ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಬೇಸಿಗೆ ರಜೆ ಕಳೆದು ಒಂದೆಡೆ ಶಾಲಾ, ಕಾಲೇಜುಗಳ ಆರಂಭಕ್ಕೆ ದಿನಗಣನೆ ಶುರುವಾದರೆ, ಮತ್ತೂಂದೆಡೆ ವಿದ್ಯಾರ್ಥಿಗಳಿಗೆ ವರ್ಷವಿಡೀ ಶೈಕ್ಷಣಿಕ ಅಧ್ಯಯನಕ್ಕೆ ಬೇಕಾದ ನೋಟ್ ಬುಕ್‌ಗಳ ದರ ಸಮರ ಮಾರುಕಟ್ಟೆಯಲ್ಲಿ ವಿದ್ಯಾರ್ಥಿ ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಹೌದು, ಜಿಲ್ಲಾದ್ಯಂತ ಸರ್ಕಾರಿ, ಅನುದಾನಿತ ಶಾಲಾ, ಕಾಲೇಜುಗಳ ಸಂಖ್ಯೆ 3,000 ಸಾವಿರಕ್ಕೂ ಅಧಿಕವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ ಒಂದೂವರೆ ಲಕ್ಷದಷ್ಟು ದಾಟಿದೆ. ಆದರೆ ಮಕ್ಕಳಿಗೆ ಬೇಕಾದ ನೋಟ್‌ಬುಕ್ ಪ್ರತಿ ವರ್ಷ ಬೆಲೆ ಏರಿಸಿಕೊಂಡು ಪೋಷಕರನ್ನು ಹಿಂಡುತ್ತಿವೆ
.
10, 15 ಪುಸ್ತಕ ಈಗ 30, 40 ರೂ.!: ಈ ಹಿಂದೆ ಸುಲಭವಾಗಿ ವಿದ್ಯಾರ್ಥಿ ಪೋಷಕರ ಕೈಗೆ ಎಟುಕತ್ತಿದ್ದ ನೋಟ್‌ಬುಕ್‌ಗಳು ಕ್ರಮೇಣ ತನ್ನ ಬೆಲೆ ಹೆಚ್ಚಿಸಿಕೊಂಡು ಪೋಷಕರನ್ನು ಕಂಗಾಲಾಗಿಸುತ್ತಿವೆ. 100 ಪುಟದ 1 ನೋಟ್ ಬುಕ್ ಹಿಂದೆ 10, 15ಕ್ಕೆ ಸಿಗುತ್ತಿತ್ತು. ಆದರೆ ಈಗ 30, 40 ರೂ. ದಾಟಿದೆ. ಕನಿಷ್ಠ ಒಬ್ಬ ವಿದ್ಯಾರ್ಥಿಗೆ ಸರ್ಕಾರಿ ಶಾಲೆ ಆದರೆ 10, 15 ನೋಟ್ ಬುಕ್ ಬೇಕಾಗುತ್ತದೆ. ಖಾಸಗಿ ಶಾಲೆಗಳು ಆದರೆ 30 ರಿಂದ 40 ಪುಸ್ತಕ ಬೇಕಾಗುತ್ತದೆ. ಕನಿಷ್ಠ ಒಬ್ಬ ವಿದ್ಯಾರ್ಥಿಗೆ ನೋಟ್ ಬುಕ್ ಖರೀದಿಸಿ ಕೊಡಬೇಕಾದರೆ ಪೋಷಕರು 1,500 ರಿಂದ 2000 ರೂ. ವರೆಗೂ ಬೆಲೆ ತೆತ್ತಬೇಕಿದೆ. ಮನೆಯಲ್ಲಿ ಇಬ್ಬರು, ಮೂವರು ಮಕ್ಕಳಿದ್ದರೆ ನೋಟ್‌ಬುಕ್‌ಗೆ ಕನಿಷ್ಠ 10, 15 ಸಾವಿರ ರೂ. ವೆಚ್ಚ ಮಾಡಬೇಕಿದೆ. ಇನ್ನೂ ಮಾರುಕಟ್ಟೆಯಲ್ಲಿ ನೋಟ್‌ಬುಕ್ ಮಾರಾಟ ಕಂಪನಿಗಳ ಹೆಸರ ಮೇಲೆ ಬೆಲೆ ಹೆಚ್ಚಾಗುತ್ತದೆ. ಕೆಲ ಪೋಷಕರು ಪ್ರತಿಷ್ಠೆಗೆ ಮಣಿದು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಹಿಂದೆ ಮುಂದೆ ನೋಡದೇ ದುಬಾರಿ ಹಣ ಕೊಟ್ಟು ನೋಟ್‌ಬುಕ್ ಗಳನ್ನು ಖರೀದಿಸುತ್ತಿದ್ದಾರೆ.
ಖಾಸಗಿ ಶಾಲೆಗಳ ಒತ್ತಡ: ವಿದ್ಯಾರ್ಥಿ ಪೋಷಕರು ಹೇಗೋ ಸಾಲ ಸೋಲ ಮಾಡಿ ಹೊರಗೆ ಮಾರುಕಟ್ಟೆಯಲ್ಲಿ ನೋಟ್ ಬುಕ್ ಖರೀದಿಗೆ ಮುಂದಾದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅದಕ್ಕೂ ಅವಕಾಶ ಕೊಡದೇ ನಮ್ಮ ಶಾಲೆಗಳಲ್ಲೇ ಎಲ್ಲವನ್ನು ಖರೀದಿಸಿ ಅಂತ ನೋಟ್‌ಬುಕ್‌ಗಳ ಹೆಸರಲ್ಲೂ ಕೂಡ ಹಗಲು ದರೋಡೆಗೆ ಇಳಿದಿವೆ. ಹೀಗಾಗಿ ಅನಿವಾರ್ಯವಾಗಿ ಪೋಷಕರು ಮಾರುಕಟ್ಟೆಯಲ್ಲಿ ನೋಟ್‌ಬುಕ್ ಖರೀದಿ ಮಾಡದೇ ಬಲವಂತದಿಂದ ಖಾಸಗಿ ಶಾಲೆಗಳಲ್ಲಿ ಸಾವಿರಾರು ರೂ. ಕೊಟ್ಟು ಬುಕ್‌ಗಳನ್ನು ಖರೀದಿಸುವಂತಾಗಿದೆ.
ಮಾರುಕಟ್ಟೆಯಲ್ಲಿ ಕಳಪೆ ನೋಟ್‌ಬುಕ್ ಮಾರಾಟ!: ಒಂದೆಡೆ ವಿದ್ಯಾರ್ಥಿ ಪೋಷಕರ ಬೇಡಿಕೆ ನೋಡಿಕೊಂಡು ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ನೋಟ್‌ಬುಕ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಗುಣಮಟ್ಟದ ನೋಟ್ ಬುಕ್ ಖರೀದಿಸಲು ಸಾಧ್ಯವಾಗದ ಪೋಷಕರು ಕಡಿಮೆ ಬೆಲೆಗೆ ಸಿಗುವ ನೋಟ್‌ಬುಕ್ ಕೇಳಿದರೆ ಅತ್ಯಂತ ಕಳಪೆ ಗುಣಮಟ್ಟದ ನೋಟ್‌ಬುಕ್ ಗಳನ್ನು ಪುಸ್ತಕ ಮಾರಾಟಗಾರರು ಕಡಿಮೆ ಬೆಲೆ ಹೆಸರಲ್ಲಿ ಗುಣಮಟ್ಟ ಇಲ್ಲದ ನೋಟ್ ಬುಕ್ ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಪುಸ್ತಕ ವಿತರಿಸುವ ಸಮಾಜ ಸೇವಕರು ನಾಪತ್ತೆ!: ಚುನಾವಣೆಗೂ ಮೊದಲು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ಸೇರಿದಂತೆ ಲೇಖನಿ ಸಾಮಗ್ರಿಗಳ ವಿತರಣೆಗೆ ಪೈಪೋಟಿಗೆ ಇಳಿದಿದ್ದ ಸಮಾಜ ಸೇವಕರು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮುಗಿಯುತ್ತಿದ್ದಂತೆ ಕ್ಷೇತ್ರಗಳಲ್ಲಿ ನಾಪತ್ತೆ ಆಗಿದ್ದಾರೆ. ಹೀಗಾಗಿ ಸರ್ಕಾರಿ ಶಾಲಾ ಮಕ್ಕಳು ಕೂಡ ಮಾರುಕಟ್ಟೆಯಲ್ಲಿ ದುಬಾರಿ ಹಣ ಕೊಟ್ಟು ವರ್ಷಕ್ಕೆ ಬೇಕಾದ ನೋಟ್‌ಬುಕ್‌ಗಳನ್ನು ಖರೀದಿಸುವ ಸಂಕಷ್ಟ ಎದುರಾಗಿದೆ.
ಸರ್ಕಾರ ಕೇವಲ ಪಠ್ಯಪುಸ್ತಕಗಳ ಜೊತೆಗೆ ಸಮವಸ್ತ್ರ ಮಾತ್ರ ವಿತರಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೋಟ್‌ಬುಕ್‌ಗಳ ದರ ವಿಪರೀತ ಏರಿಕೆ ಆಗಿದೆ. 83 ಪುಟದ ನೋಟ್‌ಬುಕ್ 25 ರಿಂದ 30 ರೂ.ಗೆ ಮಾರಾಟ ಆಗುತ್ತಿದೆ. ನೋಟ್‌ಬುಕ್‌ಗಳ ಜೊತೆಗೆ ಇತರೆ ಲೇಖನಿ ಸಾಮಗ್ರಿಗಳ ಬೆಲೆ ಕೂಡ ದುಬಾರಿ ಆಗಿದೆ.
– ಸೌಭಾಗ್ಯ ಲಕ್ಷ್ಮೀ, ವಿದ್ಯಾರ್ಥಿ ಪೋಷಕರು, ಚಿಕ್ಕಬಳ್ಳಾಪುರ
–ಕಾಗತಿ ನಾಗರಾಜಪ್ಪ