Advertisement

ನೋಟು ಅಪನಗದೀಕರಣ: ತಗ್ಗಿದ ಎಟಿಎಂ ಬಳಕೆ

05:25 PM Nov 08, 2017 | |

ಶಿವಮೊಗ್ಗ: ಕೇಂದ್ರ ಸರ್ಕಾರ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟು ಅಮಾನ್ಯಿಕರಣಗೊಳಿಸಿ ನ. 8 ಕ್ಕೆ ಭರ್ತಿ ಒಂದು ವರ್ಷ. ನೋಟು ಅಮಾನ್ಯಿಕರಣದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ನಗದು ರಹಿತ ವ್ಯವಹಾರ ಜಿಲ್ಲೆಯಲ್ಲಿ ಶೇ. 30 ರಿಂದ 35 ರಷ್ಟು ಹೆಚ್ಚಳವಾಗಿದೆ! ಇದೇ ವೇಳೆ ಎಟಿಎಂ ಬಳಕೆ ಕಡಿಮೆಯಾಗುತ್ತಿದೆ ಎಂಬುದು ಗಮನಾರ್ಹ.

Advertisement

ನೋಟು ಅಮಾನ್ಯಿಕರಣಗೊಂಡ ಬಳಿಕ ಆರಂಭದಲ್ಲಿ ಜನತೆ ಹಾಗೂ ವ್ಯಾಪಾರಿಗಳು ತೊಂದರೆಗೆ ಸಿಲುಕಿದ್ದರಾದರೂ ಕ್ರಮೇಣ ಸುಧಾರಣೆ ಕಂಡು ಬರುತ್ತಿದೆ. ಜನರು ಆನ್‌ಲೈನ್‌ ವ್ಯವಹಾರದತ್ತ ಗಮನ ಜಾಸ್ತಿ ಹರಿಸಿದ್ದಾರೆ. ಜಿಲ್ಲೆಯಲ್ಲಿ ನಗದು
ರಹಿತ ವ್ಯವಹಾರ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗತೊಡಗಿದೆ. ಗಮನಿಸಬೇಕಾದ ಅಂಶವೇನೆಂದರೆ 45-50 ವಯೋಮಾನದೊಳಗಿನವರು ನಗದು ರಹಿತ ವ್ಯವಹಾರದಲ್ಲಿ ಹೆಚ್ಚಾಗಿ ಆಸಕ್ತಿ ತೋರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇದರಿಂದ ಪಾರದರ್ಶಕ ವ್ಯವಹಾರ ಸಾಧ್ಯವಾಗಲಿದೆ ಸರ್ಕಾರಕ್ಕೆ ಆದಾಯ ಕೂಡ ಹೆಚ್ಚಳವಾಗಲಿದೆ.

ಎಟಿಎಂ ಬಳಕೆ ಕುಸಿತ: ನೋಟು ಅಮಾನ್ಯಿಕರಣದ ಬಳಿಕ ಎಟಿಎಂ ಬಳಕೆಯಲ್ಲಿ ಕುಸಿತ ಕಾಣಿಸಿದೆ. ಶೇ. 40 ರಿಂದ 45 ರಷ್ಟು ಗ್ರಾಹಕರು ಎಟಿಎಂ ಬಳಕೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂದು ಲೀಡ್‌ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪರಾದ ಸಾಲೋಮನ್‌ ಮೆನೆಜಸ್‌ ಹೇಳುತ್ತಾರೆ. ನಗದು ಪಡೆಯಲು ಗ್ರಾಹಕರು ಬ್ಯಾಂಕುಗಳಿಗೆ ಹಾಗೂ ಎಟಿಎಂ ಕೇಂದ್ರಕ್ಕೆ ಎಡತಾಕದೆ, ಆನ್‌ಲೈನ್‌, ಇಂಟರ್ನೆಟ್‌, ಮೊಬೈಲ್‌ ಆ್ಯಪ್‌ ಬಳಸಿ ನಗದು ರಹಿತ ವ್ಯವಹಾರ ಮಾಡತೊಡಗಿದ್ದಾರೆ. ಆದರೆ ಇದುವರೆಗೆ
ಎಟಿಎಂ ಕೇಂದ್ರಗಳನ್ನು ಕಡಿಮೆ ಮಾಡಿಲ್ಲ. ಹಿಂದಿನಂತೆ ಎಲ್ಲ ಎಟಿಎಂಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಎಟಿಎಂ ಕೇಂದ್ರಗಳನ್ನು ಕಡಿತ ಮಾಡುವ ಉದ್ದೇಶ ಕೂಡ ಇಲ್ಲ. ಆರ್‌ಬಿಐನಿಂದ ಕೂಡ ಅಂತಹ ಯಾವುದೇ ಸುತ್ತೋಲೆ ಬಂದಿಲ್ಲ ಎನ್ನುತ್ತಾರೆ.

ಸದ್ಯದ ಪರಿಸ್ಥಿತಿಯಲ್ಲಿ ಎಟಿಎಂಗಳಿಲ್ಲದೆ ಜನ ಜೀವನ ಸಾಧ್ಯವಿಲ್ಲ. ಇನ್ನು ನೋಟು ಅಮಾನ್ಯಿಕರಣಗೊಂಡಿದ್ದ ಸಂದರ್ಭದಲ್ಲಿ ಜನರಿಗೆ ಕೆಲವು ದಿನ ತೊಂದರೆಯಾಗಿತ್ತು ನಿಜ. ಇದೀಗ ಸಾಕಷ್ಟು ಸುಧಾರಣೆಯಾಗಿದೆ. ಮುಂದಿನ ಒಂದು ವರ್ಷದಲ್ಲಿ ಎಲ್ಲವೂ ಒಂದು ಹಂತಕ್ಕೆ ಬರುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ನಗದು ರಹಿತ ವ್ಯವಹಾರಕ್ಕೆ ಹೆಚ್ಚಾಗಿ ನಡೆಯಬೇಕು ಎಂಬ ಉದ್ದೇಶದಿಂದ ಹಿಂದಿನಂತೆ ಎಟಿಎಂ ಕೇಂದ್ರಗಳಿಗೆ ಹೆಚ್ಚಾಗಿ ಹಣ ಪೂರೈಕೆ ಮಾಡುತ್ತಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳೇ ತಿಳಿಸುತ್ತಾರೆ.

ಅರಿವು ಮೂಡಿಸುವ ಕಾರ್ಯಕ್ರಮ:
ನಗದು ರಹಿತ ವ್ಯವಹಾರ ಕುರಿತು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಬಾರ್ಡ್‌, ವಿವಿಧ ಬ್ಯಾಂಕುಗಳ ಸಹಕಾರದಲ್ಲಿ ಹಣಕಾಸು ಮಾಹಿತಿ ನೀಡುವ ತಂತ್ರಜ್ಞರು ನೀಡುತ್ತಾ ಬಂದಿದ್ದಾರೆ. ನಗದು ರಹಿತ ವ್ಯವಹಾರ ಹೆಚ್ಚಾಗಿ ನಡೆಯಬೇಕು. ಇದು ಸರ್ಕಾರದ ಉದ್ದೇಶ ಎನ್ನುತ್ತಾರೆ ಸಾಲೋಮನ್‌ ಮೆನೆಜಸ್‌. 100 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳ ಕೊರತೆ ಇದೆ. 200 ರೂ. ಮುಖಬೆಲೆಯ ನೋಟು ನೂತನವಾಗಿ ಮುದ್ರಣಗೊಳ್ಳುತ್ತಿದೆ. ಕ್ರಮೇಣ ಗ್ರಾಹಕರಿಗೆ ದೊರಕಲಿದೆ. 100 ರೂ. ಮುಖಬೆಲೆಯ ನೋಟುಗಳ ಬದಲಾವಣೆ ಸಾಧ್ಯತೆ ಇದೆ. ಹೀಗಾಗಿ ಹೊಸದಾಗಿ ಪೂರೈಕೆಯಾಗುತ್ತಿಲ್ಲ ಎನ್ನುತ್ತಾರೆ ಅವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next