ಮಣಿಪಾಲ/ಕುಂದಾಪುರ: ಅನಕೃ ಪ್ರತಿಷ್ಠಾನದ ಮೊಟ್ಟ ಮೊದಲ ಕಾದಂಬರಿ ಪುರಸ್ಕೃತ ಸಾಹಿತಿ, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜಿ.ಕೆ(ಗೋಪಾಲಕೃಷ್ಣ )ಐತಾಳ್ ಗುರುವಾರ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ 1951ರ ಜೂನ್ 25ರಂದು ಜನಿಸಿದ್ದರು. ತಂದೆ ಸೂರ್ಯನಾರಾಯಣ ಐತಾಳ್, ತಾಯಿ ಲಕ್ಷ್ಮೀದೇವಿ. ತಂದೆ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಜಿಕೆ ಐತಾಳರು ಕೋಟೇಶ್ವರದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದು ನಂತರ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿದ್ದರು. ಕರ್ನಾಟಕ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ವೃತ್ತಿ ಆರಂಭ. ಕಲೆ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದ ಜಿಕೆ ಹವ್ಯಾಸಿ ಬರಹಗಾರರಾಗಿ ಅಂದಿನ ನವಭಾರತ ಪತ್ರಿಕೆಯಲ್ಲಿ ಕಡಲ ತಡಿಯ ಕಲಾವಿದರು ಎಂಬ ಲೇಖನ ಬರೆದಿದ್ದರು.
ಉದಯವಾಣಿ, ತರಂಗ ಸೇರಿದಂತೆ ನಾಡಿನ ಪ್ರಸಿದ್ಧ ಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಆಯ್ದ ಕಥಾ ಸಂಕಲನ ಕಡಲ ತಡಿಯ ಕಥೆಗಳು ಪ್ರಕಟಗೊಂಡಿತ್ತು. ಸಮರ್ಪಣ, ಕಾಟುಮೂಲೆ ಎಸ್ಟೇಟ್ ಧಾರವಾಹಿಯಾಗಿ ಪತ್ರಿಕೆಗಳಲ್ಲಿ ಮೂಡಿಬಂದಿತ್ತು. ಕುಜ ಕಾದಂಬರಿ ತುಷಾರದಲ್ಲಿ, ಮಿನುಗು, ಮಿನುಗೆಲೆ ನಕ್ಷತ್ರ ಕಾದಂಬರಿ ತರಂಗ ವಾರಪತ್ರಿಕೆಯಲ್ಲಿ, ಮೇರೆ ಭಾರತ್ ಮಹಾನ್ ಕಾದಂಬರಿ ಉದಯವಾಣಿ ದೈನಿಕದಲ್ಲಿ ಧಾರವಾಹಿಯಾಗಿ ಪ್ರಕಟವಾಗಿತ್ತು.
ಕುಜ ಕಾದಂಬರಿಯು ತುಷಾರ ಮಾಸ ಪತ್ರಿಕೆ ವಿಂಶತಿ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿತ್ತು. ಅಲ್ಲದೇ ಕಾದಂಬರಿ ಕ್ಷೇತ್ರಕ್ಕಾಗಿ ಅನಕೃರವರು ನೀಡಿದ ಶ್ರೇಷ್ಠ ಕೊಡುಗೆಯ ಕುರುಹಾಗಿ ಕಾದಂಬರಿಕಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಸ್ಥಾಪಿಸಿದ ಮೊಟ್ಟ ಮೊದಲ ಪ್ರಶಸ್ತಿಯನ್ನು ಜಿಕೆ ಐತಾಳರು ಪಡೆದಿದ್ದರು.
ಕಥೆ, ಕಾದಂಬರಿ, ಧಾರವಾಹಿ ಹಾಗೂ ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದರು. ಅಖಿಲ ಕರ್ನಾಟಕ ನಾಟಕ ಸ್ಪರ್ಧೆಯಲ್ಲಿ ನಾವಿಲ್ಲದಾಗ ನಾಟಕಕ್ಕೆ 9 ಪ್ರಶಸ್ತಿಗಳು ಸಂದಿರುವುದು ಜಿಕೆ ಐತಾಳರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಅಷ್ಟೇ ಅಲ್ಲ ಗುಡ್ ಬೈ ಡಾಕ್ಟರ್ ನಾಟಕಕ್ಕೆ 3 ಪ್ರಶಸ್ತಿ, ಥ್ಯಾಂಕ್ಯೂ ಮಿ. ಗ್ಲಾಡ್ ನಾಟಕಕ್ಕೆ 6 ಪ್ರಶಸ್ತಿಗಳು ಐತಾಳರ ಮುಡಿಗೇರಿದ್ದವು.
2002ರಲ್ಲಿ ಜೀವಮಾನ ಸಾಧನೆಗಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ (ಬೆಂಗಳೂರು) ಪ್ರಶಸ್ತಿಗೆ ಭಾಜನರಾಗಿದ್ದರು.