ಮುಂಡರಗಿ: ಸಭೆಗೆ ಬಾರದಿರುವ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿ ಮಾಡಬೇಕು. ಅಧಿಕಾರಿಗಳ ಪರವಾಗಿ ಬಂದಿರುವ ಇಲಾಖೆಯವರು ಸಭೆಯಿಂದ ಹೊರನಡೆಯಬೇಕು ಎಂದು ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ ಸೂಚಿಸಿದ್ದಾರೆ. ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಇಲಾಖಾವಾರು ಮಾಹಿತಿ ನೀಡಲು ಅಧಿಕಾರಿಗಳು ಮುಂದಾದಾಗ ಅಧ್ಯಕ್ಷೆ ರೇಣುಕಾ ಅಧಿಕಾರಿಗಳಿಗೆ ಸೂಚಿಸಿದರು.
ಕ್ರೀಡಾ ಇಲಾಖೆ, ಅಬಕಾರಿ, ಏತ ನೀರಾವರಿ, ಸಣ್ಣ ನೀರಾವರಿ, ಕೃಷಿ ಇಲಾಖೆಯವರು ಬಂದಿಲ್ಲ. ಕೃಷಿ ಇಲಾಖೆಯ ಎಸ್.ಬಿ. ನೆಗಳೂರು ಬದಲಾಗಿ ಬಂದಿರುವ ಅಧಿಕಾರಿಗಳು ಹೊರಗೆ ನಡೆಯಿರಿ. ತಾಲೂಕಿನಲ್ಲಿ ಬರಗಾಲವು ತಾಂಡವಾಡುತ್ತಿದೆ. ಕೃಷಿ ಇಲಾಖೆಯ ಅಧಿಕಾರಿ ಇಲ್ಲದೇ ಇದ್ದರೇ ಬೆಳೆಹಾನಿ, ರೈತರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುವುದಾದರೂ ಹೇಗೆ. ಕೃಷಿ ಇಲಾಖೆಯ ಎಸ್.ಬಿ.ನೆಗಳೂರು ಸಭೆಗೆ ಬರಲು ಫೋನ್ ಮಾಡಿ ಎಂದಾಗ ಕೃಷಿ ಕೇಂದ್ರದ ಎಸ್.ಎನ್. ಕುದರಿಮೂತಿ ಸಹಾಯಕ ನಿರ್ದೇಶಕರು ಧಾರವಾಡಕ್ಕೆ ಹೋಗಿದ್ದಾರೆ ಎಂದಾಗ ಸಭೆಯಲ್ಲಿ ಇದ್ದ ತಾಪಂ ಇಒ ಎಸ್.ಎಸ್.ಕಲ್ಮನಿ ಫೋನ್ ಮಾಡಿದಾಗ ಸಭೆಗೆ ಹಾಜರಾಗಲು ಸೂಚನೆ ನೀಡಿದ್ದೇ, ನನ್ನ ಮಾತು ಮೀರಿ ಧಾರವಾಡಕ್ಕೆ ಹೋಗಿದ್ದಾರೆ. ಕಾರಣ ಕೇಳಿ ಎಸ್.ಬಿ.ನೆಗಳೂರು ನೋಟಿಸ್ ನೀಡುವುದಲ್ಲದೇ ಮೇಲಧಿಕಾರಿಗಳ ಗಮನಕ್ಕೂ ತರಲಾಗುತ್ತದೆ ಎಂದರು.
ಕಪ್ಪತ್ತಹಿಲ್ಸ್ ವಲಯ ಅರಣ್ಯಾಧಿಕಾರಿ ಎಂ.ಎಸ್.ನ್ಯಾಮತಿ ಸಭೆಗೆ ಬಾರದೆ ಕೆಳಗಿನ ಅಧಿಕಾರಿಯನ್ನು ಕಳುಹಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಭಿಯಂತರ ಎ.ಎಸ್.ವಾಲಿ ಪರವಾಗಿ ಹಾರೋಗೇರಿ ಬಂದಿದ್ದಾರೆ. ಪ್ರತಿನಿಧಿ ಗಳು ಕಳುಹಿಸಿರುವ ಸಭೆಗೆ ಗೈರು ಹಾಜರಾದ ಅಧಿ ಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತದೆ. ಅಧಿಕಾರಿಗಳ ಪರವಾಗಿ ಬಂದಿರುವವವರು ಸಭೆಗೆ ಮಾಹಿತಿ ನೀಡಿ, ಮುಂದಿನ ಬಾರಿ ಇಲಾಖೆಯ ಮುಖ್ಯಸ್ಥರೇ ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕೆಂದು ಇಒ ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರ ತೋಟಗಾರಿಕೆ ಇಲಾಖೆಯಲ್ಲಿ ಬೆಳೆಗಳ ಕುರಿತು ನೂರು ಜನರಿಗೆ ತರಬೇತಿ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ನಾಲ್ಕು ಜನರಿಗೆ ಟೆಂಗಿನತೋಟ ಮಾಡಿ ಕೊಡಲಾಗುತ್ತದೆ. ಫಲಾನುಭವಿಗಳ ಹೆಸರನ್ನು ಜನಪ್ರತಿನಿಧಿ ಗಳು ಆಯ್ಕೆ ಮಾಡಿ ಕೊಡಬೇಕು. ಉದ್ಯೋಗ ಖಾತ್ರಿಯಲ್ಲಿ ತೋಟಗಾರಿಕೆ ವತಿಯಿಂದ 13,485 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೆಣಸಿನಕಾಯಿ, ಟೊಮೋಟೊ, ಬದನೆಕಾಯಿ ಬೆಳೆಗಳಿಗೆ 7.50ಲಕ್ಷ ವೆಚ್ಚದಲ್ಲಿ ರಿಯಾಯತಿಯಲ್ಲಿ ಹನಿ ನೀರಾವರಿ ಅಳವಡಿಸಿಕೊಡಲಾಗುತ್ತದೆ. ಬೆಳೆ ಸಮೀಕ್ಷೆಯ ಕಾರ್ಯ ನಡೆಯುತ್ತಿದ್ದು, ರೈತರು ಸಹಕರಿಸಬೇಕು. ತೋಟಗಾರಿಕೆಯ ಕಾರ್ಯಾಲಯದ ಕಟ್ಟಡವನ್ನು ನೂತನವಾಗಿ ನಿರ್ಮಿಸಲು ನೀಲನಕ್ಷೆ ತಯಾರಿಸಿ ಕೊಡಲಾಗಿದೆ ಎಂದರು.
ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಕೊರತೆಯ ಕುರಿತು ಸದಸ್ಯ ರುದ್ರಗೌಡ ಪಾಟೀಲ ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ.ಕೀರ್ತಿಹಾಸಗೆ ಪ್ರಶ್ನಿಸಿದಾಗ ಸ್ವಚ್ಛತೆ ಕಡೆಗೆ ಗಮನ ಹರಿಸಿದ್ದೇವೆ. ಪುರಸಭೆಯವರು ಕಸ ಹೇರಿಕೊಂಡು ಹೋಗುತ್ತಿಲ್ಲ ರುದ್ರಗೌಡ ಪಾಟೀಲ ಎಂದು ಆರೋಪಿಸಿದರು.
ಉಪಾಧ್ಯಕ್ಷೆ ಹೇಮಾವತಿ ಜನ್ನಾರಿ, ಸದಸ್ಯರಾದ ವೆಂಕಪ್ಪ ಬಳ್ಳಾರಿ, ಕುಸುಮಾ ಮೇಟಿ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಬಸಪ್ಪ ಮಲ್ಲನಾಯ್ಕರ, ರುದ್ರಪ್ಪ ಬಡಿಗೇರ, ತಿಪ್ಪವ್ವ ಕಾರಬಾರಿ ಇದ್ದರು. ಬಿಇಒ ಎಸ್.ಎನ್. ಹಳ್ಳಿಗುಡಿ, ಹೆಸ್ಕಾಂನ ಎಂ.ಬಿ. ಗೌರೋಜಿ, ಬಿ.ಎನ್. ರಾಟಿ, ಆಕಾಶ ವಂದೆ, ಎಸ್.ಬಿ.ಹೊಸಳ್ಳಿ, ಎಸ್.ಎನ್. ಮಾಳ್ಳೋದೆಕರ ಮತ್ತಿತರರು ಮಾಹಿತಿ ನೀಡಿದರು.