Advertisement

ತಂಬುಳಿಗಿಂತ ರುಚಿ ಬೇರಿಲ್ಲ

07:27 PM Oct 22, 2019 | Lakshmi GovindaRaju |

ಮಲೆನಾಡಿನ ಮನೆಗಳಲ್ಲಿ ತಂಬುಳಿ ಇಲ್ಲದೆ ಊಟವೇ ನಡೆಯದು. “ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು, ಹೊದ್ದು ಮಲಗಲು ಕಂಬಳಿ ಇರಬೇಕು ಅಂತ ಅರ್ಥ. ಸಾಮಾನ್ಯವಾಗಿ, ಹಸಿರು ಸೊಪ್ಪುಗಳಿಂದ ಮಾಡುವ ಈ ತಂಬುಳಿಯನ್ನು, ಬೇರೆ ಸಾಮಗ್ರಿಗಳಿಂದಲೂ ತಯಾರಿಸಬಹುದು.

Advertisement

ಎಳ್ಳಿನ ತಂಬುಳಿ
ಬೇಕಾಗುವ ಸಾಮಗ್ರಿ: ಬಿಳಿ ಎಳ್ಳು- 2 ಚಮಚ, ಒಣಮೆಣಸು- 2, ತೆಂಗಿನ ತುರಿ- 2 ಚಮಚ, ಮಜ್ಜಿಗೆ- 2 ಲೋಟ

ಮಾಡುವ ವಿಧಾನ: ಎಳ್ಳು ಮತ್ತು ಮೆಣಸನ್ನು ಒಟ್ಟಿಗೆ ಸೇರಿಸಿ ಅರ್ಧ ಚಮಚ ತುಪ್ಪ ಹಾಕಿ ಹುರಿಯಿರಿ. ಎಳ್ಳು ಸಿಡಿದಾಗ ಒಲೆ ಆರಿಸಿ. ಅದಕ್ಕೆ ಕಾಯಿತುರಿ, ಮಜ್ಜಿಗೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ, ಉಪ್ಪು ಸೇರಿಸಿ.

ಬಾಳೆ ದಿಂಡಿನ ತಂಬುಳಿ
ಬೇಕಾಗುವ ಸಾಮಗ್ರಿ: ಎಳೆಯ ಬಾಳೆ ದಿಂಡಿನ ಚೂರು- ಒಂದು ಕಪ್‌, ಹಸಿಮೆಣಸು-1, ಚಿಟಿಕೆ ಇಂಗು, ಮಜ್ಜಿಗೆ 2 ಲೋಟ.

ಮಾಡುವ ವಿಧಾನ: ಒಂದು ಲೋಟ ಮಜ್ಜಿಗೆ ಜೊತೆಗೆ ಮೇಲೆ ಹೇಳಿದ ಸಾಮಗ್ರಿಗಳನ್ನು ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ. ನಂತರ ಉಳಿದ ಮಜ್ಜಿಗೆ ಜೊತೆ ಬೆರೆಸಿ, ಕೊತ್ತಂಬರಿ ಸೊಪ್ಪು, ಉಪ್ಪು, ಸ್ವಲ್ಪ ನೀರು ಸೇರಿಸಿ. ಅದಕ್ಕೆ ಕರಿಬೇವು, ಸಾಸಿವೆ ಒಗ್ಗರಣೆ ಕೊಡಿ. ( ಇದೇ ರೀತಿ ಬಾಳೆ ಹೂವಿನ ತಂಬುಳಿಯನ್ನೂ ತಯಾರಿಸಬಹುದು. ಬಾಳೆ ಹೂವನ್ನು ಬಿಡಿಸಿ, ಅದರ ಒಳ ತಿರುಳನ್ನು ಸುಟ್ಟು, ತೆಂಗಿನತುರಿ ಜೊತೆ ರುಬ್ಬಬೇಕು)

Advertisement

ಬಿಳಿ ದಾಸವಾಳದ ತಂಬುಳಿ
ಬೇಕಾಗುವ ಸಾಮಗ್ರಿ: ಬಿಳಿ ದಾಸವಾಳದ ಹೂವು- 6, ಕಾಯಿ ತುರಿ- 2 ಚಮಚ , ಕಾಳುಮೆಣಸು- 8, ಜೀರಿಗೆ- ಒಂದು ಚಮಚ, ಮಜ್ಜಿಗೆ- 2 ಲೋಟ, ಉಪ್ಪು.

ಮಾಡುವ ವಿಧಾನ: ದಾಸವಾಳದ ಹೂವಿನ ಎಸಳುಗಳನ್ನು ಬಿಡಿಸಿ 5 ನಿಮಿಷ ಕಾಲ ಉಪ್ಪು ನೀರಲ್ಲಿ ಮುಳುಗಿಸಿ, ತೆಗೆದು, ಸ್ವಲ್ಪ ತುಪ್ಪ, ಜೀರಿಗೆ, ಕಾಳು ಮೆಣಸಿನ ಜೊತೆಗೆ ಹುರಿಯಿರಿ. ಅದು ತಣ್ಣಗಾದ ಮೇಲೆ ತೆಂಗಿನ ತುರಿ, ಮಜ್ಜಿಗೆ ಜೊತೆ ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಆ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಬೆರೆಸಿ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಿ.

ಮೆಂತ್ಯ ತಂಬುಳಿ
ಬೇಕಾಗುವ ಸಾಮಗ್ರಿ: ಮೆಂತ್ಯೆ- 1 ಚಮಚ, ಕೊತ್ತಂಬರಿ ಬೀಜ- 1/2 ಚಮಚ, ಒಣಮೆಣಸು- 2. , ತೆಂಗಿನ ತುರಿ- 2 ಚಮಚ, ಮಜ್ಜಿಗೆ 2 ಲೋಟ, ಉಪ್ಪು.

ಮಾಡುವ ವಿಧಾನ: ಮೆಂತ್ಯೆ, ಕೊತ್ತಂಬರಿ ಬೀಜ, ಒಣಮೆಣಸಿನಕಾಯಿಯನ್ನು ಅರ್ಧ ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ ತೆಂಗಿನ ತುರಿ ಹಾಗೂ ಸ್ವಲ್ಪ ಮಜ್ಜಿಗೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಮತ್ತೆ ಸ್ವಲ್ಪ ಮಜ್ಜಿಗೆ, ಉಪ್ಪು, ನೀರು (ಬೇಕಿದ್ದರೆ)ಸೇರಿಸಿ.

ದಾಳಿಂಬೆ ಸಿಪ್ಪೆಯ ತಂಬುಳಿ
ಬೇಕಾಗುವ ಸಾಮಗ್ರಿ: ಒಣಗಿಸಿದ ದಾಳಿಂಬೆ ಸಿಪ್ಪೆ-ಸ್ವಲ್ಪ, ಜೀರಿಗೆ-1 ಚಮಚ, ಕಾಳುಮೆಣಸು-10, ತುಪ್ಪ-1 ಟೀ ಚಮಚ, ಮಜ್ಜಿಗೆ-ಅರ್ಧ ಲೀಟರ್‌, ತೆಂಗಿನ ತುರಿ-ಅರ್ಧ ಕಪ್‌, ಉಪ್ಪು-ರುಚಿಗೆ, ಒಗ್ಗರಣೆಗೆ ತುಪ್ಪ, ಸಾಸಿವೆ, ಒಣ ಮೆಣಸಿನಕಾಯಿ.

ಮಾಡುವ ವಿಧಾನ: ದಾಳಿಂಬೆ ಹಣ್ಣಿನ ಸಿಪ್ಪೆ, ಜೀರಿಗೆ, ಕಾಳುಮೆಣಸನ್ನು ತುಪ್ಪದಲ್ಲಿ ಹುರಿದು, ತೆಂಗಿನ ತುರಿ, ಉಪ್ಪು ಮತ್ತು ಮಜ್ಜಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣ ಮಜ್ಜಿಗೆ ಸೇರಿಸಿ, ಸಾಸಿವೆ ಒಗ್ಗರಣೆ ಕೊಡಿ.

ನೆಲ್ಲಿಕಾಯಿ ತಂಬುಳಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ-ಹತ್ತು, ಮಜ್ಜಿಗೆ- ಎರಡು ಲೋಟ, ತೆಂಗಿನ ತುರಿ, ಉಪ್ಪು, ಹಸಿ ಮೆಣಸು.

ಮಾಡುವ ವಿಧಾನ: ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜವನ್ನು ಬೇರ್ಪಡಿಸಿ, ತೆಂಗಿನ ತುರಿ, ಹಸಿ ಮೆಣಸು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಕಲಕಿ. (ಒಣ ನೆಲ್ಲಿಕಾಯಿಯನ್ನು ಬಳಸುವುದಾದರೆ, ಆದನ್ನು ನೀರಿನಲ್ಲಿ ನೆನೆಸಿಟ್ಟು, ನಂತರ ರುಬ್ಬಬೇಕು.)

ಪುನರ್ಪುಳಿ ತಂಬುಳಿ
ಬೇಕಾಗುವ ಸಾಮಗ್ರಿ: ಪುನರ್ಪುಳಿ- 5 (ಕೋಕಂ ), ತೆಂಗಿನ ತುರಿ- ಒಂದು ಕಪ್‌, ಹಸಿಮೆಣಸು, ಮಜ್ಜಿಗೆ- 1 ಲೋಟ, ಉಪ್ಪು, ಒಗ್ಗರಣೆಗೆ: ಸಾಸಿವೆ, ಎಣ್ಣೆ, ಚಿಟಿಕೆ ಅರಿಶಿಣ.

ಮಾಡುವ ವಿಧಾನ: ಪುನರ್ಪುಳಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಸಿ, ತೆಂಗಿನ ತುರಿ, ಹಸಿ ಮೆಣಸಿನ ಜತೆ ರುಬ್ಬಿ. ಆ ಮಿಶ್ರಣಕ್ಕೆ ಮಜ್ಜಿಗೆ, ಉಪ್ಪು ಹಾಕಿ ಕಲಸಿ. ನಂತರ, ಒಗ್ಗರಣೆ ಕೊಡಿ.

* ಶಾರದಾ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next