Advertisement

ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆಗೆ ಸೂಚನೆ

02:48 PM Mar 05, 2017 | Team Udayavani |

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಮೀಸಲಿಟ್ಟ ಅನುದಾನವನ್ನು ನಿಗದಿತ ಅವಧಿಯೊಳಗೆ ಶೇ.100 ರಷ್ಟು ಖರ್ಚು ಮಾಡಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಹಾಗೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2016-17ನೇ ಸಾಲಿನ ಫೆಬ್ರುವರಿ-2017ರ ಅಂತ್ಯಕ್ಕೆ ಸಾಧಿಸಿದ ಪರಿಶಿಷ್ಟ ಜಾತಿ ಉಪಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಪ್ರತಿ ವರ್ಷ ನೀಡುವ ವಿಶೇಷ ಅನುದಾನವು ನ್ಯಾಯಯುತವಾಗಿ ಆಯಾ ಸಮುದಾಯದ ಜನತೆಗೆ ತಲುಪಬೇಕು.

ಈ ವಿಶೇಷ ಅನುದಾನ ಕಾಲಮಿತಿಯೊಳಗೆ ಬಳಸುವ ಹೊಣೆ ಆಯಾ ಇಲಾಖೆಯ ಅನುಷ್ಠಾನಾಧಿಕಾರಿಗಳ ಮೇಲಿದೆ. ನಿಯಮದಂತೆ ಮೀಸಲಿಟ್ಟ ಅನುದಾನವು ನಿಗದಿತ ಅವಧಿಯಲ್ಲಿ ಬಳಸದೇ ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಇದಕ್ಕಾಗಿಯೇ ವಿಧಾನ ಮಂಡಳ ಅಧಿವೇಶನದಲ್ಲಿ ವಿಶೇಷ ಕಾಯ್ದೆ ರೂಪಿಸಿ ಜಾರಿಗೊಳಿಸಲಾಗಿದೆ.

ಈ ಯೋಜನೆಯ ಅನುದಾನವನ್ನು ನಿಗದಿತ ಯೋಜನೆಗಳಿಗೆ ಮಾತ್ರ ಬಳಸಬೇಕು. ಬೇರೆ ಯೋಜನೆಗಳಿಗೆ ಬಳಸುವಂತಿದ್ದರೆ ಸರ್ಕಾರದ ಆದೇಶದಂತೆ ಬಳಸಬೇಕು ಅಧಿಕಾರಿಗಳಿಗೆ ಎಚ್ಚರಿಸಿದರು. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಎಸ್‌.ಸಿ.ಮತ್ತು ಎಸ್‌.ಟಿ. ಸಮುದಾಯದವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೇ.100ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಲು ಆಯಾ ಇಲಾಖಾ ಮುಖ್ಯಸ್ಥರು ವೈಯಕ್ತಿಕ ಗಮನ ಹರಿಸಬೇಕು.

ಸರಿಯಾಗಿ ಮಾಹಿತಿ ಒದಗಿಸದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಪ್ರಗತಿ ವರದಿ ಸಲ್ಲಿಸುವಾಗ ಅಂಕಿ ಸಂಖ್ಯೆಗಳನ್ನು ಸರಿಯಾಗಿ ನೀಡಬೇಕು. ಯೋಜನೆಯ ಪ್ರಗತಿ ವಿವರ ಸೇರಿದಂತೆ ಇನ್ನಿತರ ವಿಷಯಗಳ ಮಾಹಿತಿಯನ್ನುಆಗಾಗ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಗಮನಕ್ಕೆ ತರಬೇಕು ಎಂದು ತಿಳಿಸಿದರು. 

Advertisement

ಎಸ್‌.ಸಿ. ಮತ್ತು ಎಸ್‌.ಟಿ. ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ವಾಸಿಸುವ ಮನೆ, ಕುಡಿಯುವ ನೀರು, ವಿದ್ಯುತ್‌, ರಸ್ತೆ ಮತ್ತು ಚರಂಡಿ ಮುಂತಾದ ಮೂಲಭೂತ ಅವಶ್ಯಕತೆ ಪೂರೈಸುವುದು ಎಲ್ಲ ಅಧಿಕಾರಿಗಳ ಮಹತ್ತರ ಜವಾಬ್ದಾರಿಯಾಗಿದೆ. ಈ ಸಮುದಾಯವರಿಗಾಗಿ ಅನುಷ್ಠಾನಗೊಳಿಸುವ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ಒದಗಿಸುವ ಫಲಕಗಳನ್ನು ಅಳವಡಿಸಬೇಕು ಎಂದು ಹೇಳಿದರು.  

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ 2016-17ನೇ ಸಾಲಿನಲ್ಲಿ ಎಸ್‌.ಸಿ.ಪಿ., ಟಿ.ಎಸ್‌.ಪಿ. ಯೋಜನೆಗಳಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ವರ್ಷದ ಅಂತ್ಯದೊಳಗಾಗಿ ಸಮರ್ಪಕವಾಗಿ ಹಾಗೂ ನಿಗದಿತ ಯೋಜನೆಗಳಿಗೆ ಸಂಪೂರ್ಣ ಬಳಕೆ ಮಾಡಬೇಕೆಂದು ಯೋಜನೆ ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next