ರಾಣಿಬೆನ್ನೂರ: ಶರೀರವನ್ನು ಎಲ್ಲರೂ ಹೇಗೆ ಸುಂದರವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆಯೇ ಆತ್ಮ ಸೌಂದರ್ಯ ಕಾಪಾಡಿಕೊಂಡು ಮುನ್ನಡೆದರೆ ಉಜ್ವಲ ಜೀವನ ನಿಮ್ಮದಾಗುತ್ತದೆ. ಶರೀರ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯವೇ ಮಿಗಿಲಾದುದು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಕುರುಬಗೇರಿಯ ಗುರುವಾರ ಪ್ರಾಚೀನ ಶ್ರೀಬನಶಂಕರಿದೇವಿ ದೇವಸ್ಥಾನ ಸಮಿತಿ ವತಿಯಿಂದ 1 ಕೋಟಿ ರೂ.ಗೂ. ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಬನಶಂಕರಿದೇವಿ ದೇವಸ್ಥಾನ ಕಳಸಾರೋಹಣ ನೆರವೇರಿಸಿ ಮಾತನಾಡಿದ ಅವರು, ಸರ್ವರನ್ನೂ ಆತ್ಮ ಸೌಂದರ್ಯದಿಂದ ನೋಡಿದಾಗ ಮಾತ್ರ ಅವರ ನಿಜವಾದ ವ್ಯಕ್ತಿತ್ವ ಹೊರ ಹೊಮ್ಮುತ್ತದೆ ಎಂದು ನುಡಿದರು, ಒಬ್ಬ ವ್ಯಕ್ತಿಯನ್ನು ವ್ಯಾಪಾರಿ, ರಾಜಕಾರಣಿ, ಉದ್ಯಮಿ, ಜಾತಿಯಿಂದ ಎಂದಿಗೂ ನೋಡಬಾರದು.
ಆತನ ಆಚಾರ- ವಿಚಾರ, ನಡೆ-ನುಡಿಯೇ ವ್ಯಕ್ತಿತ್ವದ ಕನ್ನಡಿಯಾಗಿರುತ್ತದೆ. ದೇವಾಂಗದವರನ್ನು ಶ್ರೇಷ್ಠ ಮಟ್ಟದಲ್ಲಿ ಕಾಣಬೇಕು. ಅವರು ಬಟ್ಟೆ ನೇಯದಿದ್ದರೆ ಸರ್ವ ಸಮಾಜದ ಜನರ ಮರ್ಯಾದೆ ಉಳಿಯುತ್ತಿರಲಿಲ್ಲ ಎಂಬುದನ್ನು ಎಲ್ಲರೂ ಅರಿತು ಮುನ್ನಡೆಯಬೇಕು ಎಂದರು.
ಸಾನಿಧ್ಯ ವಹಿಸಿದ್ದ ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಮರಳು, ಕಬ್ಬಿಣ, ಸಿಮೆಂಟ್ ಮತ್ತಿತರೆ ಕಟ್ಟಡ ಸಾಮಗ್ರಿ ಬಳಸದೆ ಕೇವಲ ಶಿಲೆಯಲ್ಲಿಯೇ ಇಲ್ಲಿನ ಬನಶಂಕರಿ ದೇವಸ್ಥಾನ ನಿರ್ಮಿಸಿರುವುದು ವಿಶೇಷ. ಬಾದಾಮಿ, ಬೆಂಗಳೂರು ಹೊರತುಪಡಿಸಿದರೆ ವಾಣಿಜ್ಯ ನಗರಿ ರಾಣಿಬೆನ್ನೂರಿನಲ್ಲಿ ಅಪರೂಪದ ಶಿಲೆಯಲ್ಲಿ ಈ ಬನಶಂಕರಿ ದೇವಸ್ಥಾನ ಕಟ್ಟಿರುವುದು ಹೆಮ್ಮೆ ಪಡುವಂತಹದ್ದು ಎಂದರು.
ದೇಶವನ್ನು ತಲ್ಲಣಿಸಿದ ಮಹಾಮಾರಿ ಕೊರೊನಾ ನಿಯಂತ್ರಿಸಲು ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳು ವಿಫಲವಾಗಿವೆ. ಸಾವು-ನೋವುಗಳು ಇಮ್ಮಡಿಗೊಂಡಿವೆ ಆದರೆ ಹೋಮ, ಹವನ, ಜಪ, ತಪ, ಪೂಜೆ-ಪುನಸ್ಕಾರ ಮಾಡುತ್ತಿರುವ ಈದೇಶದಲ್ಲಿ ಕೊರೋನಾ ಪ್ರಭಾವ ಬೀರಲಿಲ್ಲ. ಆಧ್ಯಾತ್ಮಿಕತೆ, ದೈವೀಶಕ್ತಿ, ಯೋಗ-ಪ್ರಾಣಾಯಾಮಗಳು ಈ ಭರತ ಭೂಮಿಯಲ್ಲಿ ಶಕ್ತಿಗಳಾಗಿ ಮನುಷ್ಯನ ಆರೋಗ್ಯಕ್ಕೆ ಸಂಜೀವಿನಿಯಾಗಿವೆ ಎಂದರು.
ಮಾಜಿ ಸಚಿವ, ಹಾಲಿ ವಿಪ ಸದಸ್ಯ ಆರ್ ಶಂಕರ, ನಗರಸಭೆ ಮಾಜಿ ಸದಸ್ಯ ಮಹೇಶ ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು. ಎನ್‌ಡಡ್ಲ್ಯು ಕೆಆರ್‌ಟಿಸಿ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ, ಮಾಜಿ ಶಾಸಕ ಎನ್.ಕೆ. ಲಕ್ಷಿ ನ್ಮಾ ರಾಯಣ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಅರುಣ ಕುಮಾರ ಪೂಜಾರ, ಬಸವರಾಜ ಲಕ್ಷ್ಮೇಶ್ವರ, ಸಮಿತಿಅಧ್ಯಕ್ಷಮಂಜುನಾಥ ಗೌಡಶಿವಣ್ಣನವರ, ಸಂಕಪ್ಪ ಮಾರನಾಳ, ಕರಬಸಪ್ಪ ಮಾಕನೂರು , ಕುಮಾರ ಹತ್ತಿ, ಜಯಂತ ನಾಯಕ್,
ರುದ್ರಪ್ಪ ಕಮ್ಮಾರ, ಶಿವಪ್ಪ ಹೆದ್ದೇರಿ, ಪ್ರಭಾಕರ ಮುದುಗಲ್ ಸೇರಿದಂತೆ ದೇವಸ್ಥಾನ ಸಮಿತಿಯ ಪದಾ ಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಇದ್ದರು. ಅನಂತರ ಮಹಾಪ್ರಸಾದ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತನು-ಮನ-ಧನ ಸಹಾಯ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.