ಕಳೆದ ವಾರವಷ್ಟೇ “ಕೈವಲ್ಯ’ ಎಂಬ ಸಿನಿಮಾದ ಕುರಿತು ಓದಿದ್ದು ನೆನಪಿರಬಹುದು. ಆ್ಯಂಟನ್ ಚೆಕಾಫ್ ಅವರ “ದಿ ಬೆಟ್’ ಕಥೆಯನ್ನಾಧರಿಸಿದ ಆ ಚಿತ್ರದಲ್ಲಿ ಕೇವಲ ಒಂದೇ ಒಂದು ಪಾತ್ರವಿತ್ತು. ಈಗ ಕನ್ನಡದಲ್ಲಿ ಇನ್ನೊಂದು ಒಂಟಿ ಪಾತ್ರದ ಸಿನಿಮಾ ಆಗಿದೆ ಮತ್ತು ಆ ಚಿತ್ರ ಈ ವಾರ ಸೆಟ್ಟೇರುವುದಕ್ಕೆ ತಯಾರಾಗಿದೆ. ಅದೇ “ಇಲ್ಲ’.
“ಇಲ್ಲ’ ಒಂದೇ ಒಂದು ಪಾತ್ರವಿರುವ ಸಿನಿಮಾ. ಈ ಚಿತ್ರಕ್ಕೆ ರಾಜ್ ಪ್ರಭು ಎನ್ನುವವರು ಕಥೆ ಬರೆದು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರದಲ್ಲಿ ಹೀರೋ ಪಾತ್ರವನ್ನು ಸಹ ಮಾಡಿದ್ದಾರೆ. 115 ನಿಮಿಷಗಳ ಈ ಚಿತ್ರದಲ್ಲಿ ಹಿನ್ನೆಲೆಯಲ್ಲಿ ಒಂದಿಷ್ಟು ಧ್ವನಿ ಕೇಳಿಸಿದರೂ, ಚಿತ್ರದ ಪೂರಾ ಇರುವುದು ಒಂದೃ ಪಾತ್ರವಂತೆ.
ಮೂರು ದಿನಗಳ ಅಂತರದಲ್ಲಿ ನಡೆಯುವ ಈ ಕಥೆಯನ್ನು ಮಾಡಿಕೊಂಡು ರಾಜ್ ಪ್ರಭು ಒಂದಿಷ್ಟು ನಿರ್ಮಾಪಕರನ್ನು ಭೇಟಿ ಮಾಡಿದಾಗ, ಅವರೆಲ್ಲರೂ ಅನುಮಾನದಿಂದ ನೋಡಿದರಂತೆ. ಅದೇ ರಾಜ್‌ಗೆ ಛಲ ತುಂಬಿದೆ. ಮಾಡಿದರೆ ಇದೇ ತರಹದ ವಿಭಿನ್ನ ಚಿತ್ರ ಮಾಡಬೇಕು ಎಂದು ಪಣತೊಟ್ಟ ಅವರು, ಈಗ “ಇಲ್ಲ’ ಮಾಡಿ ಮುಗಿಸಿದ್ದಾರೆ.
ಚಿತ್ರದಲ್ಲಿ ಒಂದೇ ಒಂದು ಪಾತ್ರವಿದ್ದರೂ, ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ ಎನ್ನುತ್ತಾರೆ ರಾಜ್. “ಮೂರು ದಿನಗಳಲ್ಲಿ ನಡೆಯುವ ಕಥೆ ಇದು. ಚಿತ್ರದಲ್ಲಿ ಮಾಟ-ಮಂತ್ರ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ಪಾತ್ರಗಳಿಲ್ಲದಿದ್ದರೂ, ಮನೆಯಲ್ಲಿರುವ ವಸ್ತುಗಳನ್ನಿಟ್ಟುಕೊಂಡು ಕಥೆ ಬೆಳೆಸಿದ್ದೇವೆ. ಮುಂದೇನಾಗಬಹುದು ಎಂದು ಹೇಳುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಸಹಜವಾಗಿರುವ ಒಬ್ಬ ವ್ಯಕ್ತಿ ಅಸಹಜವಾಗಿ ಹೇಗೆಲ್ಲಾ ಆಡುತ್ತಾನೆ ಎನ್ನುವುದು ಕಥೆ. ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿರುವ ಒಂದು ಹಾಡನ್ನು ಎಲ್.ಎನ್. ಶಾಸ್ತ್ರಿ ಅವರಿಂದ ಹಾಡಿಸಿದ್ದೇವೆ. ಅದೇ ಅವರು ಹಾಡಿರುವ ಕೊನೆಯ ಚಿತ್ರ ಇದು’ ಎಂದೆಲ್ಲಾ ವಿವರ ಕೊಡುತ್ತಾರೆ ರಾಜ್ ಪ್ರಭು.
ಈ ಚಿತ್ರವನ್ನು ಶಂಕರ್ ಎನ್ನುವವರು ನಿರ್ಮಿಸಿದ್ದಾರೆ. ಟೆಂಟ್ ಹೌಸ್ ಇಟ್ಟುಕೊಂಡಿರುವ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಕೇಳಿ ಖುಷಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾಗಿ ಶಂಕರ್ ಹೇಳಿಕೊಳ್ಳುತ್ತಾರೆ.