Advertisement

ಎರಡೂ ಪಕ್ಷಗಳಲ್ಲಿ ಕಡಿಮೆ ಏನಿಲ್ಲ!

12:24 AM Mar 02, 2023 | Team Udayavani |

ಪುತ್ತೂರು: ಏನಾಗುತ್ತಿದೆ ಪುತ್ತೂರಿನಲ್ಲಿ ? ಇಂಥದೊಂದು ಪ್ರಶ್ನೆ ಈಗ ರಾಜ್ಯ ಮಟ್ಟದಲ್ಲಿ ಕೇಳಿಬರುತ್ತಿದೆ. ಇದುವರೆಗೆ ಕರಾವಳಿಯ ಪ್ರಮುಖ ಕ್ಷೇತ್ರಗಳ ಪಟ್ಟಿಗೆ ಪುತ್ತೂರು ಸೇರಿದ್ದು ತೀರಾ ಅಪರೂಪ. ಈ ಹಿಂದೆ 2008ರಲ್ಲಿ ಬಿಜೆಪಿಯಿಂದ ಹೊರಬಂದು ಪಕ್ಷೇತರರಾಗಿ ಶಕುಂತಲಾ ಶೆಟ್ಟಿ ಸ್ಪರ್ಧಿಸಿದ್ದಾಗ ಜನರ ಗಮನ ಸೆಳೆದಿತ್ತು. ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Advertisement

ಈಗ ಬಿಜೆಪಿ-ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೆರೆಮರೆಯ ಕಾದಾಟ ಜೋರಾಗಿದೆ. ಬಿಜೆಪಿ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲಿಗೆ ಸಂಘ ಪರಿವಾರದವರಿಗೆ, ಹಿಂದೂ ಮುಖಂಡರಿಗೆ ಟಿಕೆಟ್‌ ನೀಡಬೇಕು ಎಂಬ ಆಗ್ರಹ ಕೇಳುತ್ತಾ ಬಂದಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿಯೂ ಮೂಲ ಕಾಂಗ್ರೆಸ್ಸಿಗರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂಬ ಒತ್ತಾಯ ತೀವ್ರಗೊಂಡಿದೆ. ಅದರರ್ಥ ಎರಡೂ ಪಕ್ಷಗಳಲ್ಲಿ ಈಗಿನವರು ಬೇಡ ಎಂಬ ಅಭಿಪ್ರಾಯ ಮೂಡಿದಂತಾಗಿದೆ. ಬಿಜೆಪಿಯಲ್ಲಿ ಸಂಜೀವ ಮಠಂದೂರು ಹಾಗೂ ಕಾಂಗ್ರೆಸ್‌ನ ಹಿಂದಿನ ಸಾರಿಯ ಅಭ್ಯರ್ಥಿ ಶಕುಂತಲಾ ಶೆಟ್ಟಿ ಇಬ್ಬರಿಗೂ ಈ ಮಾತು ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದಕ್ಕಿಂತಲೂ ಮೊದಲ ಕುತೂಹಲ ಎರಡೂ ಪ್ರಮುಖ ಪಕ್ಷಗಳಲ್ಲಿ ಯಾರು ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಾರೆ ಎಂಬುದೇ ದೊಡ್ಡ ಕಾತರ.

ಬಿಜೆಪಿಯಲ್ಲಿಯು ಒಳ ಕಸರತ್ತು..!
ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರವೂ ಆಗಿರುವ ಪುತ್ತೂರಿನಲ್ಲೂ ಪಕ್ಷದೊಳಗೆ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ ಕೆಲವು ದಿನಗಳ ಹಿಂದಷ್ಟೇ ಸಾರ್ವಜನಿಕವಾಗಿಯೂ ಪ್ರಕಟಗೊಂಡಿತ್ತು. ಕಳೆದ ಡಿಸೆಂಬರ್‌ ಅಂತ್ಯದ ತನಕ ಬಿಜೆಪಿಯಲ್ಲಿ ಸಂಜೀವ ಮಠಂದೂರರ ಹೆಸರೇ ಕೇಳಿಬರುತ್ತಿತ್ತು. ಆದರೆ ಈಗ ವಾತಾವರಣ ಆಗಿನಷ್ಟು ತಿಳಿಯಾಗಿಲ್ಲ. ಅಮಿತ್‌ ಶಾ ಪುತ್ತೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಳವಡಿಸಲಾದ ಬ್ಯಾನರ್‌ ಕುರಿತಾಗಿ ಶಾಸಕರು ಬಳಸಿದರು ಎನ್ನಲಾದ ಪದ ಪ್ರಯೋಗ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಹಾಗಾಗಿ ಎರಡು ಬಾರಿಯಿಂದ ಟಿಕೆಟ್‌ ಆಕಾಂಕ್ಷಿತರಾಗಿದ್ದ ಅರುಣ್‌ ಕುಮಾರ್‌ ಪುತ್ತಿಲರ ಪರ ಟ್ವಿಟರ್‌ ಅಭಿಯಾನ ನಡೆಯುತ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ಮತ್ತೊಂದು ಗುಂಪು ಶಾಸಕರ ಪರವಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಚಾರ ಕಾರ್ಯದಲ್ಲಿ ಕಾರ್ಯ ನಿರತವಾಗಿದೆ.

ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್‌ ನೀಡಲು ಅವಕಾಶ ಇರುವುದು ಪುತ್ತೂರಿನಲ್ಲಿ ಮಾತ್ರ. ಇದು ಹಾಲಿ ಶಾಸಕರನ್ನು ನಿರಾಳವಾಗಿಸಿರುವ ಅಂಶ. ಜತೆಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಆಪ್ತ ಬಣದ ಸದಸ್ಯರಲ್ಲಿ ಮಠಂದೂರು ಸಹ ಒಬ್ಬರು. ಆದರೆ ಇವರ ಪರ ಸಂಘ ಪರಿವಾರದವರು ನಿಲ್ಲುವರೇ ಎಂಬುದನ್ನು ಕಾದು ನೋಡಬೇಕು. ಈಗ ಸುಳ್ಯದ ಬಿಜೆಪಿ ಹಿರಿಯ ಮುಖಂಡ ಎಸ್‌.ಎನ್‌. ಮನ್ಮಥ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಹೆಸರೂ ಚಾಲ್ತಿಯಲ್ಲಿದೆ.

ಇನ್ನೊಂದೆಡೆ ಎಸ್‌ಡಿಪಿಐ ಪಕ್ಷದವರು ಈಗಾಗಲೇ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಟಿಕೆಟ್‌ ನೀಡುವು ದಾಗಿ ಘೋಷಣೆ ಮಾಡಿದೆ. ಜೈಲಿನಲ್ಲಿದ್ದು ಕೊಂಡೇ ಸ್ಪರ್ಧೆ ಮಾಡಲಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿತರ ಉದ್ದ ಪಟ್ಟಿ
2013ರಲ್ಲಿ ಪಕ್ಷೇತರರಾಗಿದ್ದ ಶಕುಂತಲಾ ಟಿ. ಶೆಟ್ಟಿ ಕಾಂಗ್ರೆಸ್‌ಗೆ ಸೇರಿ ಗೆದ್ದಿದ್ದರು. ಅವರೇ ಈ ಬಾರಿಯೂ ಆಕಾಂಕ್ಷಿ. ಈ ಮಧ್ಯೆ ಬಿಜೆಪಿಯಲ್ಲಿ ಎರಡು ಬಾರಿ ಟಿಕೆಟ್‌ಗೆ ಪ್ರಯತ್ನಿಸಿದ್ದ ಉದ್ಯಮಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಈಗ ಕಾಂಗ್ರೆಸ್‌ ಪಾಳಯದಲ್ಲಿದ್ದಾರೆ. ಮೂರು ಅವಧಿಯಿಂದ ಪ್ರಬಲ ಆಕಾಂಕ್ಷಿಯಾದ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎ. ಹೇಮನಾಥ ಶೆಟ್ಟಿಯವರೂ ತಮ್ಮ ಪಟ್ಟು ಬಿಟ್ಟಿಲ್ಲ. ಉಳಿದವರಲ್ಲಿ ಅನಿತಾ ಹೇಮನಾಥ ಶೆಟ್ಟಿ, ಧನಂಜಯ ಅಡ³ಂಗಾಯ, ಎಂ.ಬಿ. ವಿಶ್ವನಾಥ ರೈ, ಸತೀಶ್‌ ಕೆಡೆಂಜಿ, ದಿವ್ಯ ಪ್ರಭಾ ಚೆಲ್ತಡ್ಕ ಸೇರಿದಂತೆ ಹದಿನೈದಕ್ಕೂ ಅಧಿಕ ಮಂದಿ ಪ್ರಯತ್ನನಿರತರು. ಸದ್ಯ ಟಿಕೆಟ್‌ಗೆ ಕಣ್ಣಿಗೆ ಕಾಣುತ್ತಿರುವ ಪೈಪೋಟಿ ಎಂದರೆ ಶಕುಂತಲಾ ಟಿ. ಶೆಟ್ಟಿ ಮತ್ತು ಅಶೋಕ್‌ ಕುಮಾರ್‌ ರೈ ನಡುವಿನದ್ದು. ಬ್ಲಾಕ್‌ ಸಮಿತಿ ಶಕುಂತಲಾ ಟಿ. ಶೆಟ್ಟಿ ಪರ ಒಲವು ಹೊಂದಿದ್ದರೂ ಹೇಮನಾಥ ಶೆಟ್ಟಿ ಬಣದ ವಿರೋಧ ಇದೆ. ಹಾಗೆಯೇ ಹೇಮನಾಥ ಶೆಟ್ಟಿ ಸ್ಪರ್ಧೆಗೆ ಬ್ಲಾಕ್‌ ಸಮಿತಿಯ ಎಲ್ಲರ ಸಹಮತ ಇಲ್ಲವೆಂಬ ಅಭಿಪ್ರಾಯವಿದೆ. ಅಶೋಕ್‌ ಕುಮಾರ್‌ ರೈ ಹೊರಗಿನವರಾದ ಕಾರಣ, ಪಕ್ಷದೊಳಗೆ ಅವರ ಪರವಾದ ವಾತಾವರಣ ಇನ್ನಷ್ಟೇ ನಿರ್ಮಾಣವಾಗಬೇಕಿದೆ. ಹಾಗಾಗಿ ರಾಜ್ಯ ಪ್ರಮುಖ ಕಾಂಗ್ರೆಸ್‌ ಮುಖಂಡರ ಚಿತ್ತ ಹಾಗೂ ಹೈಕಮಾಂಡ್‌ ಒಲವು ಯಾರ ಕಡೆಗೆ ವಾಲುವುದೋ ಕಾದು ನೋಡಬೇಕಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next