್ಯುತ್‌ ಸೌಲಭ್ಯ, ಜನರೇಟರ್‌, ಜೆ.ಸಿ.ಬಿ. ವ್ಯವಸ್ಥೆ ಮಾಡಬೇಕೆಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. 3,5,7,9 ಹಾಗೂ 11ನೇ ದಿವಸಗಳಂದು ಕೆರೆಯಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು. ಈ ಕೆರೆಗಳನ್ನು ಹೊರತುಪಡಿಸಿ ಯಾರೂ ಕೃಷ್ಣಾ ಮತ್ತು ಭೀಮಾ ನದಿಗಳಲ್ಲಿ ವಿಸರ್ಜಿಸಬಾರದು ಎಂದು ತಾಕೀತು ಮಾಡಿದ ಅವರು, 3,5,7,9ಹಾಗೂ 11ನೇ ದಿವಸಗಳಂದು ವಿದ್ಯುತ್‌ ಅನ್ನು ನಿರಂತರವಾಗಿ ಪೂರೈಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಗಣೇಶ ವಿಗ್ರಹ ಕೂರಿಸುವ ಮಂಟಪಗಳಿಗೆ ಉಚಿತವಾಗಿ ವಿದ್ಯುತ್‌ ನೀಡಬೇಕು ಎಂಬ ಮನವಿಯನ್ನು ತಳ್ಳಿಹಾಕಿದ ಜಿಲ್ಲಾಧಿಕಾರಿಗಳು, ಈ ಕುರಿತು ಕರ್ನಾಟಕ ವಿದ್ಯುತ್ಛಕ್ತಿ ಮಂಡಳಿಗೆ ಪತ್ರ ಬರೆಯಲಾಗುವುದು. ಅನುಮತಿ ನೀಡಿದ್ದಲ್ಲಿ
ಉಚಿತವಾಗಿ ವಿದ್ಯುತ್‌ ನೀಡಲಾಗುವುದು ಎಂದು ತಿಳಿಸಿದರು. ಗಣೇಶ ಉತ್ಸವ ಮುಗಿಯುವವರೆಗೂ ಜೆಸ್ಕಾಂ ಅಧಿಕಾರಿಗಳು ಮೊಬೈಲ್‌ ಸಂಪರ್ಕದಲ್ಲಿರಬೇಕು. ಎಲ್ಲಾ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸುರಕ್ಷತೆಗೆ ಕ್ರಮವನ್ನು ಪರಿಶೀಲಿಸಬೇಕು ಎಂದರು. ಗಣೇಶ ಉತ್ಸವ ಹೆಸರಿನಲ್ಲಿ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲಿ ಮಾಡಬಾರದು. ಒಂದು ವೇಳೆ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮಾತನಾಡಿ, ಗಣೇಶ ಮತ್ತು ಬಕ್ರೀದ್‌ ಹಬ್ಬಗಳ ವೇಳೆ ಎಸ್‌ಎಂಎಸ್‌, ವಾಟ್ಸ್‌ಆಪ್‌, ಫೇಸ್‌ಬುಕ್‌ ಮುಂತಾದವುಗಳ ಮೂಲಕ ಬರುವ ಪ್ರಚೋದನಾಕಾರಿ ಸಂದೇಶಗಳನ್ನು ನಂಬದಿರಿ. ಬಂದಂತ ಇಂತಹ ಪ್ರಚೋದನಾಕಾರಿ ಸಂದೇಶಗಳನ್ನು ಎಸ್‌ಎಮ್‌ಎಸ್‌ ಅಥವಾ ವಾಟ್ಸ್‌ಆಪ್‌ ಮೂಲಕ ಬೇರೆಯವರಿಗೆ ಕಳಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇಂತಹ ಅಂಶಗಳ ಸಂದೇಶಗಳು ಬಂದಲ್ಲಿ, ಪೊಲೀಸ್‌ ದೂರವಾಣಿ ಸಂಖ್ಯೆ 100 ಅಥವಾ ಕಂಟ್ರೋಲ್‌ ರೂಮ್‌ 94808 03600 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿರಿ ಎಂದು ಅವರು ಕೋರಿದರು. ಮದ್ಯಪಾನ ಮಾಡಿದರೆ ಬಂಧನ: ಗಣೇಶ ಉತ್ಸವ, ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಮದ್ಯಪಾನ ಮಾಡಿದಲ್ಲಿ ಸ್ಥಳದಲ್ಲೇ ಬಂಧಿ ಸಲಾಗುವುದು. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳ ಬಾರದು. ಇಂತಹ ಘಟನೆ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿ ವರ್ಷ ಪರಿಸರ ಸ್ನೇಹಿ ಗಣಪ ಮೂರ್ತಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತಿದ್ದು, ಈ ಬಾರಿ ಕೂಡ ಮುಂದುವರೆಸಲು ನಿರ್ಧರಿಸಲಾಯಿತು. ಯಾವ ಗಣೇಶ ಮೂರ್ತಿಗಳಿಗೆ ಬಹುಮಾನ ನೀಡಬೇಕು ಹಾಗೂ ಗಣೇಶ ಮೂರ್ತಿ ವಿಸರ್ಜಿಸುವ ಕೆರೆಗಳಲ್ಲಿ ಕೈಗೊಳ್ಳಬೇಕಾಗ ಸುರಕ್ಷತಾ ಕ್ರಮಗಳ ಕುರಿತು ನಿಗಾವಹಿಸಲು ನಗರಸಭೆ
ಅಧ್ಯಕ್ಷರು,ಉಪಾಧ್ಯಕ್ಷರನ್ನು ಒಳಗೊಂಡಂತೆ ನಗರದ ಹಿಂದು ಮತ್ತು ಮುಸ್ಲಿಂ ಮುಖಂಡರ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಕುರಿ ಮತ್ತು ಆಡುಗಳು ಮಾರಾಟವಾಗುವ ಸಾಧ್ಯತೆಯಿದ್ದು, ಅವುಗಳ ರಕ್ಷಣೆಯ ನಿಟ್ಟಿನಲ್ಲಿ ಚೆಕ್‌ ಪೋಸ್ಟ್‌ ನಿರ್ಮಾಣ ಮಾಡಬೇಕು. ರಾಜ್ಯದಿಂದ ತೆಲಂಗಾಣಕ್ಕೆ ರಫ್ತುಗೊಳ್ಳುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು, ಆರ್‌.ಟಿ.ಒ, ಪೊಲೀಸರು ಹಾಗೂ ಮೂರು ತಾಲೂಕಿನ ತಹಶೀಲ್ದಾರರು ಕ್ರಮ ವಹಿಸಬೇಕು ಎಂದು ಸೂಚಿಸಲಾಯಿತು. ಹಬ್ಬದ ಸಂದರ್ಭದಲ್ಲಿ ರಸ್ತೆಗೆ ಹರಿಯುವ ತ್ಯಾಜ್ಯವನ್ನು ನಗರ ಸಭೆಯವರು ಸಂಗ್ರಹಿಸಿ ಟ್ರ್ಯಕ್ಟರ್‌ ಮೂಲಕ ಬೇರೆಡೆ ಸಾಗಿಸಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಸಹಾಯಕ ಆಯುಕ್ತ ಡಾ| ಜಗದೀಶ್‌ ಕೆ. ನಾಯಕ್‌ ಸ್ವಾಗತಿಸಿ, ಪೂರ್ವಭಾವಿ ಸಭೆಯ ನಡಾವಳಿ ಮಂಡಿಸಿದರು. ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪುರ ವೇದಿಕೆ ಮೇಲಿದ್ದರು. ಉಪಾಧ್ಯಕ್ಷರಾದ ಶ್ಯಾಮ್‌ಸನ್‌ ಮಾಳಿಕೇರಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದು, ಶಾಂತಿಪಾಲನೆ ನಿಟ್ಟಿನಲ್ಲಿ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next