Advertisement
ಆದರೆ, ಹಿಂದಿನ ಸರ್ಕಾರ ಘೋಷಿಸಿದ ಕೃಷಿ ಸಾಲವೇ ಇನ್ನೂ ಮನ್ನಾ ಆಗಿಲ್ಲ! ಹಿಂದಿನ ಸರ್ಕಾರವು ಸಹಕಾರಿ ಸಂಘಗಳಲ್ಲಿನ 22 ಲಕ್ಷ ರೈತರ 8,165 ಕೋಟಿ ರೂ. ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇದುವರೆಗೆ ಮನ್ನಾ ಆಗಿದ್ದು 14 ಲಕ್ಷ ರೈತರ 4,967 ಕೋಟಿ ರೂ. ಮಾತ್ರ. ಸಾಲಮನ್ನಾಕ್ಕೆ ಜೂನ್ 20 ಕೊನೆಯ ದಿನವಾಗಿದ್ದು, ಇನ್ನೂ ಸುಮಾರು 6ರಿಂದ 8 ಲಕ್ಷ ರೈತರು ಅವಕಾಶ ವಂಚಿತರಾಗುವ ಸಾಧ್ಯತೆ ಇದೆ.
Related Articles
Advertisement
50 ಸಾವಿರ ಯಾರು ಕಳೆದುಕೊಳ್ತಾರೆ?“8,165 ಕೋಟಿಯಲ್ಲಿ ಈಗಾಗಲೇ 6,200 ಕೋಟಿ ರೂ.ಗಳಷ್ಟು ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 4,967 ಕೋಟಿ ರೂ. ಹಣ ಬಿಡುಗಡೆ ಆಗಿದ್ದು, 14 ಲಕ್ಷ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಇನ್ನೂ ಐದು ದಿನ ಬಾಕಿ ಇರುವುದರಿಂದ ಬಹುತೇಕ ಎಲ್ಲರೂ ಕೊನೆಕ್ಷಣದಲ್ಲಿ ಬಂದು ಪಾವತಿಸುತ್ತಾರೆ. ಸಾಮಾನ್ಯವಾಗಿ ಯಾರೊಬ್ಬರೂ 50 ಸಾವಿರ ರೂ. ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಅಭಿವೃದ್ಧಿ) ಜಂಗಮಪ್ಪ ಹೇಳುತ್ತಾರೆ. “ಕೆಲವು ಪ್ರದೇಶಗಳಲ್ಲಿ ಬೆಳೆ ತಡವಾಗಿ ಕೈಗೆ ಬರುತ್ತದೆ. ಕೊಡಗು ಸೇರಿದಂತೆ ಹಲವೆಡೆ ಏಪ್ರಿಲ್-ಮೇನಲ್ಲಿ ಇಳುವರಿ ಬಂದಿದೆ. ಹಾಗಾಗಿ, ರೈತರು ಬಾಕಿ ಹಣ ಪಾವತಿಸುವುದು ತಡವಾಗಿರುತ್ತದೆ. ಸರ್ಕಾರದ ಹಣ ಬಿಡುಗಡೆಯಲ್ಲಿ ಯಾವುದೇ ರೀತಿ ವಿಳಂಬ ಆಗಿಲ್ಲ. ನಿಗದಿತ ಅವಧಿಯೊಳಗೆ ಹೆಚ್ಚು-ಕಡಿಮೆ ಎಲ್ಲರ ಸಾಲವೂ ಮನ್ನಾ ಆಗುತ್ತದೆ. ತೀರಾ ಎಂದರೆ 300 ಕೋಟಿ ಉಳಿಯಬಹುದಷ್ಟೇ’ ಎಂದು ಸಹಕಾರ ಸಂಘಗಳ ಅಪರ ನಿಬಂಧಕರಾದ ಕೆ.ಎಂ. ಆಶಾ ಅಭಿಪ್ರಾಯಪಡುತ್ತಾರೆ. ಸಾಲದ ಬೇಡಿಕೆ; ಒತ್ತಡದಲ್ಲಿ ಸೊಸೈಟಿಗಳು
ಈ ಮಧ್ಯೆ ಕೆಲವು ಸೊಸೈಟಿಗಳಲ್ಲಿ ಸಾಲಮನ್ನಾ ಮಾಡಿದ್ದರೂ, ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಇದರಿಂದ ಹೊಸದಾಗಿ ರೈತರಿಗೆ ಸಾಲ ನೀಡಲು ಪರದಾಡುವಂತಾಗಿದೆ. “ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿದ ಸಾಲಮನ್ನಾದ ಮೊತ್ತ ಬಿಡುಗಡೆ ಆಗಿಲ್ಲ. ಇತ್ತ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ಸಾಲಮನ್ನಾ ಬೆನ್ನಲ್ಲೇ ಹೊಸ ಸಾಲಕ್ಕೆ ಬೇಡಿಕೆ ಬರುತ್ತಿದೆ. ಆದರೆ, ಸೊಸೈಟಿಯಲ್ಲಿ ಹಣ ಇಲ್ಲ. ಇದು ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದು ಹೆಸರು ಹೇಳಲಿಚ್ಛಿಸದ ಧಾರವಾಡದ ಸೊಸೈಟಿಯೊಂದರ ಕಾರ್ಯದರ್ಶಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. * 8,165 ಕೋಟಿ ರೂ. ಸಹಕಾರಿ ಸಂಘಗಳ ಸಾಲಮನ್ನಾ ಮೊತ್ತ
* 22 ಲಕ್ಷ ಸಾಲಮನ್ನಾ ಫಲಾನುಭವಿಗಳು
* 16 ಲಕ್ಷ ರೈತರು 50 ಸಾವಿರಕ್ಕಿಂತ ಕಡಿಮೆ ಸಾಲ ಹೊಂದಿದವರು
* 6 ಲಕ್ಷ ರೈತರು 50 ಸಾವಿರಕ್ಕಿಂತ ಹೆಚ್ಚು ಸಾಲ ಪಡೆದವರು
* 6,200 ಕೋಟಿ ರೂ. ಸಾಲಮನ್ನಾ ಸಂಬಂಧದ ಬಿಲ್ ಸರ್ಕಾರಕ್ಕೆ ಸಲ್ಲಿಕೆ
* 4,967 ಕೋಟಿ ರೂ. ಬಿಡುಗಡೆಯಾದ ಮೊತ್ತ
* 14 ಲಕ್ಷ ರೈತರು ಇದುವರೆಗಿನ ಫಲಾನುಭವಿಗಳು – ವಿಜಯಕುಮಾರ್ ಚಂದರಗಿ